ಡಿಜಿಟಲ್ ಸಾಕ್ಷರತೆ ಕುರಿತು ಮಾಹಿತಿ ಕಾರ್ಯಾಗಾರದಲ್ಲಿ ಎಸ್.ಆರ್.ಕೇಶಿನಿ ಮಕ್ಕಳೊಂದಿಗೆ ಮಾತನಾಡಿದರು.
- ಡಿಜಿಟಲ್ ಸಾಕ್ಷರತೆ ಕುರಿತು ಮಾಹಿತಿ ಕಾರ್ಯಾಗಾರ
ಮಡಿಕೇರಿ: ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಕೂಡಿಗೆ ಕ್ರೀಡಾ ಶಾಲೆಯ ವಿದ್ಯಾರ್ಥಿಗಳಿಗೆ ಡಿಜಿಟಲ್ ಸಾಕ್ಷರತೆ ಕುರಿತು ಮಾಹಿತಿ ಕಾರ್ಯಾಗಾರ ನಡೆಯಿತು.
ಕಾರ್ಯಕ್ರಮವನ್ನು ಪೊಲೀಸ್ ಇಲಾಖೆಯ ಮಕ್ಕಳ ವಿಶೇಷ ಪೊಲೀಸ್ ಘಟಕದ ಸುಮತಿ ಅವರು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಸಾಧನೆ ಮಾಡುವಂತೆ ಸಲಹೆ ನೀಡಿದರು.
ಇತ್ತಿಚೀನ ದಿನಗಳಲ್ಲಿ ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳು ಹೆಚ್ಚುತ್ತಿದ್ದು, ಮಕ್ಕಳ ರಕ್ಷಣಾ ಕಾಯ್ದೆ ೨೦೧೨ ಮಕ್ಕಳು ಯಾವುದೇ ದುಷ್ಚಟಗಳಿಗೆ ಒಳಗಾಗದೆ ಉತ್ತಮ ರೀತಿಯಲ್ಲಿ ತೊಡಗಿಸಿಕೊಳ್ಳಬೇಕು. ಮೊಬೈಲ್ ಗೀಳಿಗೆ ಒಳಗಾಗದೆ ಪರಿಶ್ರಮ ಪಟ್ಟು ಉತ್ತಮ ಸಾಧನೆ ಹಾದಿಯಲ್ಲಿ ಸಾಗಬೇಕು ಎಂದು ಕರೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜೆಂಡರ್ ಸ್ಪೆಷಲೀಸ್ಟ್ ಎಸ್.ಆರ್.ಕೇಶಿನಿ ಮಾತನಾಡಿ, ಪ್ರಸ್ತುತ ದಿನಗಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣ ಮತ್ತು ಮೊಬೈಲ್ ಬಳಕೆಗೆ ಹೆಚ್ಚು ಆಸಕ್ತಿ ವಹಿಸುತ್ತಿದ್ದು, ಶೈಕ್ಷಣಿಕವಾಗಿ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಅದ್ದರಿಂದ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚು ಆಸಕ್ತಿ ನೀಡಿ ತಮ್ಮನ್ನು ತಾವು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ದೈಹಿಕವಾಗಿ ಸದೃಢಗೊಳಿಸಿಕೊಳ್ಳುವ ಮೂಲಕ ಸಮಾಜಕ್ಕೆ ಮಾದರಿಯಾಗಿ ವ್ಯಕ್ತಿಗಳಾಗುವಂತೆ ಸಲಹೆ ನೀಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಪ್ತ ಸಮಾಲೋಚಕರಾದ ಯಮುನಾ ಮಾತನಾಡಿ, ಹರಿದರೆಯದವರ ಸ್ವಚ್ಛತೆ, ಋತು ಸ್ರಾವ ನೈರ್ಮಲ್ಯ, ಮತ್ತು ಸಾಂಕ್ರಮಿಕ ರೋಗಗಳಾದ ಹೆಚ್.ಐ.ವಿ / ಏಡ್ಸ್ ಕುರಿತಂತೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಂರಾದ ಮುರಳಿ, ಕುಶಾಲನಗರದ ಸಮುದಾಯ ಆರೋಗ್ಯ ಇಲಾಖೆಯ ಶ್ರೀಲತಾ ಹಾಗೂ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.