ಹೆಬ್ಬಾಲೆ ಪ್ರೌಢಶಾಲೆಯ ಕಟ್ಟಡದ ಛಾವಣಿ ನವೀಕರಿಸಿಕೊಟ್ಟ ಶಾಲೆಯ ಹಳೆಯ ವಿದ್ಯಾರ್ಥಿ ನಾಪಂಡ ಮುದ್ದಪ್ಪ ಹಾಗೂ ಮುತ್ತಪ್ಪ ಸಹೋದರರನ್ನು ಶಾಲಾ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು. ಎಚ್.ಎಸ್. ಕೃಷ್ಣಪ್ಪ, ಹೆಚ್.ವಿ. ಶಿವಪ್ಪ, ಡಾ.ಸಂಗೀತಾ ಮುದ್ದಪ್ಪ, ವಿಜಯಕುಮಾರ್, ಬಸವರಾಜ ಶೆಟ್ಟಿ ಮತ್ತಿತರರು ಇದ್ದರು.
ವಿದ್ಯಾರ್ಥಿಗಳು ಪ್ರಜಾಪ್ರಭುತ್ವದ ಬಗ್ಗೆ ವಿಸ್ತೃತವಾಗಿ ಅಧ್ಯಯನ ನಡೆಸುವ ಮೂಲಕ ಅದಕ್ಕೆ ಒದಗಿ ಬಂದಿರುವ ಅಪಾಯವನ್ನು ತಪ್ಪಿಸಿ, ಸಂರಕ್ಷಿಸಬೇಕು ಎಂದು ಸಾಹಿತಿ ನಾಪಂಡ ಮುದ್ದಪ್ಪ ಹೇಳಿದರು. 25 ಲಕ್ಷ ರೂ. ವೆಚ್ಚದಲ್ಲಿ ನವೀಕರಿಸಿದ ಶಿಥಿಲಾವಸ್ಥೆ ತಲುಪಿದ್ದ ಹೆಬ್ಬಾಲೆ ಪ್ರೌಢಶಾಲೆಯ ಕಟ್ಟಡದ ಛಾವಣಿ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು ಸೋಮವಾರ ಮಾತನಾಡಿದರು.
ಇಂದಿನ ವಿದ್ಯಾರ್ಥಿಗಳು ಪ್ರಜಾಪ್ರಭುತ್ವದ ಮೂಲ ಆಶಯಗಳನ್ನು ಅರಿತು ಅದರಂತೆ ನಡೆಯುವ ಮೂಲಕ ಅದರ ಮೌಲ್ಯವನ್ನು ಗೌರವಿಸಬೇಕು.
ಕಳೆದ ಹಲವು ವರ್ಷಗಳಿಂದಲೂ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಯನ್ನು ನಡೆಸದೇ ಚುನಾಯಿತ ಸರ್ಕಾರಗಳು ನಿರ್ಲಕ್ಷ್ಯ ವಹಿಸಿರುವುದು ಪ್ರಜಾಪ್ರಭುತ್ವದ ಆಶಯಗಳಿಗೆ ಮಾಡುತ್ತಿರುವ ಅಪಚಾರವಾಗಿದೆ ಎಂದರು.
ಹೆಬ್ಬಾಲೆಯ ಮಾಜಿ ಯೋಧ ಎಚ್.ಎಸ್. ಕೃಷ್ಣಪ್ಪ ಮಾತನಾಡಿ, ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳನ್ನು ಅಗತ್ಯವಿದ್ದಷ್ಟೇ ಬಳಸಬೇಕು.
ವಿದ್ಯೆಗಿಂತಲೂ ಮುಖ್ಯವಾಗಿ ಉತ್ತಮ ಸಂಸ್ಕಾರಗಳನ್ನು ಹೊಂದಬೇಕು. ದೇಶಸೇವೆಗೆ ಸದಾ ಕಟಿಬದ್ಧರಾಗಿರಬೇಕು ಎಂದು ಹೇಳಿದರು.
ಹೆಬ್ಬಾಲೆ ಪ್ರೌಢಶಾಲೆಯ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಹೆಚ್.ವಿ. ಶಿವಪ್ಪ ಮಾತನಾಡಿ, ಶಾಲೆಯ ಹಳೆಯ ವಿದ್ಯಾರ್ಥಿಗಳಾದ ನಾಪಂಡ ಮುತ್ತಪ್ಪ ಹಾಗೂ ಮುದ್ದಪ್ಪ ಸಹೋದರರ ಸೇವೆ ಸ್ಮರಣೀಯವಾದುದು ಎಂದರು. ಉದ್ಯಮಿ ನಾಪಂಡ ಮುತ್ತಪ್ಪ, ನಿವೃತ್ತ ಯೋಧ ಪುಟ್ಟೇಗೌಡ ಮಾತನಾಡಿದರು.
ಡಾ.ಸಂಗೀತಾ ಮುದ್ದಪ್ಪ ಮಾತನಾಡಿ ವಿದ್ಯಾರ್ಥಿಗಳಿಗೆ ಅಗತ್ಯವಾದ ಆರೋಗ್ಯ ಮಾಹಿತಿ ಒದಗಿಸಿದರು.
ಶಿಥಿಲಾವಸ್ಥೆ ತಲುಪಿದ್ದ ಹೆಬ್ಬಾಲೆ ಪ್ರೌಢಶಾಲೆಯ ಹಳೆಯ ಛಾವಣಿ ತೆರವುಗೊಳಿಸಿ 25 ಲಕ್ಷ ರೂ. ಹಣ ಭರಿಸಿ ಅತ್ಯಾಕರ್ಷಕವಾಗಿ ನವೀಕರಿಸಿಕೊಟ್ಟ ಶಾಲೆಯ ಹಳೆಯ ವಿದ್ಯಾರ್ಥಿ ನಾಪಂಡ ಮುದ್ದಪ್ಪ ಹಾಗೂ ಮುತ್ತಪ್ಪ ಸಹೋದರರನ್ನು ಶಾಲಾ ಆಡಳಿತ ಮಂಡಳಿ ವತಿಯಿಂದ ಇದೇ ಸಂದರ್ಭ ಸನ್ಮಾನಿಸಲಾಯಿತು.
ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಕೊಲ್ಲಿ ರಾಜಶೇಖರ್, ಶ್ರೀ ಬನಶಂಕರಿ ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸುಬ್ರಹ್ಮಣ್ಯ, ಖಜಾಂಚಿ ಉಮೇಶ್ ಭಟ್, ಕಾಲೇಜು ವಿಭಾಗದ ಪ್ರಾಂಶುಪಾಲ ವಿಜಯಕುಮಾರ್, ಪ್ರೌಢಶಾಲಾ ಮುಖ್ಯ ಶಿಕ್ಷಕ ಬಸವರಾಜ ಶೆಟ್ಟಿ,
ವಿದ್ಯಾವರ್ಧಕ ಸಂಘದ ನಿರ್ದೇಶಕರಾದ ಪ್ರಸನ್ನರೆಡ್ಡಿ, ಮಹದೇವ, ಬಾಂಬೆ ಪುಟ್ಟರಾಜು, ಶ್ರೀಧರ, ಚಂದ್ರಕುಮಾರ್, ಸುದರ್ಶನ್, ರವಿ, ವಿಜಯಕುಮಾರ್, ಶಿಕ್ಷಕರಾದ ಕವಿತಾ ಪುಟ್ಟೇಗೌಡ, ಸಿ.ಡಿ. ಲೋಕೇಶ್, ವಿಜಯಕುಮಾರ್ ಇದ್ದರು.