ಕುಶಾಲನಗರ ಪುರಸಭೆಯ 2026 - 27ನೇ ಸಾಲಿನ ಬಜೆಟ್ ಮಂಡನೆಯ ಪೂರ್ವಭಾವಿ ಸಭೆಯಲ್ಲಿ ಕುಡಾ ಮಾಜಿ ಅಧ್ಯಕ್ಷ ಎಂ.ಎಂ. ಚರಣ್, ಮಾಜಿ ಸದಸ್ಯರು ಮತ್ತಿತರರು ಹಾಜರಿದ್ದರು.
ಕುಶಾಲನಗರ: ಇಲ್ಲಿನ ಪುರಸಭೆಯ 2026-27ನೇ ಸಾಲಿನ ಬಜೆಟ್ ಮಂಡನೆಯ ಪೂರ್ವಭಾವಿ ಸಭೆ ಪುರಸಭೆಯ ಆಡಳಿತಾಧಿಕಾರಿಗಳೂ ಆದ ಕೊಡಗು ಜಿಲ್ಲೆಯ ಉಪವಿಭಾಗಾಧಿಕಾರಿ ನಿತಿನ್ ಚಕ್ಕಿ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.
ನಗರದಲ್ಲಿ ಹೆಚ್ಚಿನ ಶಾಲಾ, ಕಾಲೇಜುಗಳು ಇರುವುದರಿಂದ ವಿದ್ಯಾರ್ಥಿಗಳಿಗೆ ಪ್ರಯೋಜನವಾಗುವಂತೆ ಅತ್ಯಾಧುನಿಕ ಶೈಲಿಯ ಗ್ರಂಥಾಲಯ ನಿರ್ಮಾಣ ಮಾಡುವಂತೆ ನಿತಿನ್ ಅವರು ಮುಖ್ಯಾಧಿಕಾರಿಗೆ ಸಲಹೆ ನೀಡಿದರು. ಹಿರಿಯ ನಾಗರಿಕರು ಒಳಗೊಂಡಂತೆ ಸಾರ್ವಜನಿಕರಿಗೆ ಉಪಯೋಗುವ ಗ್ರಂಥಗಳು, ದಿನಪತ್ರಿಕೆಗಳನ್ನು ವಾಚಿಸುವಂತಹ ವಾತಾವರಣ ನಿರ್ಮಾಣ ಮಾಡಬೇಕು. ಹಾಗೆಯೇ ಪೂರಕವಾದ ಶೌಚಗೃಹ, ಶುದ್ಧ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರು.
ಮುಖ್ಯಮಂತ್ರಿಗಳ ಮೂಲಭೂತ ಸೌಕರ್ಯ ಯೋಜನೆಯಡಿ 550 ಲಕ್ಷ ರೂ. ಅನುದಾನ ಪುರಸಭೆಗೆ ಬಿಡುಗಡೆಗೊಳ್ಳಲಿದೆ. ಹಾಗೆಯೇ ಡೆಲ್ಟ್ ಯೋಜನೆಯಡಿ 5.50 ಕೋಟಿ ರೂ. ಅನುದಾನ ಬಿಡುಗಡೆಗೊಂಡಿದ್ದು, ಈ ಅನುದಾನದಲ್ಲಿ ಕೊಪ್ಪಾ ಕಾವೇರಿ ಸೇತುವೆಯಿಂದ ತಾವರೆ ಕೆರೆವರೆಗೆ ಹಾಗೂ ಎಪಿಸಿಎಂಎಸ್ ಬಳಿಯ ಮಸೀದಿಯಿಂದ ಐಬಿ ವರೆಗೂ ಹೆದ್ದಾರಿಯ ಎರಡೂ ಬದಿ ಅಗತ್ಯ ಚರಂಡಿ, ಪಾದಚಾರಿ ಮಾರ್ಗ, ವಿದ್ಯುದೀಕರಣ ಮಾಡಲಾಗುತ್ತದೆ. ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆಯ ಬಳಿ ಮೇಲು ಸೇತುವೆ ನಿರ್ಮಾಣ, ಮುಖ್ಯ ವೃತ್ತಗಳಲ್ಲಿ ಹೈ ಮಾಸ್ಟ್ ಲೈಟ್‌ಗಳ ಅಳವಡಿಕೆ, ವಿದ್ಯುತ್ ಚಿತಾಗಾರ, ವೆಂಕಟೇಶ್ವರ ಚಿತ್ರಮಂದಿರದ ಜಾಗ ಹಾಗೂ ಕಾವೇರಿ ಬಡಾವಣೆಯಲ್ಲಿ ವಾಣಿಜ್ಯ ಸಂಕೀರ್ಣ, ಪ್ರತಿ ವಾರ್ಡ್‌ಗಳಲ್ಲಿ ಶುದ್ಧ ಕುಡಿವ ನೀರಿನ ಘಟಕ ನಿರ್ಮಾಣದ ಗುರಿ ಹೊಂದಲಾಗಿದೆ. ಈಗಾಗಲೇ 2026-27 ನೇ ಸಾಲಿನಲ್ಲಿ 2361 ಲಕ್ಷ ರೂ. ಆದಾಯ ನಿರೀಕ್ಷಿಸಲಾಗಿದ್ದು, 2084.40 ಲಕ್ಷ ರೂ. ವೆಚ್ಚದ ಪಟ್ಟಿ ಸಿದ್ಧಪಡಿಸಲಾಗಿದೆ. ನಗರದ ಸಾರ್ವಜನಿಕರ ಸಲಹೆಗಳನ್ನು ಸ್ವೀಕರಿಸಿ ಆಯ್ದ ಅಭಿವೃದ್ಧಿಗಳನ್ನು ಬಜೆಟ್‌ನಲ್ಲಿ ಸೇರಿಸಲಾಗುತ್ತದೆ ಎಂದು ಮುಖ್ಯಾಧಿಕಾರಿ ಗಿರೀಶ್ ಕುಮಾರ್ ಮಾಹಿತಿ ನೀಡಿದರು.
