ಬಲ್ಲಮಾವಟಿ ಗ್ರಾಮದ ಪಂಚಾಯಿತಿ ಸಭಾಂಗಣದಲ್ಲಿ ಕೇಂದ್ರ ಸರ್ಕಾರ, ಕಾಫಿ ಮಂಡಳಿ ವತಿಯಿಂದ ಆಯೋಜಿಸಿದ್ದ ಇಂಡಿಯಾ ಕಾಫಿ ಆಪ್ ನೋಂದಣಿ ಅಭಿಯಾನದಲ್ಲಿ ಕಾಫಿಮಂಡಳಿಯ ಹಿರಿಯ ಸಂಪರ್ಕಾಧಿಕಾರಿ ಬಸವರಾಜ್ ಮಾತನಾಡಿದರು.
ನಾಪೋಕ್ಲು: ಕಾಫಿ ಬೆಳೆಗಾರರು ನೇರವಾಗಿ ಯೂರೋಪಿಯನ್ ಮಾರುಕಟ್ಟೆಗೆ ಕಾಫಿಯನ್ನು ರಫ್ತು ಮಾಡುತ್ತಿದ್ದರೆ ಅಥವಾ ಕಾಫಿಯನ್ನು ರಫ್ತು ಮಾಡುವ ರಫ್ತುದಾರರಿಗೆ ಮಾರಾಟ ಮಾಡುತ್ತಿದ್ದರೆ, ಕಾಫಿ ತೋಟದ ಭೂ ಪ್ರದೇಶದ ಸ್ಥಳಾಂಕ ಅಥವಾ ಬಹುಭುಜ ಆಕಾರ ವನ್ನು ಅವರೊಂದಿಗೆ ಹಂಚಿಕೊಳ್ಳಬೇಕಾಗುತ್ತದೆ ಎಂದು ಕಾಫಿ ಮಂಡಳಿಯ ಹಿರಿಯ ಸಂಪರ್ಕಾಧಿಕಾರಿ ಬಸವರಾಜ್ ಹೇಳಿದರು.
ಸಮೀಪದ ಬಲ್ಲಮಾವಟಿ ಗ್ರಾಮದ ಪಂಚಾಯಿತಿ ಸಭಾಂಗಣದಲ್ಲಿ ಕೇಂದ್ರ ಸರ್ಕಾರ, ಮಡಿಕೇರಿ ಕಾಫಿ ಮಂಡಳಿ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಇಂಡಿಯಾ ಕಾಫಿ ಆಪ್ ನೋಂದಣಿ ಅಭಿಯಾನದಲ್ಲಿ ಮಾತನಾಡಿದರು.
ಭಾರತದಲ್ಲಿ ಕಾಫಿ ಒಂದು ರಫ್ತು ಆಧಾರಿತ ಉತ್ಪನ್ನವಾಗಿದ್ದು, ದೇಶದ ಒಟ್ಟು ಉತ್ಪಾದನೆಯ ಶೇ.70ಕ್ಕೂ ಅಧಿಕ ಕಾಫಿಯನ್ನು 120ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಈ ರಫ್ತುಗಳಲ್ಲಿ ಯೂರೋಪಿಯನ್ ಮುಖ್ಯವಾದ ಮಾರುಕಟ್ಟೆಯಾಗಿದ್ದು, ಭಾರತದ ಗ್ರೀನ್ ಕಾಫಿ ರಫ್ತಿನಲ್ಲಿ ಶೇ.60ರಷ್ಟು ಪಾಲು ಹೊಂದಿದೆ. ಈಗ ಯುರೋಪಿಯನ್ ಒಕ್ಕೂಟ ಜಾರಿಗೊಳಿಸಲಾದ ಅರಣ್ಯ ಕಡಿತ ನಿರ್ಬಂಧ ನೀತಿ ಅಡಿಯಲ್ಲಿ ಕಾಫಿಯೂ ಸೇರ್ಪಡೆಯಾಗಿದ್ದು, ಯೂರೋಪಿಯನ್ ಒಕ್ಕೂಟದ ಆಮದುದಾರ ಸಂಸ್ಥೆಗಳು ಸ್ಥಳಾಂಕ ಅಥವಾ ಬಹುಭುಜ ಆಕಾರ ಮಾಹಿತಿ ಬಳಸಿ, 2020 ಡಿ.31ರ ನಂತರ ಅರಣ್ಯ ಕಡಿತಗೊಂಡ ಭೂಮಿಯಲ್ಲಿ ಕಾಫಿ ಬೆಳೆಯಲ್ಪಟ್ಟಿಲ್ಲ ಎಂಬುದನ್ನು ಪರಿಶೀಲಿಸುತ್ತವೆ ಎಂದರು.
ಭಾರತೀಯ ಕಾಫಿ ಮಂಡಳಿ ಒಂದು ಸರ್ಕಾರದ ಸಂಸ್ಥೆಯಾಗಿರುವುದರಿಂದ, ಇಂಡಿಯಾ ಕಾಫಿ ಆಪ್ ಮೂಲಕ ಬೆಳೆಗಾರರು ಸ್ಥಳಾಂಕ ಅಥವಾ ಬಹುಭುಜ ಆಕಾರವನ್ನು ಹಂಚಿಕೊಳ್ಳಬಹುದಾಗಿದೆ. ಕಾಫಿ ಬೆಳೆಗಾರರ ತೋಟದ ಗಾತ್ರವು 4 ಹೆಕ್ಟೇರ್‌ಗಿಂತ ಕಡಿಮೆ ಇದ್ದರೆ, ಸ್ಥಳಾಂಕ ಸಾಕು. 4 ಹೆಕ್ಟೇರ್ ಅಥವಾ ಹೆಚ್ಚು ಇದ್ದರೆ, ಬಹುಭುಜ ಆಕಾರ ಅಗತ್ಯವಿದೆ ಎಂದು ಮಾಹಿತಿ ನೀಡಿದರು.
26-27ನೇ ಸಾಲಿಗೆ ಕಾಫಿ ಮಂಡಳಿ ವತಿಯಿಂದ ಐಸಿಡಿಪಿ ಯೋಜನೆಯಡಿಯಲ್ಲಿ ಕಾಫಿ ಮರುನಾಟಿ, ಹನಿ ನೀರಾವರಿ, ಕಾಫಿ ಗೋಡೌನ್, ಕಾಫಿ ಕಣ ನಿರ್ಮಾಣ, ಯಂತ್ರೋಪಕರಣಗಳಿಗೆ ಕೇಂದ್ರ ಕಚೇರಿಯಿಂದ ಸಹಾಯಧನದ ಅನುಮೋದನೆ ದೊರೆತ್ತಿದ್ದು, 62 ಎಕರೆ ವರೆಗಿನ ಕಾಫಿ ತೋಟ ಹೊಂದಿರುವ ಬೆಳೆಗಾರರು ಅರ್ಜಿ ಸಲ್ಲಿಸಬಹುದು ಎಂದು ಮಾಹಿತಿ ನೀಡಿದರು.
ಕಾಫಿ ಮಂಡಳಿ ನಾಪೋಕ್ಲು ವಿಭಾಗದ ವಿಸ್ತರಣಾಧಿಕಾರಿ ಸಜಿನ, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಚೋಕಿರ ಬಾಬಿ ಭೀಮಯ್ಯ ಹಾಗೂ ಬೆಳೆಗಾರರು ಉಪಸ್ಥಿತರಿದ್ದರು.