: ಕೊಡಗು ಜಿಲ್ಲಾಡಳಿತ ವತಿಯಿಂದ ನಗರದ ಕೋಟೆ ಆವರಣದಲ್ಲಿ ಶನಿವಾರ ನಡೆದ ೮೦ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಉಸ್ತುವಾರಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಅವರು ಧ್ವಜವಂದನೆ ಸ್ವೀಕರಿಸಿದರು. ಡಾ.ಮಂತರ್ ಗೌಡ, ಮೆಹರೋಜ್ ಖಾನ್, ಸೋಮಶೇಖರ್ ಇತರರಿದ್ದರು. 
ಕೊಡಗು

ಕೊಡಗು ಶೌರ್ಯ, ತ್ಯಾಗ, ದೇಶಪ್ರೇಮದ ನಾಡು

ಆದರ್ಶ್. ಎಂ.ಕೆ.

ಪ್ರಮುಖ ಮುಖ್ಯಾಂಶಗಳು

  • ಕೊಡಗು ಶೌರ್ಯ, ತ್ಯಾಗ, ದೇಶಪ್ರೇಮದ ನಾಡು
  • ೮೦ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ನರೇಂದ್ರಸ್ವಾಮಿ

ಮಡಿಕೇರಿ: ಕೊಡಗು ಎಂದರೆ ಕೇವಲ ಪ್ರಕೃತಿ ಸೌಂದರ್ಯವಲ್ಲ. ಇದು ಶೌರ್ಯ, ತ್ಯಾಗ ಮತ್ತು ದೇಶಪ್ರೇಮದ ಸಂಗಮ ಎಂದು ಕೃಷಿ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಪಿ.ಎಂ.ನರೇಂದ್ರಸ್ವಾಮಿ ಹೇಳಿದರು.

ಕೊಡಗು ಜಿಲ್ಲಾಡಳಿತ ವತಿಯಿಂದ ನಗರದ ಕೋಟೆ ಆವರಣದಲ್ಲಿ ಶನಿವಾರ ನಡೆದ ೮೦ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಮಹಾತ್ಮ ಗಾಂಧಿ, ನೆಹರು, ಪಟೇಲ್, ಸುಭಾಷ್ ಚಂದ್ರಬೋಸ್, ಅಂಬೇಡ್ಕರ್ ಅವರೊಂದಿಗೆ ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ ಮೊದಲಾದ ವೀರ ವನಿತೆಯರ ಕೊಡುಗೆಯನ್ನು ಸ್ಮರಿಸಿದ ಅವರು, ಕೊಡಗಿನ ಸ್ವಾತಂತ್ರ್ಯ ಹೋರಾಟದಲ್ಲಿ ಗುಡ್ಡೆಮನೆ ಅಪ್ಪಯ್ಯಗೌಡ ಅವರ ಪಾತ್ರ ಮಹತ್ವದ್ದಾಗಿದೆ. ಕೊಡಗಿನ ಗಾಂಧಿ ಎಂದೇ ಪ್ರಸಿದ್ಧರಾದ ಪಂದ್ಯಂಡ ಐ.ಬೆಳ್ಯಪ್ಪ ಅವರು ಗಾಂಧೀಜಿಯವರ ಸತ್ಯ, ಅಹಿಂಸೆ, ಸ್ವದೇಶಿ ಸಂದೇಶವನ್ನು ಜನಾಂದೋಲನವನ್ನಾಗಿ ಮಾಡಿದರು. ಕೊಡಗು ಪತ್ರಿಕೆಯ ಮೂಲಕ ರಾಷ್ಟ್ರೀಯ ಜಾಗೃತಿ ಮೂಡಿಸಿದ ಅವರು ೧೯೩೦ರ ಸತ್ಯಾಗ್ರಹದಲ್ಲಿ ಬಂಧನಕ್ಕೊಳಗಾಗಿದ್ದರು ಎಂದು ಸಚಿವರು ನೆನಪಿಸಿದರು.
