ಭಾರತೀಯ ರೆಡ್ ಕ್ರಾಸ್‌ನ ಕೊಡಗು ಘಟಕದಿಂದ ಮಡಿಕೇರಿ ತಾಲೂಕಿನ ಅಂಗನವಾಡಿಗಳ ಸಾಧಕಿ ಕಾಯಕರ್ತೆಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಪಿ. ಕಲಾವತಿ, ಎಂ. ಧನಂಜಯ್, ಹೆಚ್.ಟಿ. ಅನಿಲ್, ಬಿ.ಕೆ. ರವೀಂದ್ರ ರೈ, ರಾಜೇಶ್ ಯಲ್ಲಪ್ಪ, ಮೇಪಾಡಂಡ ಸವಿತಾ ಕೀರ್ತನ್ ಮತ್ತಿತರರು ಇದ್ದರು.
- ಮಡಿಕೇರಿ ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರಿಗೆ ಸನ್ಮಾನ
- ರೆಡ್ ಕ್ರಾಸ್ ಕೊಡಗು ಘಟಕದಿಂದ ಆಯೋಜನೆ
- ಅಂಗನವಾಡಿ ಕಾರ್ಯಕರ್ತೆಯರ ಕಾರ್ಯಕ್ಕೆ ಶ್ಲಾಘನೆ
ಮಕ್ಕಳಿಗೆ ಸಂಸ್ಕಾರ ಕಲಿಸುವಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಮಹತ್ವದ್ದು ಎಂದು ಮಡಿಕೇರಿ ನಗರಸಭೆ ಅಧ್ಯಕ್ಷೆ ಪಿ. ಕಲಾವತಿ ಹೇಳಿದರು. ನಗರದ ರೆಡ್ ಕ್ರಾಸ್ ಭವನದಲ್ಲಿ ಭಾರತೀಯ ರೆಡ್ ಕ್ರಾಸ್‌ನ ಕೊಡಗು ಘಟಕದಿಂದ ಶನಿವಾರ ಆಯೋಜಿಸಿದ್ದ ಮಡಿಕೇರಿ ತಾಲೂಕಿನ ಅಂಗನವಾಡಿಗಳ ಸಾಧಕಿ ಕಾಯಕರ್ತೆಯರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪುಟ್ಟ ಮಕ್ಕಳು ಮನೆಗಿಂತ ಹೆಚ್ಚಾಗಿ ಅಂಗನವಾಡಿಗಳಲ್ಲಿಯೇ ಪಾಲನೆಯಾಗುತ್ತಿದ್ದಾರೆ. ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಸಂಸ್ಕಾರ, ಪ್ರೀತಿ, ಬುದ್ಧಿಯನ್ನು ಅಂಗನವಾಡಿಗಳಲ್ಲಿ ಕಾರ್ಯಕರ್ತೆಯರು ಕಲಿಸಬೇಕು. ಅಂಗನವಾಡಿ ಶಿಕ್ಷಕಿಯರು ಮಕ್ಕಳ ಪಾಲಿಗೆ ದೇವರ ಸಮಾನವಾಗಿದ್ದು ಇಂಥ ಮಕ್ಕಳನ್ನು ಹೆಚ್ಚಿನ ಮಮತೆಯಿಂದ ಬಾಲ್ಯದಲ್ಲಿ ಬೆಳೆಸಬೇಕು ಎಂದರು.
ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ವೈ. ರಾಜೇಶ್ ಮಾತನಾಡಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯವೈಖರಿ ಶ್ಲಾಘನೀಯವಾಗಿದೆ. ಕೊಡಗಿನಲ್ಲಿಯೂ ಮಳೆಗಾಲದಲ್ಲಿ ಕಾಳಜಿ ಕೇಂದ್ರದ ಮೂಲಕ ರೆಡ್ ಕ್ರಾಸ್ ಸಂಸ್ಥೆ ನಿರಾಶ್ರಿತರಿಗೆ ನೆರವಾಗುತ್ತಾ ಬಂದಿದೆ. ಅಂಗನವಾಡಿ ಕಾರ್ಯಕರ್ತೆಯರ ಶ್ರಮ ಸಮಾಜದಲ್ಲಿ ಸದಾ ಶ್ಲಾಘನೀಯವಾಗಿದ್ದು, ಪುಟ್ಟ ಮಕ್ಕಳಿಗೆ ಉತ್ತಮ ಬಾಲ್ಯ ಕಲ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಮಕ್ಕಳ ಏಳಿಗೆಯಲ್ಲಿ ಮಹತ್ವದ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಸೇವೆ ಗುರುತಿಸಿ ಸನ್ಮಾನದ ಗೌರವ ನೆರವೇರಿಸುವ ಮೂಲಕ ರೆಡ್ ಕ್ರಾಸ್ ಸಂಸ್ಥೆ ಉತ್ತಮ ಕಾರ್ಯಕ್ರಮ ರೂಪಿಸಿದೆ ಎಂದು ಹೇಳಿದರು.
