ಕೂಡಿಗೆಯ ಶ್ರೀ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಏರ್ಪಡಿಸಿದ್ದ ವಿಶ್ವ ಪರಿಸರ ದಿನ ಕಾರ್ಯಕ್ರಮದಲ್ಲಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಶೇಖರ್ ಪಾಲ್ಗೊಂಡಿದ್ದರು. ಕೆ.ಆರ್. ಭಾರತಿ, ಅಮೃತಾ, ಕೆ.ಡಿ. ನೀತಾ, ಹೆಚ್.ಬಿ. ದಿನೇಶಾಚಾರಿ ಮತ್ತಿತರರು ಇದ್ದರು. 
ಕೊಡಗು

ಪ್ರಕೃತಿಗೆ ಕೆಡುಕು ಮಾಡಿದರೆ ಪ್ರತಿಫಲವೂ ಕೆಡುಕು

ಕುಶಾಲನಗರ:
ಪ್ರಕೃತಿಗೆ ಕೆಡುಕು ಮಾಡಿದರೆ ಪ್ರತಿಫಲವಾಗಿ ಕೆಡುಕೇ ದೊರೆಯಲಿದೆ ಎಂದು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಶೇಖರ್ ಹೇಳಿದರು.
ಕುಶಾಲನಗರ ತಾಲೂಕು ಕೂಡಿಗೆಯ ಶ್ರೀ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ವಿಶ್ವ ಪರಿಸರ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಹಸಿರೇ ಉಸಿರು. ಪ್ರಕೃತಿಯಿಂದ ಮನುಷ್ಯ ಹೊರತು ಮನುಷ್ಯನಿಗಾಗಿ ಪ್ರಕೃತಿ ಅಲ್ಲ. ಇತ್ತೀಚಿಗಿನ ಪ್ರಕೃತಿಯ ವಿಕೋಪಗಳಿಗೆ ನಾವೇ ನೇರ ಕಾರಣ. ಪ್ರಕೃತಿಗೆ ಮಾಡುತ್ತಿರುವ ಹಾನಿ, ಮಾಲಿನ್ಯಗಳೇ ಕಾರಣ. ನಮಗೆ ಒಳಿತು ಮಾಡಿದ ಪ್ರಕೃತಿಗೆ ನಾವು ಕೆಡುಕು ಮಾಡಿದರೆ ನಮಗೆ ದೊರೆಯುವುದು ಕೆಡುಕೇ ಆಗಿರುತ್ತದೆ. ಹಾಗಾಗಿ ಪ್ರಕೃತಿಯನ್ನು ಸಂರಕ್ಷಿಸೋಣ ಎಂದರು.
ಪ್ರಾಂಶುಪಾಲೆ ಕೆ.ಆರ್. ಭಾರತಿ ಮಾತನಾಡಿ ಧರ್ಮೊ ರಕ್ಷಿತ ರಕ್ಷಿತಃ ಎಂಬ ಧ್ಯೇಯವಿತ್ತು. ಅಂತೆಯೇ ಇಂದು ವೃಕ್ಷೋ ರಕ್ಷತಿ ರಕ್ಷಿತಃ ಎಂಬ ಘೋಷ ವಾಕ್ಯವಿದೆ. ಐಪಿಎಲ್ ಪಂದ್ಯಾವಳಿಯಲ್ಲಿಯೂ ಗಿಡ ನೆಡುವ ಧ್ಯೇಯ ಹೊಂದಲಾಗಿದೆ. ನಾವು ಸಹ ಗಿಡಗಳನ್ನು ನೆಟ್ಟು ಬೆಳೆಸಬೇಕು. ಒಂದು ಮರ ಒಂದು ವನ ಒಂದು ಭವಿಷ್ಯ ಎಂಬ ನುಡಿಯಲ್ಲಿ ಬದುಕೋಣ ಎಂದು ಹೇಳಿದರು.
ಶಿಕ್ಷಕಿ ಅಮೃತಾ ಮಾತನಾಡಿ ಈ ಭೂಮಿ ಹಚ್ಚ ಹಸಿರಾಗಿ, ಆಕಾಶ ನೀಲಿಯಾಗಿ ಕಂಗೊಳಿಸಲು ಈ ಪರಿಸರವೇ ಕಾರಣ. ಪರಿಸರ ಪ್ರೇಮಿಗಳಾದ ನಾವೆಲ್ಲರೂ ಪೃಕೃತಿಯನ್ನು ರಕ್ಷಿಸಿ, ಪೋಷಿಸಿ, ಬೆಳೆಸೋಣ ಎಂದರು.
ಜಿಲ್ಲಾ ಸಮನ್ವಯಾಧಿಕಾರಿ ಕೆ.ಡಿ. ನೀತಾ, ಸಹ ಶಿಕ್ಷಕ ಹೆಚ್.ಬಿ. ದಿನೇಶಾಚಾರಿ, ನಾಗೇಂದ್ರ, ಮಂಜು, ಮೀನಾ, ದೊಡ್ಡಯ್ಯ, ಕವಿತಾ, ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.