ಸ್ವಾತಂತ್ರ್ಯ ಹೋರಾಟದ ಜೊತೆಗೆ ದೇಶ ರಕ್ಷಣೆಯಲ್ಲಿಯೂ ಕೊಡಗು ಮುಂಚೂಣಿಯಲ್ಲಿದೆ. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಮತ್ತು ಜನರಲ್ ಕೆ.ಎಸ್.ತಿಮ್ಮಯ್ಯ ಅವರು ಭಾರತದ ಸೇನಾ ಇತಿಹಾಸದ ಹೆಮ್ಮೆಯ ಹೆಸರುಗಳಾಗಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕೊಡಗು, ಈಗಲೂ ಗಡಿ ಕಾಯುವ ಯೋಧರನ್ನು ನೀಡುತ್ತಿದೆ ಎಂದು ಅವರು ಹೆಮ್ಮೆಯಿಂದ ಹೇಳಿದರು.
ಕೊಡಗು ಎಲ್ಲಾ ಧರ್ಮ, ಜಾತಿ, ಭಾಷೆಗಳನ್ನು ಮೀರಿದ ಸೌಹಾರ್ದದ ತವರಾಗಿದೆ. ಬ್ರಹ್ಮಗಿರಿ, ತಡಿಯಂಡಮೋಳ್, ಕಾವೇರಿ, ಕಾಫಿ ತೋಟಗಳಿಂದ ಕೂಡಿದ ಈ ನೆಲ ಕನ್ನಡ ನಾಡಿನ ಕೀರ್ತಿ ಹೆಚ್ಚಿಸಿದೆ. ತಲಕಾವೇರಿಯಲ್ಲಿ ಹುಟ್ಟುವ ಕಾವೇರಿ ಕೋಟ್ಯಂತರ ಜನರ ಜೀವನಾಡಿ ಎಂದು ತಿಳಿಸಿದ ಅವರು, ಪ್ರಕೃತಿಯನ್ನು ಸಂರಕ್ಷಿಸುತ್ತಲೇ ಪ್ರವಾಸೋದ್ಯಮ, ಕೃಷಿ, ಕಾಫಿ ಮತ್ತು ಸ್ಥಳೀಯ ಉದ್ಯೋಗಗಳನ್ನು ಬಲಪಡಿಸುವುದು ನಮ್ಮ ಆದ್ಯತೆ ಎಂದು ಹೇಳಿದರು.
ಬೆಂಗಳೂರು ನಮ್ಮ ಕಿರೀಟ, ಕರ್ನಾಟಕ ನಮ್ಮ ಹೃದಯ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ರಾಜ್ಯದ ಅಭಿವೃದ್ಧಿಯನ್ನು ಬೆಂಗಳೂರು ಕೇಂದ್ರಿತವಾಗಿರಿಸದೆ, ಪ್ರತಿ ಪ್ರದೇಶಕ್ಕೂ ಅವಕಾಶ ವಿಸ್ತರಿಸುವ ದೂರದೃಷ್ಟಿ ಇದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು, ಈ ನಿಟ್ಟಿನಲ್ಲಿ ಪರಿಸರ ಮತ್ತು ಆಧ್ಯಾತ್ಮಿಕ ಪ್ರವಾಸೋದ್ಯಮದಲ್ಲಿ ಕೊಡಗು ಕನ್ನಡ ನಾಡಿನ ಕಿರೀಟವಾಗಲಿದೆ ಎಂದು ಹೇಳಿದರು.