ಕುಶಾಲನಗರದ ಗುಂಡೂರಾವ್ ಬಡಾವಣೆಯಲ್ಲಿನ ಆರು ಎಕರೆ ವಿಸ್ತಾರವಾದ ಭೂಪ್ರದೇಶವನ್ನು ಅನ್ಯ ಉದ್ದೇಶಗಳಿಗೆ ಬಳಸದೆ, ಸಾರ್ವಜನಿಕ ಬಳಕೆಯ ದೃಷ್ಟಿಯಿಂದ ಮೀಸಲಿರಿಸಿ ಸುತ್ತಲೂ ಫೆನ್ಸಿಂಗ್ ಅಳವಡಿಸಿ ಸಂರಕ್ಷಣೆ ಮಾಡಬೇಕು. ಬೆಳೆಯುತ್ತಿರುವ ಕುಶಾಲನಗರದಲ್ಲಿ ಹೆದ್ದಾರಿಯ ಉದ್ದಕ್ಕೂ ವೈಜ್ಞಾನಿಕವಾಗಿ ವಿದ್ಯುದ್ದೀಕರಣಗೊಳಿಸಬೇಕು. ನಗರದ ಹಿತದೃಷ್ಟಿಯಿಂದ ವಾಕ್ಯೂಮ್ ಕ್ಲೀನರ್ ಟ್ರಕ್ ಖರೀದಿಸಲು ಕ್ರಮ ಕೈಗೊಳ್ಳಬೇಕು ಎಂದು ಕುಡಾ ಮಾಜಿ ಅಧ್ಯಕ್ಷ ಎಂ.ಎಂ. ಚರಣ್ ಸಲಹೆ ನೀಡಿದರು.
ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕವಾಗಿ ಬೆಳೆಯುತ್ತಿರುವ ಕುಶಾಲನಗರದಲ್ಲಿ ಆಯ್ದ ವೃತ್ತಗಳನ್ನು ವ್ಯವಸ್ಥಿತವಾಗಿ ನಿರ್ಮಾಣ ಮಾಡಬೇಕು ಎಂದು ಪುರಸಭೆ ಮಾಜಿ ಸದಸ್ಯ ಆನಂದಕುಮಾರ್ ಸಲಹೆ ನೀಡಿದರು. ಬಸವೇಶ್ವರ ಬಡಾವಣೆ, ಗೊಂದಿಬಸವನಹಳ್ಳಿ ವ್ಯಾಪ್ತಿಯ ರಸ್ತೆಗಳಿಗೆ ವಿಶೇಷ ಅನುದಾನ ಮೀಸಲಿಡಬೇಕು ಎಂದು ನಾಮನಿರ್ದೇಶಿತ ಸದಸ್ಯ ಜಿ.ಬಿ. ಜಗದೀಶ್ ಹೇಳಿದರು.
ಪೂನಂ ಬಡಾವಣೆಯಿಂದ ಗುಂಡೂರಾವ್ ಬಡಾವಣೆಗೆ ಸಂಪರ್ಕಿಸುವ ರಸ್ತೆಯನ್ನು ಅಭಿವೃದ್ಧಿಗೊಳಿಸಬೇಕು ಎಂದು ಮಾಜಿ ಸದಸ್ಯ ಡಿ.ಕೆ. ತಿಮ್ಮಪ್ಪ ಹೇಳಿದರು. ನಗರದಲ್ಲಿರುವ ಉದ್ಯಾನಗಳನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಿ ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಮಕ್ಕಳಿಗೆ ಅನುವು ಮಾಡಿಕೊಡಬೇಕು. ಕಾವೇರಿ ಬಡಾವಣೆಯ ಉದ್ಯಾನವನ್ನು ಅಭಿವೃದ್ಧಿಗೊಳಿಸಬೇಕೆಂದು ಶರಣ ಸಾಹಿತ್ಯ ವೇದಿಕೆ ಅಧ್ಯಕ್ಷ ಕೆ.ಎಸ್. ಮೂರ್ತಿ ಒತ್ತಾಯಿಸಿದರು.
ನಗರದ ವ್ಯಾಪ್ತಿಯಲ್ಲಿ ಕಂಡ ಕಂಡಲ್ಲಿ ಬೀದಿಬದಿ ವ್ಯಾಪಾರಕ್ಕೆ ಕಡಿವಾಣ ಹಾಕಬೇಕು. ಆಯ್ದ ಕಡೆ ಜಾಗ ಗುರುತಿಸಬೇಕು. ಮಾಂಸದ ಅಂಗಡಿಗಳನ್ನು ಕೂಡ ಪ್ರತ್ಯೇಕ ಸ್ಥಳದಲ್ಲಿ ತೆರೆಯಲು ಕ್ರಮ ಕೈಗೊಳ್ಳಬೇಕು ಎಂದು ಕೆ.ಜಿ.ಮನು ಒತ್ತಾಯಿಸಿದರು. ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಮಾಜಿ ಸದಸ್ಯರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.