ವಿರಾಜಪೇಟೆ ತಾಲೂಕಿನ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಗೋಡು ಗ್ರಾಮದಲ್ಲಿ ಕಾಡುಕೋಣ ಹಾಗೂ ಕಾಡಾನೆಗಳ ಹಾವಳಿ ಹೆಚ್ಚಾಗಿರುವುದು ಗ್ರಾಮಸ್ಥರು ಮತ್ತು ಕಾಫಿ ತೋಟ ಕಾರ್ಮಿಕರಲ್ಲಿ ತೀವ್ರ ಆತಂಕ ಮೂಡಿಸಿದೆ.  
ಕೊಡಗು

ಹೆಚ್ಚಿದ ಕಾಡುಕೋಣ, ಕಾಡಾನೆಗಳ ಹಾವಳಿ

ಸಿದ್ದಾಪುರ: ವಿರಾಜಪೇಟೆ ತಾಲೂಕಿನ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಗೋಡು ಗ್ರಾಮದಲ್ಲಿ ಕಾಡುಕೋಣ ಹಾಗೂ ಕಾಡಾನೆಗಳ ಹಾವಳಿ ಹೆಚ್ಚಾಗಿರುವುದು ಗ್ರಾಮಸ್ಥರು ಮತ್ತು ಕಾಫಿ ತೋಟ ಕಾರ್ಮಿಕರಲ್ಲಿ ತೀವ್ರ ಆತಂಕ ಮೂಡಿಸಿದೆ.
ಅರಣ್ಯ ಅಂಚಿನಲ್ಲಿರುವ ಈ ಭಾಗದಲ್ಲಿ ಕಳೆದ ಕೆಲ ವಾರಗಳಿಂದ ಕಾಡುಪ್ರಾಣಿಗಳ ಸಂಚಾರ ಹೆಚ್ಚಾಗಿದ್ದು, ಜನಜೀವನವೇ ಅಸ್ತವ್ಯಸ್ತಗೊಂಡಿದೆ ಎಂದು ಸ್ಥಳೀಯರು ಆಕ್ರೋಶವ್ಯಕ್ತಪಡಿಸಿದ್ದಾರೆ.
ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿಯಿಂದ ಗುರುವಾರ ವಿರಾಜಪೇಟೆ ತಾಲೂಕು ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಗೋಡು ಗ್ರಾಮದಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಬೆಳೆಗಾರರು ಹಾಗೂ ಕಾರ್ಮಿಕರು ಅರಣ್ಯ ಇಲಾಖೆ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.
ಗ್ರಾಮದ ಸುತ್ತಮುತ್ತಲಿನ ಕಾಫಿ ತೋಟಗಳಲ್ಲಿ 10ಕ್ಕೂ ಹೆಚ್ಚು ಕಾಡುಕೋಣಗಳ ಹಿಂಡು ಬೀಡುಬಿಟ್ಟಿರುವುದು ದೃಢಪಟ್ಟಿದೆ. ಬೆಳಗ್ಗೆ ಮತ್ತು ಸಂಜೆ ವೇಳೆ ತೋಟದ ಒಳಭಾಗದಲ್ಲಿ ಹಿಂಡಾಗಿ ಸಂಚರಿಸುತ್ತಿರುವ ಕಾಡುಕೋಣಗಳು ಕಾರ್ಮಿಕರಿಗೆ ಭೀತಿ ಉಂಟು ಮಾಡುತ್ತಿವೆ. ಸಾಮಾನ್ಯವಾಗಿ ಮನುಷ್ಯರಿಂದ ತಪ್ಪಿಸಿಕೊಂಡು ಹೋಗುವ ಸ್ವಭಾವ ಹೊಂದಿದ ಕಾಡುಕೋಣಗಳು, ಅಲ್ಪ ಉದ್ದೀಪನಕ್ಕೂ ಆಕ್ರಮಣಕಾರಿ ವರ್ತನೆ ತೋರಿಸುವ ಸಾಧ್ಯತೆ ಇರುವುದರಿಂದ ಕಾರ್ಮಿಕರು ಕೆಲಸಕ್ಕೆ ತೆರಳಲು ಹಿಂಜರಿಯುತ್ತಿದ್ದಾರೆ. ಮಹಿಳಾ ಕಾರ್ಮಿಕರ ಸಂಖ್ಯೆಯೂ ಹೆಚ್ಚಿರುವುದರಿಂದ ಭದ್ರತೆ ಕುರಿತ ಚಿಂತನೆ ಹೆಚ್ಚಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಇತ್ತೀಚೆಗೆ ಇದೇ ವ್ಯಾಪ್ತಿಯಲ್ಲಿ ಗೂಡ್ಸ್ ವಾಹನಕ್ಕೆ ಕಾಡುಕೋಣ ಏಕಾಏಕಿ ಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡಿದೆ. ಈ ಘಟನೆ ಇನ್ನೂ ಜನಮನದಿಂದ ಮಾಸುವ ಮುನ್ನವೇ ಹೆಚ್ಚಿನ ಸಂಖ್ಯೆಯಲ್ಲಿ ಕಾಡುಕೋಣಗಳು ಕಾಣಿಸಿಕೊಂಡಿರುವುದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಜತೆಗೆ ವಾಹನ ಸಂಚಾರಕ್ಕೂ ಅಡ್ಡಿಯಾಗುವ ಪರಿಸ್ಥಿತಿ ನಿರ್ಮಾಣವಾಗಬಹುದೆಂದು ಆತಂಕ ವ್ಯಕ್ತಪಡಿಸಿದರು.
