ವಿರಾಜಪೇಟೆಯ ಕಾವೇರಿ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾನೂನಿನ ಅರಿವು ಮತ್ತು ಮಹಿಳೆಯರಿಗೆ ಲೈಂಗಿಕ ಶಿಕ್ಷಣದ ಮಹತ್ವ ಕುರಿತ ಕಾರ್ಯಕ್ರಮದಲ್ಲಿ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರತಿಯೊಬ್ಬ ಮಹಿಳೆಯೂ ತಮ್ಮ ಹಕ್ಕುಗಳು, ಕರ್ತವ್ಯಗಳು ಹಾಗೂ ಕಾನೂನಿನ ರಕ್ಷಣೆಯ ಬಗ್ಗೆ ತಿಳಿದಿದ್ದರೆ ಆತ್ಮವಿಶ್ವಾಸದಿಂದ ಬದುಕಬಹುದು ಎಂದು ವಿರಾಜಪೇಟೆಯ ವಕೀಲೆ ಅನುಪಮ ಕಿಶೋರ್ ಹೇಳಿದರು. ವಿರಾಜಪೇಟೆಯ ಕಾವೇರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಕಾನೂನಿನ ಅರಿವು ಮತ್ತು ಮಹಿಳೆಯರಿಗೆ ಲೈಂಗಿಕ ಶಿಕ್ಷಣದ ಮಹತ್ವ ಕುರಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕಾನೂನಿನ ಜಾಗೃತಿ, ಕಾನೂನಿನ ಅರಿವು ಪ್ರತಿಯೊಬ್ಬ ಮಹಿಳೆಗೆ ಅತ್ಯಗತ್ಯ. ಗೃಹ ಹಿಂಸೆ, ಲೈಂಗಿಕ ಕಿರುಕುಳ, ವರದಕ್ಷಿಣೆ ಕಿರುಕುಳ, ಬಾಲ್ಯ ವಿವಾಹ, ಕೆಲಸದ ಸ್ಥಳದಲ್ಲಿನ ಕಿರುಕುಳ ಮುಂತಾದ ಅನ್ಯಾಯಗಳ ವಿರುದ್ಧ ಧೈರ್ಯವಾಗಿ ಕ್ರಮ ಕೈಗೊಳ್ಳಲು ಕಾನೂನಿನ ಅರಿವು ನೆರವಾಗುತ್ತದೆ. ಇದು ಮಹಿಳೆಯರ ಸಬಲೀಕರಣಕ್ಕೆ ಪ್ರಮುಖ ಅಡಿಪಾಯವಾಗಿದೆ. ಪ್ರತಿಯೊಬ್ಬ ನಾಗರಿಕನೂ ತನ್ನ ಹಕ್ಕುಗಳನ್ನು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ. ಅನ್ಯಾಯ, ಶೋಷಣೆ ಮತ್ತು ದೌರ್ಜನ್ಯಗಳ ವಿರುದ್ಧ ಧೈರ್ಯವಾಗಿ ನಿಲ್ಲಲು ಶಕ್ತಿ ನೀಡುತ್ತದೆ. ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರಿಕರಿಗೆ ಕಾನೂನಿನ ರಕ್ಷಣೆಯ ಬಗ್ಗೆ ಅರಿವು ಮೂಡಿಸುತ್ತದೆ. ಸಮಾಜದಲ್ಲಿ ನ್ಯಾಯ, ಶಾಂತಿ ಮತ್ತು ಸಮಾನತೆಯನ್ನು ಕಾಪಾಡಲು ಸಹಕಾರಿಯಾಗುತ್ತದೆ. ಅಪರಾಧಗಳನ್ನು ತಡೆಗಟ್ಟಲು ಮತ್ತು ಕಾನೂನನ್ನು ಗೌರವಿಸಲು ಪ್ರೇರೇಪಿಸುತ್ತದೆ. ಜವಾಬ್ದಾರಿಯುತ ನಾಗರಿಕರನ್ನು ರೂಪಿಸುತ್ತದೆ ಎಂದರು.
ನಿವೃತ ಕ್ಯಾಪ್ಟನ್ ಬಾಚುರ ಸಿ. ಪೂಣಚ್ಚ, ಪ್ರಾಂಶುಪಾಲ ಎಂ.ಕೆ. ಪದ್ಮ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕಿ ಕೆ. ಪಿ. ಗಾಯತ್ರಿ, ದಮಯಂತಿ, ದಿವ್ಯ, ರಾಷ್ಟೀಯ ಸೇವಾ ಯೋಜನಾ ಘಟಕದ ಕಾರ್ಯಕ್ರಮಾಧಿಕಾರಿ ಅನುಪಮ ತಿಮ್ಮಯ್ಯ, ಉಪನ್ಯಾಸಕಿ ಎಂ.ಪಿ. ಡೈನ ಸೋಮಯ್ಯ, ಉಪನ್ಯಾಸಕ ವೃಂದ, ಸ್ವಯಂಸೇವಕರು ಹಾಗೂ ವಿದ್ಯಾರ್ಥಿಗಳು ಇದ್ದರು.