ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಅಭಿವೃದ್ಧಿಪಡಿಸಿದ ಹುಲಸೆ ಕೆರೆಗೆ ಮಹಿಳೆಯರು ಬಾಗಿನ ಅರ್ಪಿಸಿದರು.
ಶನಿವಾರಸಂತೆ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಆರ್ಥಿಕ, ಶಿಕ್ಷಣ, ಸಾಮಾಜಿಕ, ಕೃಷಿ, ಜಲ ಸಂಪನ್ಮೂಲ, ಆರೋಗ್ಯ, ಸಾಂಸ್ಕೃತಿಕ, ಸ್ವಚ್ಛತೆ, ಪರಿಸರ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸೋಮವಾರಪೇಟೆ ತಾಲೂಕು ಯೋಜನಾಧಿಕಾರಿ ಹನುಮಂತ ಅಂಗಡಿ ಅಭಿಪ್ರಾಯಪಟ್ಟರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೋಮವಾರಪೇಟೆ, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟಗಳು, ಕೊಡ್ಲಿಪೇಟೆ ಮತ್ತು ಶನಿವಾರಸಂತೆ ವಲಯ ಹಂಡ್ಲಿ ಗ್ರಾಪಂಯ ಹುಲಸೆ ಕೆರೆ ಅಭಿವೃದ್ಧಿ ಸಮಿತಿಯಿಂದ ಹುಲಸೆ ಗ್ರಾಮದಲ್ಲಿ ಅಭಿವದ್ಧಿಪಡಿಸಿದ 865ನೇ ನಮ್ಮೂರು ನಮ್ಮ ಕೆರೆಗೆ ಬಾಗಿನ ಅರ್ಪಣೆ ಮತ್ತು ಕೆರೆ ಹಸ್ತಾಂತ ಕಾರ್ಯಕ್ರಮದಲ್ಲಿ ಮಾತನಾಡಿದರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ರೂಪಿಸಿರುವ ಹಲವು ಕಾರ್ಯಕ್ರಮಗಳು, ಅವರ ದೂರದೃಷ್ಟಿ ಮತ್ತು ಮಾರ್ಗದರ್ಶನದ ಮೂಲಕ ಸಮಾಜದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು.
ಕೃಷಿ ಮತ್ತು ರೈತರ ಹಿತದೃಷ್ಟಿಯಿಂದ ಗ್ರಾಮಾಭಿವೃದ್ಧಿ ಸಂಸ್ಥೆಯು ರಾಜ್ಯದಲ್ಲಿ ಈವರೆಗೆ ಒಂದು ಸಾವಿರಕ್ಕಿಂತ ಹೆಚ್ಚಿನ ಕೆರೆಗಳನ್ನು ಹೂಳೆತ್ತಿ ಅಭಿವೃದ್ಧಿಪಡಿಸಿ ರೈತರ ಅನುಕೂಲಕ್ಕೆ ಹಸ್ತಾಂತರಿಸಿದೆ. ಹುಲಸೆ ಗ್ರಾಮದ ಕೆರೆಯನ್ನು 2.80 ಲಕ್ಷ ರೂ.ವೆಚ್ಚದಲ್ಲಿ ಅಭಿವೃದ್ಧಿಪಡಿಸಿದ್ದು ಇದರಿಂದ ಗ್ರಾಮದ 40 ರೈತ ಕುಟುಂಬಗಳು ಸೇರಿದಂತೆ 200 ಎಕರೆ ಪ್ರದೇಶಕ್ಕೆ ನೀರು ಒದಗಿಸಿದಂತಾಗುತ್ತದೆ ಎಂದು ಹೇಳಿದರು.
ಕೊಡ್ಲಿಪೇಟೆ ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಹಲವು ಕಾರ್ಯಕ್ರಮಗಳ ಮೂಲಕ ಸಂಸ್ಥೆಯು ಸರ್ಕಾರ ಮಾಡಬೇಕಿದ್ದ ಕೆಲಸಗಳನ್ನು ಮಾಡುತ್ತಿದೆ. ದುಶ್ಚಟವನ್ನು ದೂರ ಮಾಡುವಂತಹ ಸಮಾಜವನ್ನು ಜಾಗೃತಿ ಮೂಡಿಸುತ್ತಿರುವ ಕಾರ್ಯದ ಜತೆಯಲ್ಲಿ ಆರ್ಥಿಕ, ಶೈಕಣಿಕ, ಆರೋಗ್ಯ ಕ್ಷೇತ್ರಗಳ ಸುಧಾರಣೆಗೆ ಶ್ರಮಿಸುತ್ತಿರುವ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.
ಜನ ಜಾಗೃತಿ ಸಮಿತಿ ಸದಸ್ಯ ಭಗವಾನ್, ಸದಸ್ಯೆ ಪೂರ್ಣಿಮಾ ಕಿರಣ್, ಹುಲಸೆ ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಭರತ್ ಹುಲಸೆ, ಹಂಡ್ಲಿ ಗ್ರಾಪಂ ಪಿಡಿಒ ಅಂಜನಾದೇವಿ, ಗ್ರಾಪಂ ಉಪಾಧ್ಯಕ್ಷ ಎಚ್.ಎಸ್.ಅಶೋಕ್, ಗ್ರಾಪಂ ಸದಸ್ಯ ವೀರೇಂದ್ರ ಕುಮಾರ್, ಹಂಡ್ಲಿ ಕೃಷಿ ಪತ್ತಿನ ಸಂಘದ ಅಧ್ಯಕ್ಷ ಚಿದಾನಂದ್, ಕೃಷಿ ಮೇಲ್ವಿಚಾರಕ ಹರೀಶ್, ಕೊಡ್ಲಿಪೇಟೆ ವಲಯ ಮೇಲ್ವಿಚಾರಕ ರಾಜಣ್ಣ, ಶನಿವಾರಸಂತೆ ವಲಯ ಮೇಲ್ವಿಚಾರಕಿ ಜಯಶ್ರೀ, ಕೆರೆ ಅಭಿವೃದ್ಧಿ ಸದಸ್ಯರು, ಗ್ರಾಮದ ಪ್ರಮುಖರು ಹಾಜರಿದ್ದರು. ಈ ಸಂದರ್ಭ ಮಹಿಳೆಯರು ಕೆರೆಗೆ ಬಾಗಿನ ಸಮರ್ಪಿಸಿದರು. ನಂತರ ಕೆರೆಯ ದಾಖಲೆಗಳನ್ನು ಪಿಡಿಒ ಅಂಜನಾದೇವಿ ಮೂಲಕ ಗ್ರಾಮಸ್ಥರಿಗೆ ಹಸ್ತಾಂತರಿಸಲಾಯಿತು.