ಕೃಷಿಗೆ ಬಲ, ಕಾಫಿಗೆ ಮೌಲ್ಯವರ್ಧನೆ, ಯುವಕರಿಗೆ ಉದ್ಯೋಗ, ಮಹಿಳೆಯರಿಗೆ ಆರ್ಥಿಕ ಶಕ್ತಿ, ಗ್ರಾಮಗಳಿಗೆ ಮೂಲಸೌಕರ್ಯ ಮತ್ತು ಪ್ರಕೃತಿ ರಕ್ಷಣೆ ಸರ್ಕಾರದ ಆದ್ಯತೆಯಾಗಿದೆ. ಕೊಡಗಿನ ಆರ್ಥಿಕತೆಯ ಬೆನ್ನೆಲುಬು ಕಾಫಿ ಬೆಳೆಗಾರರ ಬದುಕು ಬಲಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಹವಾಮಾನ ಬದಲಾವಣೆ, ಅತಿವೃಷ್ಟಿ, ಬೆಲೆ ಏರಿಳಿತ ಮತ್ತು ವನ್ಯಜೀವಿ ಸಂಘರ್ಷಕ್ಕೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳಲಾಗುತ್ತಿದೆ. ಕೊಡಗಿನ ಕೃಷಿಯನ್ನು ಉತ್ಪಾದನೆಗೆ ಸೀಮಿತಗೊಳಿಸದೆ, ಮೌಲ್ಯವರ್ಧನೆ, ಸಂಸ್ಕರಣೆ, ಬ್ರ್ಯಾಂಡಿಂಗ್, ರಫ್ತು ಮತ್ತು ಪ್ರವಾಸೋದ್ಯಮದೊಂದಿಗೆ ಸಂಪರ್ಕಿಸುವ ಹೊಸ ಆರ್ಥಿಕತೆಯಾಗಿ ರೂಪಿಸಲಾಗುವುದು. ಕೊಡಗು ಕಾಫಿಯನ್ನು ಜಾಗತಿಕ ಗುಣಮಟ್ಟದ ಬ್ರ್ಯಾಂಡ್ ಆಗಿ ಬೆಳೆಸುವ ಗುರಿ ಹೊಂದಲಾಗಿದೆ. ಜಿಲ್ಲೆಯಲ್ಲಿ ಪರಿಸರ ಸ್ನೇಹಿ, ಆಧ್ಯಾತ್ಮಿಕ, ಸಾಹಸ, ಗ್ರಾಮೀಣ, ಕಾಫಿ ಮತ್ತು ಸಾಂಸ್ಕೃತಿಕ ಪ್ರವಾಸೋದ್ಯಮವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಡಾ.ಮಂತರ್ ಗೌಡ ಅವರು ಅಧ್ಯಕ್ಷತೆ ವಹಿಸಿದ್ದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಎಸ್.ಆರ್.ಮೆಹರೋಜ್ ಖಾನ್, ಮಡಿಕೇರಿ ನಗರಸಭೆ ಅಧ್ಯಕ್ಷ ಪಿ.ಕಲಾವತಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಟಿ.ಎಂ.ಧರ್ಮಜ ಉತ್ತಪ್ಪ, ಏರ್ ಮಾರ್ಷಲ್(ನಿವೃತ್ತ) ನಂದಾ ಕಾರ್ಯಪ್ಪ, ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ, ಹೆಚ್ಚುವರಿ ಜಿಲ್ಲಾಧಿಕಾರಿ ಸಹನಾ ಎಸ್.ಹಾದಿಮನಿ, ಮಾಜಿ ಸೈನಿಕರು, ಜಿಲ್ಲಾ ಹಾಗೂ ತಾಲ್ಲೂಕಿನ ಅಧಿಕಾರಿಗಳು, ವಿದ್ಯಾರ್ಥಿಗಳು, ಇತರರು ಪಾಲ್ಗೊಂಡಿದ್ದರು.
ಗ್ಯಾರಂಟಿ ಯೋಜನೆ: ಲಕ್ಷಾಂತರ ಫಲಾನುಭವಿಗಳಿಗೆ ಲಾಭ
ಮಡಿಕೇರಿ: ಜಿಲ್ಲೆಯಲ್ಲಿ ಸರ್ಕಾರದ ಪ್ರಮುಖ ೫ ಗ್ಯಾರಂಟಿ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡು ಲಕ್ಷಾಂತರ ಜನರಿಗೆ ನೇರ ಪ್ರಯೋಜನ ತಲುಪಿದೆ ಎಂದು ಉಸ್ತುವಾರಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಹೇಳಿದರು.
ಜಿಲ್ಲೆಯಲ್ಲಿ ೧.೮೫ ಲಕ್ಷ ವಯಸ್ಕ ಮಹಿಳೆಯರು ಮತ್ತು ೪.೫೪ ಲಕ್ಷ ವಿದ್ಯಾರ್ಥಿನಿಯರು ಉಚಿತ ಬಸ್ ಪ್ರಯಾಣದ ಸೌಲಭ್ಯ ಪಡೆದಿದ್ದಾರೆ. ದಿನಕ್ಕೆ ಸರಾಸರಿ ೧೬,೭೪೭ ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಆ.೮ ರವರೆಗೆ ಮಡಿಕೇರಿ ಘಟಕಕ್ಕೆ ೮೨.೯೨ ಕೋಟಿ ಆದಾಯ ಬಂದಿದೆ. ಏಪ್ರಿಲ್ ೨೦೨೬ರವರೆಗೆ ೧.೨೧ ಲಕ್ಷ ಕುಟುಂಬದ ಯಜಮಾನಿ ಮಹಿಳೆಯರು ನೋಂದಣಿಯಾಗಿದ್ದಾರೆ. ತಿಂಗಳಿಗೆ ರೂ.೨,೦೦೦ರಂತೆ ಒಟ್ಟು ರೂ.೬೭೩.೨೮ ಕೋಟಿಯನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ.
