ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆಯಲ್ಲಿ ಕೆ.ಬಿ.ಸಂಜೀವ್, ಡಾ.ಎಂ.ಬಿ. ಕಾವೇರಿಯಪ್ಪ, ಡಾ.ನಯನ ತಮ್ಮಯ್ಯ, ಕೆ.ಟಿ ಸೀತಮ್ಮ, ಡಾ.ಸಿ.ಟಿ ಕಾವ್ಯಾ, ಮಂಜುನಾಥ್ ಇದ್ದರು. 
ಕೊಡಗು

ವಿದ್ಯಾರ್ಥಿಗಳಿಗೆ ಮಾನವ ಹಕ್ಕುಗಳ ಅರಿವು ಅಗತ್ಯ

ಲಲಾಟಾಕ್ಷ ಎಸ್
ಪೊನ್ನಂಪೇಟೆ: ವಿದ್ಯಾರ್ಥಿಗಳಿಗೆ ಮಾನವ ಹಕ್ಕುಗಳ ಬಗ್ಗೆ ಅರಿವು ಅಗತ್ಯ ಎಂದು ವಕೀಲ ಕೆ.ಬಿ.ಸಂಜೀವ್ ಹೇಳಿದರು.
ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ಬುಧವಾರ ಐಕ್ಯೂಎಸಿ ಹಾಗೂ ಮಾನವ ಹಕ್ಕುಗಳ ಸಂಘದ ವತಿಯಿಂದ ಆಯೋಜಿಸಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾಗರಿಕ ಸಮಾಜದ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಘೋಷಿಸಲಾದ ಮಾನವ ಹಕ್ಕುಗಳನ್ನು 1948 ಡಿಸೆಂಬರ್ 10ರಂದು ವಿಶ್ವಸಂಸ್ಥೆ ಅಂಗೀಕರಿಸಿತು. ಅಂದಿನಿಂದ ಡಿಸೆಂಬರ್ 10 ರಂದು ವಿಶ್ವ ಮಾನವ ಹಕ್ಕುಗಳ ದಿನವನ್ನಾಗಿ ಆಚರಿಸಲಾಗುತ್ತಿದೆ. ಮನುಷ್ಯ ಹುಟ್ಟುವ ಮುನ್ನ ಭ್ರೂಣಾವಸ್ಥೆಯಲ್ಲಿರುವಾಗಿನಿಂದಲೇ ಮಾನವ ಹಕ್ಕುಗಳು ಎಲ್ಲ ಮಾನವರಲ್ಲಿಯೂ ಅಂತರ್ಗತವಾಗಿರುತ್ತವೆ ಎಂದರು.
ರಾಷ್ಟ್ರೀಯತೆ, ವಾಸಸ್ಥಳ, ಲಿಂಗ, ರಾಷ್ಟ್ರೀಯ ಅಥವಾ ಜನಾಂಗೀಯ ಮೂಲ, ಬಣ್ಣ, ಧರ್ಮ, ಭಾಷೆ, ಸ್ಥಾನಮಾನ ಯಾವುದೇ ತರಹದ ಏನೇ ಇರಲಿ, ಪ್ರತಿಯೊಬ್ಬ ವ್ಯಕ್ತಿ ತಾರತಮ್ಯವಿಲ್ಲದೆ ಮಾನವ ಹಕ್ಕುಗಳನ್ನು ಚಲಾಯಿಸಲು ಅರ್ಹನಾಗಿರುತ್ತಾನೆ. ಮಾನವ ಬದುಕಿಗೆ ಅತ್ಯವಶ್ಯಕವಾಗಿರುವ ಮಾನವ ಹಕ್ಕುಗಳ ಬಗ್ಗೆ ವಿದ್ಯಾರ್ಥಿಗಳು ತಿಳಿವಳಿಕೆ ಹೊಂದಿರಬೇಕು. ಇತರರಿಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಪ್ರಾಂಶುಪಾಲ ಡಾ.ಎಂ.ಬಿ.ಕಾವೇರಿಯಪ್ಪ ಮಾತನಾಡಿ, ಭಾರತ ಆದಿಕಾಲದಿಂದಲೂ ಮಾನವ ಹಕ್ಕುಗಳನ್ನು ಗೌರವಿಸುತ್ತಾ ಬಂದಿದ್ದು, ಆಧುನಿಕ ಶಿಕ್ಷಣ ಪದ್ಧತಿ ಬಂದ ನಂತರ ನಮ್ಮಲ್ಲಿ ಮಾನವ ಹಕ್ಕುಗಳ ಬಗ್ಗೆ ಹೆಚ್ಚು ಜಾಗೃತಿ ಮೂಡಲಾರಂಭಿಸಿದೆ. ನಾವೆಲ್ಲರೂ ಕುವೆಂಪು ಅವರ ವಿಶ್ವಮಾನವ ತತ್ವವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಜಾತಿ, ಧರ್ಮ, ಲಿಂಗ, ಮೇಲು, ಕೀಳು ಎಂಬ ಭೇದ-ಭಾವವನ್ನು ಬಿಟ್ಟು ಮಾನವವನ್ನು ಮಾನವನನ್ನಾಗಿ ನೋಡುವ ಮನಸ್ಥಿತಿ ಬೆಳೆಸಿಕೊಂಡು ಸಾಧನೆ ಹಾದಿಯಲ್ಲಿ ಮುನ್ನಡೆಯಬೇಕಾಗಿದೆ ಎಂದರು.
ಐಕ್ಯೂಎಸಿ ಸಂಚಾಲಕರಾದ ಡಾ.ನಯನ ತಮ್ಮಯ್ಯ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಕೆ.ಟಿ.ಸೀತಮ್ಮ, ರಾಜ್ಯಶಾಸ್ತ್ರ ಉಪನ್ಯಾಸಕರಾದ ಡಾ.ಸಿ.ಟಿ.ಕಾವ್ಯಾ, ಮಂಜುನಾಥ್, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.