ಈ ನಡುವೆ ಕಾಡಾನೆಗಳ ಹಾವಳಿಯೂ ಕಡಿಮೆಯಾಗಿಲ್ಲ. ರಾತ್ರಿ ವೇಳೆ ತೋಟ ಪ್ರದೇಶಕ್ಕೆ ನುಗ್ಗಿ ಬೆಳೆ ಹಾನಿ ಮಾಡುತ್ತಿರುವುದಾಗಿ ರೈತರು ದೂರಿದ್ದಾರೆ. ಕೆಲವು ಮನೆಗಳ ಸಮೀಪದಲ್ಲಿಯೇ ಆನೆಗಳ ಸಂಚಾರ ಕಂಡುಬಂದಿದ್ದು, ಮಕ್ಕಳು ಮತ್ತು ವೃದ್ಧರಲ್ಲಿ ಜೀವಭಯ ಹೆಚ್ಚಾಗಿದೆ. ಶಾಲೆಗೆ ತೆರಳುವ ಮಕ್ಕಳನ್ನು ಪಾಲಕರು ಒಂಟಿಯಾಗಿ ಕಳುಹಿಸಲು ಹೆದರುತ್ತಿದ್ದಾರೆ. ಕಾಡಾನೆಗಳ ಹಾದಿ ಗ್ರಾಮ ದಾರಿಗಳನ್ನೇ ದಾಟುತ್ತಿರುವುದರಿಂದ ಜನರು ಗುಂಪುಗಳಾಗಿ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸ್ಥಳೀಯರು ಹಾಗೂ ತೋಟ ಮಾಲೀಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರೂ ಶಾಶ್ವತ ಪರಿಹಾರ ಇನ್ನೂ ಸಿಕ್ಕಿಲ್ಲ. ಕಾಡಾನೆಗಳ ಹಾವಳಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಇದೀಗ ಕಾಡುಕೋಣಗಳ ಹಿಂಡು ಕೂಡ ಸೇರಿಕೊಂಡಿರುವುದು ಸಂಕಷ್ಟವನ್ನು ಹೆಚ್ಚಿಸಿದೆ. ರಾತ್ರಿ ಗಸ್ತು ಹೆಚ್ಚಿಸಿ, ತಕ್ಷಣ ಕಾಡಿಗಟ್ಟುವ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಅರಣ್ಯ ಪ್ರದೇಶಗಳಲ್ಲಿ ನೀರು ಮತ್ತು ಆಹಾರ ಕೊರತೆ, ಮಾನವ ವಾಸಸ್ಥಾನಗಳ ವಿಸ್ತರಣೆ ಹಾಗೂ ಕಾಡು ಪ್ರದೇಶಗಳ ಕುಗ್ಗುವಿಕೆ ಇಂತಹ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಅರಣ್ಯ-ಮಾನವ ಸಂಘರ್ಷ ದಿನೇ ದಿನೆ ಹೆಚ್ಚುತ್ತಿರುವುದು ಕೊಡಗು ಜಿಲ್ಲೆಯ ಹಲವು ಭಾಗಗಳಲ್ಲಿ ಕಂಡುಬರುತ್ತಿದೆ. ಶಾಶ್ವತ ಪರಿಹಾರಕ್ಕಾಗಿ ವೈಜ್ಞಾನಿಕ ಕ್ರಮಗಳು, ವಿದ್ಯುತ್ ಬೇಲಿ, ಕಂದಕ ನಿರ್ಮಾಣ ಹಾಗೂ ನಿರಂತರ ಗಸ್ತು ಅಗತ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಒಟ್ಟಾರೆ, ಕರಡಿಗೋಡು ಗ್ರಾಮದಲ್ಲಿ ಕಾಡುಕೋಣಗಳ ಹಿಂಡು ಹಾಗೂ ಕಾಡಾನೆಗಳ ಹಾವಳಿ ಜನರಲ್ಲಿ ಭೀತಿಯನ್ನುಂಟು ಮಾಡಿದ್ದು, ಅರಣ್ಯ ಇಲಾಖೆ ತಕ್ಷಣ ಸ್ಪಂದಿಸಿ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕೆಂಬುದು ಗ್ರಾಮಸ್ಥರ ಒತ್ತಾಯ.