ಗೋಣಿಕೊಪ್ಪಲು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲೆಗೆ ಸೇವೆ ನೀಡಿದವರನ್ನು ಗೌರವಿಸಲಾಯಿತು. ಜಗದೀಶ್ ಜೋಡುಬೀಟಿ, ಹೆಚ್.ಕೆ. ಕುಮಾರ್, ದಿವ್ಯ, ಸತೀಶ್ ಬಿ.ಆರ್. ಮತ್ತಿತರರು ಇದ್ದರು. 
ಕೊಡಗು

ಶಿಕ್ಷಣಕ್ಕೆ ಸಹಕರಿಸಿದವರಿಗೆ ಸನ್ಮಾನ

ಸುನಿಲ್ ಪೊನ್ನೇಟಿ
ಗೋಣಿಕೊಪ್ಪಲು:
ಗೋಣಿಕೊಪ್ಪಲು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿ ಸ್ಪಂದಿಸಿ ಕರಾಟೆ, ನೃತ್ಯ, ಯೋಗ ತರಬೇತಿಗಳನ್ನು ನೀಡಿದ ಶಿಕ್ಷಕರುಗಳನ್ನು ಮತ್ತು ಶಾಲೆಯ ಕಾರ್ಯಕ್ರಮಗಳಿಗೆ ಬಳಸಲು ಅನುಕೂಲಕರವಾದ ಪೋಡಿಯಂ ವಿತರಿಸಿದ ದಾನಿ ವೇಣುಗೋಪಾಲ್ ಕಣ್ಣನ್ ಅವರನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ವತಿಯಿಂದ
ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಶಾಲೆಯ ಕಾರ್ಯಕ್ರಮಗಳಿಗೆ ಅನುವು ಮಾಡಿಕೊಡುವ ಉದ್ದೇಶದೊಂದಿಗೆ ಕಣ್ಣನ್ ಟರ‍್ಸ್ ಮಾಲೀಕ ವೇಣುಗೋಪಾಲ್ ಕಣ್ಣನ್ ತಮ್ಮ ತಂದೆ ಕಣ್ಣನ್ ಅವರ ಜ್ಞಾಪಕಾರ್ಥವಾಗಿ ಪೋಡಿಯಂ ಅನ್ನು ಶಾಲೆಗೆ ನೀಡಿದ ಉದ್ದೇಶವನ್ನು ಪರಿಗಣಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಕಳೆದ ಒಂದು ವರ್ಷಗಳಿಂದ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಯೋಗ ಶಿಕ್ಷಣವನ್ನ ನೀಡಿದ ಯೋಗ ಶಿಕ್ಷಕಿ ನಾಮೇರ ಶರ್ಲಿ ಬೋಪಣ್ಣ, ಕರಾಟೆ ಶಿಕ್ಷಣವನ್ನು ನೀಡಿದ ಕಿಶೋರ್ ಕೆ.ಎ. ಮತ್ತು ನೃತ್ಯ ತರಗತಿಯನ್ನು ನೀಡಿದ ವಿಘ್ನೇಶ್ ಅವರನ್ನು ಶಾಲಾಭಿವೃದ್ಧಿ ಮತ್ತು ಮೇಲು ಉಸ್ತುವಾರಿ ಸಮಿತಿ ಅಧ್ಯಕ್ಷ ಜಗದೀಶ್ ಜೋಡುಬೀಟಿ ಮತ್ತು ಶಾಲೆಯ ಮುಖ್ಯೋಪಾಧ್ಯಾಯ ಹೆಚ್.ಕೆ. ಕುಮಾರ್, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಶಾಲೆಯ ವತಿಯಿಂದ ಸನ್ಮಾನಿಸಿದರು.
