ತ್ರಿವೇಣಿ ಶಾಲೆಯಲ್ಲಿ ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ವಿದ್ಯಾರ್ಥಿ ಸಂಘದ ಉದ್ಘಾಟನ ಸಮಾರಂಭ ನಡೆಯಿತು. ಮುಲ್ಲೇಂಗಡ ಕಿಟ್ಟು ಕುಟ್ಟಪ್ಪ, ಕಾಣತಂಡ ಜಗದೀಶ್, ಮಚರ್ಂಡ ಗಣೇಶ್, ಪಟ್ಟಡ ಮೋಹನ್, ಮಾಳೇಟೀರ ಸ್ವಾತಿ, ಕುಂಡ್ರಂಡ ಶಿಲ್ಪ ಇದ್ದರು. 
ಕೊಡಗು

ವ್ಯಕ್ತಿತ್ವ ವಿಕಸನಕ್ಕೆ ಪಠ್ಯೇತರ ಚಟುವಟಿಕೆ ಸಹಕಾರಿ

ವಿರಾಜಪೇಟೆ: ತ್ರಿವೇಣಿ ವಿದ್ಯಾಸಂಸ್ಥೆ ಕೇವಲ ಪಠ್ಯ ಶಿಕ್ಷಣವನ್ನಷ್ಟೇ ನೀಡದೆ, ವಿದ್ಯಾರ್ಥಿಗಳಲ್ಲಿ ಶಿಸ್ತು, ನಾಯಕತ್ವ ಮತ್ತು ಉತ್ತಮ ಮೌಲ್ಯಗಳನ್ನು ಬೆಳೆಸುತ್ತಿರುವುದು ಶ್ಲಾಘನೀಯ ಎಂದು ವಿರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ಅಮ್ಮಣಿಚಂಡ ರವಿ ಉತ್ತಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.
ತ್ರಿವೇಣಿ ವಿದ್ಯಾಸಂಸ್ಥೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿ ಸಂಘ ಹಾಗೂ ಪಠ್ಯೇತರ ಚಟುವಟಿಕೆ ಕಾರ್ಯಕ್ರಮಗಳು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಭದ್ರ ಅಡಿಪಾಯವಾಗುತ್ತವೆ ಎಂದು ತಿಳಿಸಿದರು.
ಕೊಡವ ಸಮಾಜದ ಗೌರವ ಕಾರ್ಯದರ್ಶಿ ಮಾಳೇಟೀರ ಶ್ರೀನಿವಾಸ್ ಮಾತನಾಡಿ, ನಾಯಕತ್ವ ವಹಿಸುವ ವಿದ್ಯಾರ್ಥಿಗಳಲ್ಲಿ ಪ್ರಾಮಾಣಿಕತೆ, ಜವಾಬ್ದಾರಿ, ಸೇವಾ ಮನೋಭಾವ ಮತ್ತು ಉತ್ತಮ ನಿರ್ಧಾರ ಕೈಗೊಳ್ಳುವ ಗುಣಗಳು ಇರಬೇಕು ಎಂದು ತಿಳಿಸಿದರು.
ಸಂಸ್ಥೆಯ ಅಧ್ಯಕ್ಷ ಮುಲ್ಲೇಂಗಡ ಕಿಟ್ಟು ಕುಟ್ಟಪ್ಪ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಯಶಸ್ಸಿಗೆ ಪ್ರಾಥಮಿಕ ಹಂತದಿಂದಲೇ ಭದ್ರ ಅಡಿಪಾಯ ಹಾಕಿದ ಶಿಕ್ಷಕರ ಸೇವೆಯನ್ನು ಪ್ರಶಂಸಿಸಿ, ಇದೇ ರೀತಿಯಲ್ಲಿ ಮುಂದೆಯೂ ಸಂಸ್ಥೆಯು ಸಾಧನೆಗಳನ್ನು ಮಾಡಲಿ ಎಂದು ಶುಭ ಕೋರಿದರು.
ಈ ಸಂದರ್ಭದಲ್ಲಿ ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಹಾಗೂ ಶೇ.100 ಫಲಿತಾಂಶ ದಾಖಲಿಸಿದ ವಿಷಯ ಶಿಕ್ಷಕರಿಗೆ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು. ಅಲ್ಲದೆ, ಎಲ್‌ಕೆಜಿಯಿಂದ 9ನೇ ತರಗತಿಯವರೆಗೆ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಾವೀಣ್ಯ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಾಯಿತು.
ಈ ಸಂದರ್ಭದಲ್ಲಿ ಗೋಣಿಕೊಪ್ಪಲಿನ ಗುತ್ತಿಗೆದಾರ ಲಕ್ಷ್ಮೀರೆಡ್ಡಿ ಅವರು ಸಂಸ್ಥೆಯ ಅಭಿವೃದ್ಧಿಗಾಗಿ 20 ಸಾವಿರ ರೂ. ದೇಣಿಗೆ ನೀಡಿದರು. ಕೊಡವ ಸಮಾಜದ ಉಪಾಧ್ಯಕ್ಷ ಕಾಣತಂಡ ಜಗದೀಶ್, ತ್ರಿವೇಣಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಮಚರ್ಂಡ ಗಣೇಶ್, ಆಡಳಿತ ಮಂಡಳಿ ನಿರ್ದೇಶಕರಾದ ಪಟ್ಟಡ ಮೋಹನ್, ಮಾಳೇಟೀರ ಸ್ವಾತಿ, ಕುಂಡ್ರಂಡ ಶಿಲ್ಪ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.