ನ0ದಾ ಬೆಳ್ಯಪ್ಪ 
ಕೊಡಗು

ಕೃಷಿಕರಿಗೆ ಅನುಕೂಲಕರವಾಗಿ ಕಾರ್ಯಯೋಜನೆಗಳ ವಿಳಂಬರಹಿತ ಅನುಷ್ಠಾನ ಮಾಡಿ

ಸುನಿಲ್ ಪೊನ್ನೇಟಿ
ಮಡಿಕೇರಿ:
ಜಿಲ್ಲೆಯ ಕಂದಾಯ ಇಲಾಖೆಯಿಂದ ಕೃಷಿಕರಿಗೆ ಅನುಕೂಲಕರವಾಗಿ ಕಾರ್ಯಯೋಜನೆಗಳ ವಿಳಂಬರಹಿತ ಅನುಷ್ಠಾನಕ್ಕಾಗಿ ಬಹಳ ಸೀಮಿತ ದಾಖಲೆಗಳು, ಕಾರ್ಯವಿಧಾನಗಳು ಮತ್ತು ವಿಳಂಬವಿಲ್ಲದೆ ನಿಯಮಗಳನ್ನು ರೂಪಿಸುವಂತೆ ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ ಸರ್ಕಾರ ಮತ್ತು ಶಾಸಕರುಗಳನ್ನು ಒತ್ತಾಯಿಸಿದೆ. ಆರ್.ಟಿ.ಸಿ.ಯಲ್ಲಿ ಪಟ್ಟೇದಾರರ ಹೆಸರನ್ನು ಸರಳೀಕೃತ ರೀತಿಯಲ್ಲಿ ತೆಗೆದುಹಾಕಲು ಅಂಗೀಕರಿಸಿದ ಕರ್ನಾಟಕ ಭೂ ಕಂದಾಯ ಕಾಯ್ದೆಗೆ ಕರ್ನಾಟಕ ವಿಧಾನಮಂಡಲದಲ್ಲಿ ತಂದ ತಿದ್ದುಪಡಿಯನ್ನು ಅಸೋಸಿಯೇಷನ್ ಸ್ವಾಗತಿಸಿದೆ. ಈ ಸಂಬAಧ ಪ್ರತಿಕಾ ಹೇಳಿಕೆ ನೀಡಿರುವ ಸಿಪಿಎ ಅಧ್ಯಕ್ಷ ಎ. ನಂದಾಬೆಳ್ಯಪ್ಪ ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಮತ್ತು ಕೊಡಗು ಸೇವಾ ಕೇಂದ್ರ ಕಳೆದ 6 ವರ್ಷಗಳಿಂದ ಈ ವಿಚಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ 2011/12 ರಲ್ಲಿ ರಾಷ್ಟ್ರಪತಿಗಳ ಅನುಮೋದನೆ ಪಡೆದ ಕೊಡಗು ಜಿಲ್ಲೆಯ ಸಾಗು ಬಾಣೆ ಮತ್ತು ಜಮ್ಮಾ ಬಾಣೆ ಜಮೀನುಗಳ ಕಂದಾಯ ನಿಗದಿಯನ್ನು ಸರಳಗೊಳಿಸುವ ಬೇಡಿಕೆಯೂ ಸೇರಿದೆ.
ಸಾಗು ಬಾಣೆ ಮತ್ತು ಜಮ್ಮಾ ಭಾಣೆ ಜಾಗಗಳ ಕಂದಾಯ ನಿಗದಿ 2011-12ರ ತಿದ್ದುಪಡಿಯ ಈ ಕಾಯ್ದೆಗೆ ನಿಯಮಗಳನ್ನು ರೂಪಿಸದ ಕಾರಣ ಅಗತ್ಯವಿಲ್ಲದ ದಾಖಲೆಗಳನ್ನು ಅಧಿಕಾರಿಗಳು ಅರ್ಜಿದಾರರಿಂದ ಕೇಳುತ್ತಿರುವುದು ಅನಗತ್ಯವಾಗಿ ಕಡತ ವಿಲೇವಾರಿ ವಿಳಂಬಕ್ಕೆ ಕಾರಣವಾಗುತ್ತಿದೆ. ಹಾಗಾಗಿ ಕಂದಾಯ ನಿಗದಿ ಮೇಲಿನ ತಿದ್ದುಪಡಿ ಮತ್ತು ಪಟ್ಟೆದಾರರ ಹೆಸರು ವಜಾಮಾಡುವ ಕಾಯ್ದೆ ತಿದ್ದುಪಡಿಗೆ ಆದಷ್ಟು ಬೇಗ ನಿಯಮಗಳನ್ನು ರೂಪಿಸಿ ಜಿಲ್ಲಾ ಕಂದಾಯ ಇಲಾಖೆಗೆ ತಕ್ಷಣ ಜಾರಿಗೆ ತರಲು ನಿರ್ದೇಶನಗಳನ್ನು ನೀಡಬೇಕಾಗಿ ಸಿಪಿಎ ಕೋರಿದೆ.
ವಿಭಾಗ ಪತ್ರ, ಪೌತಿಖಾತೆ, ಮರಣ ಪ್ರಮಾಣಪತ್ರ, ವಂಶಾವಳಿಪಟ್ಟಿ ಮತ್ತು ಪಟ್ಟೇದಾರರ ಕುಟುಂಬದ ಒಪ್ಪಿಗೆಯನ್ನು ಅಧಿಕಾರಿಗಳು ಅರ್ಜಿದಾರರಿಗೆ ಬಲವಂತಪಡಿಸಬಾರದು ಎಂದೂ ಸಿಪಿಎ ಮೂಲಕ ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಕೊಡಗು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದೂ ಅಧ್ಯಕ್ಷ ಎ. ನಂದಾಬೆಳ್ಯಪ್ಪ ತಿಳಿಸಿದ್ದಾರೆ.