ವಿರಾಜಪೇಟೆ: ಒಂದೇ ಲೈನ್ ಮನೆಯಲ್ಲಿ ವಾಸವಿದ್ದ ತೋಟದ ಕಾರ್ಮಿಕರ ನಡುವೆ ಅಕ್ರಮ ಸಂಬಂಧ ವಿಚಾರಕ್ಕೆ ಮಂಗಳವಾರ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.
ವಿರಾಜಪೇಟೆ ತಾಲೂಕು ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇಟೋಳಿ ಗ್ರಾಮದ ನಿವಾಸಿ ಅಮ್ಮಣಕುಟ್ಟಂಡ ಗಣೇಶ್ ಎಂಬುವವರ ಲೈನ್ ಮನೆಯಲ್ಲಿ ವಾಸವಿದ್ದ ಕಾರ್ಮಿಕ ಪಣಿ ಎರವರ ಸಂಜು ಅಲಿಯಾಸ್ ಅಯ್ಯಪ್ಪ (19) ಹತ್ಯೆಯಾದವ. ಪಣಿ ಎರವರ ಅಪ್ಪು (58) ಕೊಲೆ ಮಾಡಿದವ.
ವಿರಾಜಪೇಟೆ ಆರ್ಜಿ ಬೇಟೋಳಿ ಗ್ರಾಮದ ಎ.ಗಣೇಶ್ ಅವರ ತೋಟದ ಲೈನ್ ಮನೆಯಲ್ಲಿ ಕೊಲೆಯಾದ ಸಂಜು ಮತ್ತು ಅಪ್ಪು ವಾಸವಿದ್ದರು. ಮೂರು ತಿಂಗಳ ಹಿಂದೆ ಕೆಲಸ ಒತ್ತಡದ ನಿಮಿತ್ತ ಗಣೇಶ್ ಮಂಜು ಮತ್ತು ಸಿಂಧು ಕಾರ್ಮಿಕ ದಂಪತಿಯನ್ನು ಸಂಪರ್ಕಿದರು. ಮಾಲೀಕರ ಅಪೇಕ್ಷೆ ಮೇರೆಗೆ ಕಾರ್ಮಿಕ ದಂಪತಿ ಹಿರಿಯ ಮಗಳು ಕಾವೇರಿಯನ್ನು ಅಣ್ಣನ ಬಳಿ ಬಿಟ್ಟು ಎರಡನೇ ಮಗಳು ದಿವ್ಯಾಳೊಂದಿಗೆ ಗಣೇಶ್ ಅವರ ಲೈನ್ ಮನೆಗೆ ಆಗಮಿಸಿದರು. ಕೆಲಸದ ಬಗ್ಗೆ ಮಾತನಾಡಲು ಸಂಜು, ಮಂಜು ಮನೆಗೆ ಬಂದು ಹೋಗುವುದು ಮಾಡುತ್ತಿದ್ದ. ಇದನ್ನು ಗಮನಿಸಿದ್ದ ಅಪ್ಪು ಮಂಜು ಪತ್ನಿ ಸಿಂಧು ಜತೆಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಅಪಾರ್ಥ ಹೊಂದಿದ್ದ. ಇದೇ ವಿಷಯವಾಗಿ ಹಲವು ಬಾರಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಅಲ್ಲದೆ, ಜಗಳವೂ ನಡೆದಿತ್ತು.
ಮಂಗಳವಾರ ಬೆಳಗ್ಗೆ ತೋಟದ ಮಾಲೀಕ ಗಣೇಶ್ ಹೊಸ ಮನೆ ಕಟ್ಟುವ ಸ್ಥಳಕ್ಕೆ ಕಾರ್ಮಿಕರಾದ ಸಂಜು ಮತ್ತು ಮಂಜು ತೆರಳಲು ತಿಳಿಸಿದ್ದಾರೆ. ನಂತರ ಸಿಂಧುಗೆ ಹೂವಿನ ಗಿಡಕ್ಕೆ ನೀರು ಹಾಕಲು ತಿಳಿದ್ದಾರೆ. ಕೆಲಸ ಮುಗಿದ ಬಳಿಕ ಸಂಜೆ ಮಂಜು ಮತ್ತು ಸಂಜು ಲೈನ್ ಮನೆಗೆ ಆಗಮಿಸಿದ್ದರು. ಈ ವೇಳೆ ಸಂಜು ಮತ್ತು ಅಪ್ಪು ನಡುವೆ ಜಗಳ ಶುರುವಾಗಿದೆ. ಸಿಟ್ಟಿನಿಂದ ಅಪ್ಪು ಮನೆಯಲ್ಲಿದ್ದ ಕಪಾತ್ ಕತ್ತಿಯಿಂದ ಸಂಜುವಿನ ಮೇಲೆ ಪ್ರಹಾರ ಮಾಡಿದ್ದಾನೆ. ಪರಿಣಾಮ ಸಂಜುವಿನ ಕುತ್ತಿಗೆ ಮತ್ತು ಕಾಲಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಬಳಿಕ ಅಪ್ಪು ಕತ್ತಿಯೊಂದಿಗೆ ಪರಾರಿಯಾಗಿದ್ದಾನೆ.
ರಕ್ತದ ಮಡುವಿನಲ್ಲಿದ್ದ ಸಂಜುವನ್ನು ಗಮನಿಸಿದ ಕಾರ್ಮಿಕ ದಂಪತಿ ಭಯಗೊಂಡು ಮಾಲೀಕ ಗಣೇಶ್‌ಗೆ ಮಾಹಿತಿ ತಿಳಿಸಿದ್ದಾರೆ. ಕಾರ್ಮಿಕರೊಂದಿಗೆ ಗಣೇಶ್ ಗಾಯಳುವನ್ನು ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿಗೆ ತೆರಳಲು ತಿಳಿಸಿದ್ದಾರೆ. ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಸಂಜು ಮೃತಪಟ್ಟ. ಸಿಂಧು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.