ಗೃಹಜ್ಯೋತಿಗೆ ೨.೦೩ ಲಕ್ಷ ಫಲಾನುಭವಿಗಳು ನೋಂದಣಿಯಾಗಿದ್ದು, ಜುಲೈ ರವರೆಗೆ ಜಿಲ್ಲೆಗೆ ರೂ.೨೬೪.೬೨ ಕೋಟಿ ಸಹಾಯಧನ ನೀಡಲಾಗಿದೆ. ರೂ.೯೭,೫೭೦ ಅರ್ಹ ಪಡಿತರ ಚೀಟಿ ಕುಟುಂಬಗಳಿಗೆ ಯೋಜನೆಯಡಿ ಪಡಿತರ ವಿತರಣೆಯಾಗುತ್ತಿದೆ. ಯುವನಿಧಿಗೆ ಜೂನ್ ಅಂತ್ಯಕ್ಕೆ ೨,೩೪೭ ಅಭ್ಯರ್ಥಿಗಳು ನೋಂದಣಿಯಾಗಿದ್ದು, ೨,೦೧೩ ಅಭ್ಯರ್ಥಿಗಳಿಗೆ ರೂ೫.೯೭ ಕೋಟಿ ನೇರವಾಗಿ ಖಾತೆಗೆ ವರ್ಗಾವಣೆಯಾಗಿದೆ ಎಂದು ಮಾಹಿತಿ ನೀಡಿದರು.
ಗಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ
ಜಿಲ್ಲಾ ಮಟ್ಟದ ೮೦ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ೫ ಶಾಲೆಗಳ ೩೫೧ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.
ಸರ್ಕಾರಿ ಪದವಿ ಪೂರ್ವ ಕಾಲೇಜು ೬೦ ವಿದ್ಯಾರ್ಥಿಗಳೊಂದಿಗೆ ದೇಶಭಕ್ತಿ ನೃತ್ಯ ಪ್ರದರ್ಶನ ನಡೆದರೆ, ಸಂತ ಮೈಕಲ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ೭೩ ವಿದ್ಯಾರ್ಥಿಗಳು ಭಾರತೀಯ ಸಂಸ್ಕೃತಿಯ ವೈಭವವನ್ನು ಬಿಂಬಿಸುವ ನೃತ್ಯ ಮಾಡಿದರು. ಜನರಲ್ ತಿಮ್ಮಯ್ಯ ಶಾಲೆಯ ವಿದ್ಯಾರ್ಥಿಗಳು, ರಾಜೇಶ್ವರಿ ವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಸಂತ ಜೋಸೆಫರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ೮೬ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು.
ಪಥಸಂಚಲನ
ಡಿ.ಎ.ಆರ್ ಪೊಲೀಸ್ ನಿರೀಕ್ಷಕ ಎಚ್.ಬಿ.ಗಣೇಶ್ ಪೆರೇಡ್ ಕಮಾಂಡರ್ ಆಗಿ ಪಥಸಂಚಲನ ನಡೆಸಿದರು. ಗೃಹ ರಕ್ಷಕ ದಳ, ಅರಣ್ಯ ಇಲಾಖೆ, ಅರಣ್ಯ ತರಬೇತಿಕೇಂದ್ರ ಕುಶಾಲನಗರ, ಸೈನಿಕ ಶಾಲೆ ಕೊಡಗು, ಪಿಎಂಶ್ರೀ ಜವಹಾರ್ ನವೋದಯ ವಿದ್ಯಾಲಯ ಸೇರಿದಂತೆ ೧೦ಕ್ಕೂ ಅಧಿಕ ತಂಡಗಳು ಪಥಸಂಚಲನದಲ್ಲಿ ಪಾಲ್ಗೊಂಡಿತ್ತು.