ಗೋಣಿಕೊಪ್ಪಲು ಕಾವೇರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಡಾ. ಎಂ. ಅಪೂರ್ವ ಪ್ರಸನ್ನ, ಮಂಡೆಪAಡ ಸುಗುಣ ಮುತ್ತಣ್ಣ, ಪ್ರೊ. ಎಸ್. ಎಸ್. ಮಾದಯ್ಯ, ವಿಪ್ರ ನೀಲಮ್ಮ ಮತ್ತಿತರರು ಇದ್ದರು. 
ಕೊಡಗು

ಕಾವೇರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನೆ

ಗೋಣಿಕೊಪ್ಪಲು:
ಗೋಣಿಕೊಪ್ಪಲು ಕಾವೇರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನಾ ಸಮಾರಂಭ ಚೆಕ್ಕೆರ ಮುತ್ತಣ್ಣ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಿಟ್ಟಂಗಾಲದ ಕ್ರೇಡೋ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಫಿಜಿಶಿಯನ್ ಡಾ. ಎಂ. ಅಪೂರ್ವ ಪ್ರಸನ್ನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಚಾಟ್ ಜಿಪಿಟಿ ಹಾಗೂ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ಮಾನಸಿಕ ಆರೋಗ್ಯ, ಏಕಾಗ್ರತೆ, ಸಮಸ್ಯೆ ಪರಿಹರಿಸುವ ಸಾಮರ್ಥ್ಯ ಮತ್ತು ವೈಯಕ್ತಿಕ ಗೌಪ್ಯತೆಯ ಮೇಲೆ ಪ್ರತಿಕೂಲ ಪರಿಣಾಮಗಳು ಉಂಟು ಮಾಡುವ ಸಾಧ್ಯತೆ ಇದೆ. ತಂತ್ರಜ್ಞಾನವನ್ನು ಅಗತ್ಯವಿರುವ ಮಟ್ಟಿಗೆ ಮಾತ್ರ ಬಳಸಬೇಕು. ಯಾವುದೇ ಕೃತಕ ಬುದ್ಧಿಮತ್ತೆ ಸಾಧನವನ್ನು ಸಂಪೂರ್ಣವಾಗಿ ಅವಲಂಬಿಸುವ ಬದಲು, ಸ್ವತಂತ್ರ ಚಿಂತನೆ ಮತ್ತು ಸಮಸ್ಯೆ ಪರಿಹರಿಸುವ ಕೌಶಲ್ಯವನ್ನು ಬೆಳೆಸಿಕೊಳ್ಳುವುದು ಅಗತ್ಯ. ಸಾಮಾಜಿಕ ಜಾಲತಾಣಗಳು ಹಾಗೂ ಎಐ ಆಧಾರಿತ ಸೇವೆಗಳನ್ನು ಬಳಸುವಾಗ ವೈಯಕ್ತಿಕ ಮತ್ತು ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಳ್ಳುವುದನ್ನು ತಪ್ಪಿಸಬೇಕು. ಮಾನಸಿಕ ಒತ್ತಡ ಅಥವಾ ವೈಯಕ್ತಿಕ ಸಮಸ್ಯೆಗಳಿದ್ದರೆ ಯಂತ್ರಗಳಿಗಿAತ ಕುಟುಂಬದವರು, ಶಿಕ್ಷಕರು, ಸ್ನೇಹಿತರು ಅಥವಾ ವೈದ್ಯರೊಂದಿಗೆ ಚರ್ಚಿಸುವುದು ಸೂಕ್ತ. ವಿದ್ಯಾರ್ಥಿಗಳು ಮತ್ತು ಯುವಜನರು ದಿನನಿತ್ಯ ಪುಸ್ತಕ ಓದುವ ಅಭ್ಯಾಸ, ಕ್ರೀಡೆ ಹಾಗೂ ದೈಹಿಕ ಚಟುವಟಿಕೆಗಳಿಗೆ ಹೆಚ್ಚಿನ ಸಮಯ ಮೀಸಲಿಡಬೇಕು. ಮೊಬೈಲ್ ಫೋನ್ ಮತ್ತು ಸಾಮಾಜಿಕ ಜಾಲತಾಣಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಸಹಕಾರಿ. ಧೂಮಪಾನ, ಮದ್ಯಪಾನ ಹಾಗೂ ಇತರ ವ್ಯಸನಗಳಿಂದ ದೂರವಿರಬೇಕು. ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳುವುದರಿಂದ ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾವೇರಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಮಂಡೆಪAಡ ಸುಗುಣ ಮುತ್ತಣ್ಣ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿದ್ದರೂ ಕಾವೇರಿ ಕಾಲೇಜು ಉತ್ತಮ ಶೈಕ್ಷಣಿಕ ವಾತಾವರಣ, ಶಿಸ್ತು ಮತ್ತು ಗುಣಮಟ್ಟದ ಶಿಕ್ಷಣದ ಮೂಲಕ ಉತ್ತಮ ಹೆಸರು ಗಳಿಸಿರುವ ಶಿಕ್ಷಣ ಸಂಸ್ಥೆಯಾಗಿದೆ. ಇಲ್ಲಿ ವಿದ್ಯಾಭ್ಯಾಸ ಮಾಡಿದ ಬಹುತೇಕ ವಿದ್ಯಾರ್ಥಿಗಳು ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ. ವಿದ್ಯಾರ್ಥಿಗಳು ಶಿಸ್ತುಬದ್ಧ ಜೀವನವನ್ನು ರೂಢಿಸಿಕೊಳ್ಳಬೇಕು. ಸ್ವಚ್ಛ ಹಾಗೂ ಅಚ್ಚುಕಟ್ಟಾದ ಸಮವಸ್ತ್ರ ಧರಿಸಿ ಕಾಲೇಜಿಗೆ ಆಗಮಿಸಬೇಕು. ಉಡುಗೆ, ನಡವಳಿಕೆ ಮತ್ತು ವ್ಯಕ್ತಿತ್ವದಲ್ಲಿ ಸೌಜನ್ಯವನ್ನು ಬೆಳೆಸಿಕೊಳ್ಳುವುದು ಯಶಸ್ಸಿನ ಪ್ರಮುಖ ಅಂಶವಾಗಿದೆ ಎಂದು ಹೇಳಿದರು.
ದ್ವಿತೀಯ ಪಿಯುಸಿ ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಶೇ. 100 ರಷ್ಟು ಅಂಕಗಳಿಸಿದ ಫರ್ಹಾನ, ಬಿಸಿನೆಸ್ ಸ್ಟಡೀಸ್ ವಿಷಯದಲ್ಲಿ ಶೇ. 100ರಷ್ಟು ಅಂಕ ಪಡೆದ ಗಾನವಿ, ಕನ್ನಡ ಮಾಧ್ಯಮ ವಿದ್ಯಾರ್ಥಿಯಾಗಿ, ವಿಜ್ಞಾನ ವಿಭಾಗದಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದ ಪೂಜಾ ಹಾಗೂ ವೈದ್ಯಕೀಯ ಸೇವೆಗಾಗಿ ಡಾ. ಎಂ. ಅಪೂರ್ವ ಪ್ರಸನ್ನ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಪ್ರಾಂಶುಪಾಲ ಪ್ರೊ. ಎಸ್. ಎಸ್. ಮಾದಯ್ಯ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕರಾದ ವಿಪ್ರ ನೀಲಮ್ಮ, ಕಾವೇರಿ ಎಜುಕೇಷನ್ ಸೊಸೈಟಿ ನಿರ್ದೇಶಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಕಾವೇರಿ ಪದವಿ ಕಾಲೇಜು ಪ್ರಾಂಶುಪಾಲ ಡಾ. ಎಂ. ಬಿ. ಕಾವೇರಿಯಪ್ಪ, ಉಪನ್ಯಾಸಕರು ಹಾಗೂ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ವಿದ್ಯಾರ್ಥಿಗಳು ಇದ್ದರು.
ವಿದ್ಯಾರ್ಥಿಗಳಿಂದ ವಿವಿಧ ಸಂಸ್ಕಾತಿಕ ಕಾರ್ಯಕ್ರಮಗಳು ನಡೆದವು.