ನಂತರ ಮಾತನಾಡಿದ ಜಗದೀಶ್ ಜೋಡುಬೀಟಿ, ವಿದ್ಯಾರ್ಥಿಗಳು ತಮಗೆ ಕಲಿಸಿದ ಗುರುಗಳ ಬಗ್ಗೆ ಗೌರವ ಇಟ್ಟುಕೊಳ್ಳಬೇಕು. ಯಾವುದೇ ಕ್ಷಣದಲ್ಲಿ ಅವರನ್ನು ಕಂಡಾಗ ತಕ್ಷಣ ಗುರುತಿಸಿ ನಮಸ್ಕಾರ ಹೇಳುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಜೀವನ ಸಾರ್ಥಕ ಮತ್ತು ಪರಿಪೂರ್ಣತೆಗೆ, ನಮ್ಮ ಬದುಕಿಗೆ ಸಹಕಾರ ನೀಡಿದವರನ್ನ ಸ್ಮರಿಸಿಕೊಳ್ಳುವುದು ಅಗತ್ಯ ಎಂದರು.
ಶಾಲೆಯ ಮುಖ್ಯ ಶಿಕ್ಷಕ ಹೆಚ್.ಕೆ. ಕುಮಾರ್ ಮಾತನಾಡಿ, ಸರ್ಕಾರಿ ಶಾಲೆಯ ಮಕ್ಕಳು ಪಠ್ಯ ಚಟುವಟಿಕೆಯ ಜತೆಗೆ ಇತರ ವಿದ್ಯೆಗಳನ್ನು ಕಲಿಯುವ ಮೂಲಕ ಪರಿಪೂರ್ಣದ ಜೀವನ ತೆಗೆದುಕೊಳ್ಳಬೇಕೆಂಬ ಉದ್ದೇಶದೊಂದಿಗೆ ಅನುಕೂಲಕರವಾದ ಕಲೆಗಳನ್ನು ತಿಳಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಯೋಗ ಕರಾಟೆ ಮತ್ತು ನೃತ್ಯ ಶಿಕ್ಷಕರುಗಳು ಮಕ್ಕಳಿಗೆ ತಮ್ಮ ಅಮೂಲ್ಯ ಸಮಯವನ್ನು ವಿನಯೋಗಿಸಿ ಮಕ್ಕಳ ಕಲಿಕೆಗೆ ಸ್ಪಂದಿಸಿದ್ದಾರೆ. ಜತೆಗೆ ಶಾಲೆಗೆ ಅನುಕೂಲಕರವಾದ ವಸ್ತುಗಳನ್ನು ನೀಡುವ ಮೂಲಕ ಮಕ್ಕಳ ಕಲಿಕೆಯ ವಾತಾವರಣವನ್ನು ವೃದ್ಧಿಸುವಲ್ಲಿಯೂ ದಾನಿಗಳ ಸಹಕಾರ ಮಹತ್ವದ್ದಾಗಿದ್ದು ಎಂದು ಹೇಳಿದರು.
ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಉಪಾಧ್ಯಕ್ಷೆ ದಿವ್ಯ, ಕಲಾ ಶಿಕ್ಷಕ ಸತೀಶ್ ಬಿ.ಆರ್., ದೈಹಿಕ ಶಿಕ್ಷಣ ಶಿಕ್ಷಕ ರಮಾನಂದ ಟಿ.ಡಿ, ಸಹಾಯಕ ಶಿಕ್ಷಕರುಗಳಾದ ಜೋಸ್ಲಿಯಾ ಎಂ.ಟಿ, ಜಯಶ್ರೀ ಎನ್ .ಕೆ, ಇಂದಿರಾ ಎಂ.ಸಿ, ಅನಿತಕುಮಾರಿ ಹೆಚ್.ಇ, ದಮಯಂತಿ ಎ.ಎಂ., ಅರ್ಶಿಯಾ ಬಿ., ಕ್ಲ್ಯೆಮಿಂಟನ್, ಸಹನ್ ಎಂ.ಬಿ., ಶಾರದ ಕೆ.ಎಸ್., ನಾಗರಾಜು, ಸ್ನೇಹಾ ಕಾವೇರಮ್ಮ, ಸಿದ್ದರಾಜು ಎನ್., ಮಂಜುಳ ವಿ., ಮತ್ತಿತರರು ಇದ್ದರು.