ಕುಶಾಲನಗರ ಅನುಗ್ರಹ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ವತಿಯಿಂದ ವೈಜ್ಞಾನಿಕ ಮನೋಭಾವ ಹಾಗೂ ವೈಚಾರಿಕತೆ ಕುರಿತು ಏರ್ಪಡಿಸಿದ್ದ ಉಪನ್ಯಾಸದಲ್ಲಿ ಅಧ್ಯಾಪಕ ಮೆ.ನಾ.ವೆಂಕನಾಯಕ್ ಮಾತನಾಡಿದರು. ಸರಳಕುಮಾರಿ, ಎನ್.ಎಸ್.ಕುಮಾರ್, ಟಿ.ಬಿ.ಮಂಜುನಾಥ್ ಇದ್ದರು.
ಸಮಾಜದಲ್ಲಿ ಬೇರೂರಿರುವ ಮೌಢ್ಯ, ಕಂದಾಚಾರಗಳನ್ನು ತೊಡೆದು ಹಾಕುವ ಮೂಲಕ ವೈಜ್ಞಾನಿಕ ಪ್ರಜ್ಞೆ ಬೆಳೆಸುವುದು ಇಂದಿನ ಅಗತ್ಯವಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸದಸ್ಯ ಮೆ.ನಾ. ವೆಂಕಟನಾಯಕ್ ಹೇಳಿದರು. ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ (ಕೆ.ಜಿ.ವಿ.ಎಸ್) ಯ ಕೊಡಗು ಜಿಲ್ಲಾ ಘಟಕದ ವತಿಯಿಂದ ಕುಶಾಲನಗರ ಪಟ್ಟಣದ ಅನುಗ್ರಹ ಪದವಿ ಪೂರ್ವ ಕಾಲೇಜಿನಲ್ಲಿ ವೈಜ್ಞಾನಿಕ ಮನೋಭಾವ ಹಾಗೂ ವೈಚಾರಿಕತೆ ಕುರಿತು ಭಾನುವಾರ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾಜದಲ್ಲಿ ವೈಚಾರಿಕತೆ ಬೆಳೆಸುವ ಮೂಲಕ ಸಮಾಜದಲ್ಲಿನ ಮೌಢ್ಯ, ಕಂದಾಚಾರಗಳನ್ನು ನಿರ್ಮೂಲನ ಮಾಡಲು ಪಣ ತೊಡಬೇಕು. ಕ್ರಾಂತಿಕಾರಿ ಬಸವಣ್ಣನವರು 12ನೇ ಶತಮಾನದಲ್ಲಿ ರಚಿಸಿದ ವಚನಗಳಲ್ಲಿ ಹಾಗೂ ರಾಷ್ಟ್ರಕವಿ ಕುವೆಂಪು ಅವರ ಕಾವ್ಯಗಳಲ್ಲಿ ಅಂಧ ಶ್ರದ್ಧೆ ತೊಲಗಿಸಿ ವೈಜ್ಞಾನಿಕ ಪ್ರಜ್ಞೆ ಬೆಳೆಸಿಕೊಳ್ಳುವ ವೈಚಾರಿಕ ವಿಚಾರಗಳನ್ನು ಉಲ್ಲೇಖಿಸಲಾಗಿದೆ ಎಂದರು.
ಸಮಾಜದಲ್ಲಿ ವೈಚಾರಿಕತೆ ಬೆಳೆಸುವ ಕುರಿತು ಸಭಿಕರೊಂದಿಗೆ ಸಂವಾದ ನಡೆಸಿದ ಮೆ.ನಾ. ವೆಂಕಟನಾಯಕ್, ಸಮಾಜದಲ್ಲಿ ನಾಗರಿಕತೆ ಜತೆಗೆ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಬದುಕುವ ಮೂಲಕ ಮೌಢ್ಯದ ವಿರುದ್ಧ ಧ್ವನಿಯಾಗಿ ಎಲ್ಲರೂ ಕಾರ್ಯ ನಿರ್ವಹಿಸಬೇಕಾಗಿದೆ. ಸಮಾಜದಲ್ಲಿ ಅನಾದಿಕಾಲದಿಂದಲೂ ಬೆಳೆದು ಬಂದಿರುವ ಮೂಢನಂಬಿಕೆಗಳAತಹ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಟ ನಡೆಸಿ ಜನರಲ್ಲೂ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜ್ಞಾನ ವಿಜ್ಞಾನ ಸಮಿತಿಯ ತಾಲೂಕು ಘಟಕದ ಅಧ್ಯಕ್ಷ ಟಿ.ಬಿ. ಮಂಜುನಾಥ್ ಮಾತನಾಡಿ,
ಯುವ ಜನಾಂಗ ಎಚ್ಚೆತ್ತು ಮೌಢ್ಯದ ವಿರುದ್ಧ ಹೋರಾಟ ನಡೆಸಿ ಆಧುನಿಕತೆಗೆ ಅನುಗುಣವಾಗಿ ಬದುಕುವ ಕಲೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾಧ್ಯಕ್ಷೆ ಎಂ.ಟಿ. ಸರಳಕುಮಾರಿ ಮಾತನಾಡಿ ಜನರನ್ನು ಬಾಧಿಸುತ್ತಿರುವ ಮೌಢ್ಯಗಳ ಬಗ್ಗೆ ಜನ ಜಾಗೃತಿ ಮೂಡಿಸುವ ಚಟುವಟಿಕೆಗಳಲ್ಲಿ ಎಲ್ಲಾ ಸಂಘಟನೆಗಳು ಒಗ್ಗೂಡಿ ಹೋರಾಟ ನಡೆಸಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಎನ್.ಎಸ್. ಕುಮಾರ್ ಇಂತಹ ಕಾರ್ಯಕ್ರಮಗಳು ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಸಹಕಾರಿಯಾಗಿವೆ ಎಂದು ಹೇಳಿದರು.
ಸಂವಾದದಲ್ಲಿ ಎಂ.ಎಸ್. ಕೇಶವಮೂರ್ತಿ, ಎಂ.ಜಿ. ಮಾಚಯ್ಯ, ಎಚ್.ಎನ್. ಆಕಾಶ್, ಕೆ.ಎನ್. ಸುಹೈಬ್, ಪ್ರಮೋದ್, ರಾಜು ಇತರರು ಇದ್ದರು.