ಕನ್ನಡ ಸಾಹಿತ್ಯ ಪರಿಷತ್ತಿನ ಮೂರ್ನಾಡು ಹೋಬಳಿ ಘಟಕದ ಕಚೇರಿಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ಕೇಶವ ಕಾಮತ್ ಉದ್ಘಾಟಿಸಿದರು. ಅವರೇಮಾದಂಡ ಶರಣ್ ಪೂಣಚ್ಚ, ಟಿ.ಪಿ. ರಮೇಶ್, ಈರಮಂಡ ಹರಿಣಿ ವಿಜಯ್ ಮತ್ತಿತರರು ಇದ್ದರು.
ಕನ್ನಡ ಸಾಹಿತ್ಯ ಪರಿಷತ್ತಿನ ಮೂರ್ನಾಡು ಹೋಬಳಿ ಘಟಕಕ್ಕೆ ಗ್ರಾಮ ಪಂಚಾಯಿತಿ ವತಿಯಿಂದ ನೂತನ ಕಚೇರಿ ದೊರೆತಿರುವುದು ಹೆಮ್ಮೆಯ ಸಂಗತಿಯಾಗಿದ್ದು, ಇದು ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೊಸ ವೇದಿಕೆಯಾಗಲಿದೆ ಎಂದು ಕಸಾಪ ಕೊಡಗು ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ಹೇಳಿದರು. ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮೂರ್ನಾಡು ಹೋಬಳಿ ಘಟಕದ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಒಂದು ವರ್ಷದ ನಿರಂತರ ಶ್ರಮದಿಂದಾಗಿ ಈ ಕಚೇರಿ ಲಭ್ಯವಾಗಿದೆ. ಕೊಡಗು ಜಿಲ್ಲೆಯಲ್ಲಿ ಕೆಲವೇ ಹೋಬಳಿ ಘಟಕಗಳಿಗೆ ಸ್ವಂತ ಕಚೇರಿ ಸೌಲಭ್ಯವಿದ್ದು, ಇದೀಗ ಮೂರ್ನಾಡು ಘಟಕವೂ ಆ ಪಟ್ಟಿಗೆ ಸೇರ್ಪಡೆಯಾಗಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಕಸಾಪ ಮೂರ್ನಾಡು ತಾಲೂಕು ಘಟಕದ ಅಧ್ಯಕ್ಷೆ ಈರಮಂಡ ಹರಿಣಿ ವಿಜಯ್ ಮಾತನಾಡಿ, ನೂತನ ಕಚೇರಿ ಕೇವಲ ನಾಲ್ಕು ಗೋಡೆಗಳಿಗೆ ಸೀಮಿತವಾಗದೆ ಸಾಹಿತ್ಯ, ಕಲೆ, ನಾಡು-ನುಡಿಯ ನಿರಂತರ ಚಟುವಟಿಕೆಗಳ ಕೇಂದ್ರವಾಗಬೇಕಿದೆ ಎಂದರು.
ಕಸಾಪ ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ ಸರ್ಕಾರಿ ಸಂಸ್ಥೆಯಿAದ ಕಚೇರಿಯನ್ನು ಪಡೆದುಕೊಳ್ಳುವುದು ಸವಾಲಿನ ಕೆಲಸ. ಅದನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಶ್ರಮ ಶ್ಲಾಘನೀಯ. ಕಳೆದ ಮೂರು ವರ್ಷಗಳಲ್ಲಿ ಹರಿಣಿ ವಿಜಯ್ ಅವರ ನೇತೃತ್ವದಲ್ಲಿ ಹಲವು ಅರ್ಥಪೂರ್ಣ ಕಾರ್ಯಕ್ರಮಗಳು ನಡೆದಿವೆ ಎಂದು ಹೇಳಿದರು.
ಕೊಡಗು ಜಿಲ್ಲಾ ಜಾನಪದ ಪರಿಷತ್ತು ಅಧ್ಯಕ್ಷ ಬಿ.ಜಿ. ಅನಂತಶಯನ ಮಾತನಾಡಿ ವಹಿಸಿಕೊಂಡ ಜವಾಬ್ದಾರಿಯನ್ನು ಕೊನೆಯವರೆಗೂ ಶ್ರದ್ಧೆಯಿಂದ ನಿರ್ವಹಿಸುವ ಗುಣ ಅಧ್ಯಕ್ಷರಲ್ಲಿದ್ದು, ಸಂಸ್ಥೆ ಉನ್ನತ ಮಟ್ಟಕ್ಕೆ ಬೆಳೆಯಲು ಇಂತಹ ನಾಯಕತ್ವ ಕಾರಣ ಎಂದರು.
ಸಮಾಜ ಸೇವಕ ಅವರೇಮಾದಂಡ ಶರಣ್ ಪೂಣಚ್ಚ, ಕಸಾಪ ಮಡಿಕೇರಿ ತಾಲೂಕು ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್, ಪಿಡಿಒ ಚಂದ್ರಮೌಳಿ, ಸಾಹಿತಿ ಕಿಗ್ಗಾಲು ಗಿರೀಶ್, ಬಡುವಂಡ ಅರುಣ್ ಅಪ್ಪಚ್ಚು, ಗ್ರಾಮ ಆಡಳಿತಾಧಿಕಾರಿ ಅಕ್ಷತಾ ಬಿ.ಶೆಟ್ಟಿ ಮಾತನಾಡಿದರು.
ಈರಮಂಡ ಹರಿಣಿ ವಿಜಯ್, ಮಠದ ಮನೆ ಧನಂಜಯ್, ಚಂದ್ರಮೌಳಿ ಹಾಗೂ ಅಬ್ದುಲ್ ಖಾದರ್ ಅವರನ್ನು ಇದೇ ಸಂದರ್ಭ ಸನ್ಮಾನಿಸಿ ಗೌರವಿಸಲಾಯಿತು. ಪ್ರಮುಖರಾದ ಮೀನಾಕ್ಷಿ ಕೇಶವ, ಮಡೆಯಂಡ ಸೂರಜ್, ಪುದಿಯೊಕ್ಕಡ ರಮ್ಯ ವಿಪನ್ ಮತ್ತಿತರರು ಇದ್ದರು.