ಮಹಿಳಾ ಮತ್ತ ಮಕ್ಕಳ ಅಭಿವೃದ್ಧಿ ಇಲಾಖೆಯ ಕೊಡಗು ಜಿಲ್ಲಾ ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಮಾತನಾಡಿ, 1975ರಲ್ಲಿ 100 ಅಂಗನವಾಡಿಗಳು ಕರ್ನಾಟಕದಲ್ಲಿ ಪ್ರಾರಂಭವಾಗಿದ್ದವು. ಮಾಸಿಕ 150 ರೂ. ವೇತನದಲ್ಲಿ ಪ್ರಾರಂಭವಾದ ಅಂಗನವಾಡಿ ಕಾರ್ಯಕರ್ತೆಯರ ಕೆಲಸ ಈಗಲೂ ಸಕ್ರಿಯವಾಗಿ ಮುಂದುವರೆದಿದೆ. ಈಗ ಸಮಾಜದ ಇತರೆಲ್ಲಾ ನಾಗರಿಕರಿಗೆ ಎಲ್ಲಾ ಸೌಲಭ್ಯಗಳು ದೊರಕುತ್ತಿದ್ದರೂ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ ಕೇವಲ 12 ಸಾವಿರ ರೂ. ವೇತನ ಮಾತ್ರವಿದೆ. ಅಲ್ಪ ವೇತನದಲ್ಲಿಯೇ ಅಂಗನವಾಡಿ ಕಾರ್ಯಕರ್ತೆಯರು ಜೀವನ ರೂಪಿಸಿಕೊಳ್ಳಬೇಕಾಗಿದೆ.
ರೆಡ್ ಕ್ರಾಸ್ ಉಪಾಧ್ಯಕ್ಷ ಹೆಚ್.ಟಿ. ಅನಿಲ್ ಮಾತನಾಡಿ, ಆರು ವರ್ಷದ ಒಳಗಿನ ಮಕ್ಕಳ ಆರೋಗ್ಯ ಪೌಷ್ಠಿಕ ಮಟ್ಟವನ್ನು ವೃದ್ಧಿಸುವುದು, ಮಗುವಿನ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಭದ್ರ ಅಡಿಪಾಯ ಹಾಕುವುದು, ಮಕ್ಕಳಲ್ಲಿ ಸಾವು, ಅನಾರೋಗ್ಯ, ಅಪೌಷ್ಟಿಕತೆ, ಶಾಲೆ ಬಿಡುವಿಕೆಯನ್ನು ಕಡಿಮೆಗೊಳಿಸುವುದು ಸೇರಿದಂತೆ ತಾಯಂದಿರಿಗೆ ತಮ್ಮ ಮಕ್ಕಳ ಆರೋಗ್ಯ ಮತ್ತು ಪೌಷ್ಟಿಕತೆ ಅಗತ್ಯಗಳನ್ನು ಸರಿಯಾಗಿ ನೋಡಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುವುದು ಅಂಗನವಾಡಿ ಕಾರ್ಯಕರ್ತೆಯರ ಕೆಲಸವಾಗಿದೆ. ಈ ನಿಟ್ಟಿನಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರನ್ನು ಈ ದಿನ ಗುರುತಿಸಲಾಗಿದೆ ಎಂದು ಹೇಳಿದರು.
ರೆಡ್ ಕ್ರಾಸ್ ಪ್ರಧಾನ ಕಾರ್ಯದರ್ಶಿ ಎಂ. ಧನಂಜಯ್, ದೇವಕ್ಕಿ, ಖಜಾಂಜಿ ಪ್ರಸಾದ್ ಗೌಡ, ನಿರ್ದೇಶಕರಾದ ದೀರ್ಘಕೇಶಿ ಶಿವಣ್ಣ, ಅಂಬೆಕಲ್ ಜೀವನ್, ಮಧುಕರ್ ಶೇಟ್, ವಿಕ್ರಂ ಶೆಟ್ಟಿ, ಕೆ.ಟಿ. ಉತ್ತಪ್ಪ, ಕೆ.ಎಂ ವೆಂಕಟೇಶ್, ಸಿ.ಕೆ. ಪ್ರಭಾಕರ್, ಕೆ.ಸಿ. ವಸಂತ್, ರತ್ನಾಕರ್ ರೈ, ಬಿ.ಕೆ. ಕಾರ್ಯಪ್ಪ, ಪಿ.ಆರ್. ರಾಜೇಶ್, ಕೌಶಿ ಪೊನ್ನಮ್ಮ ಮತ್ತಿತರರು ಇದ್ದರು.
ಸನ್ಮಾನಿತರಾದ ಅಂಗನವಾಡಿ ಕಾರ್ಯಕರ್ತೆಯರು:
ಮರಗೋಡು ಅಂಗನವಾಡಿ ಕಾರ್ಯಕರ್ತೆ ಅಕ್ಕಮ್ಮ (21 ವರ್ಷಗಳ ಸೇವೆ), ಬಾಣೆಮೊಟ್ಟೆ ಅಂಗನವಾಡಿ ಕೇಂದ್ರದ ಟಿ. ಇ. ಅಮುದ (25 ವರ್ಷಗಳ ಸೇವೆ), ತಾವೂರು ಅಂಗನವಾಡಿ ಕೇಂದ್ರದ ಹೆಚ್.ಆರ್. ಹೇಮಾವತಿ (26 ವರ್ಷಗಳ ಸೇವೆ), ಕೊಚ್ಚಿ ಅಂಗನವಾಡಿ ಕೇಂದ್ರದ ಕೆ.ಯಶೋಧ (32 ವರ್ಷಗಳ ಸೇವೆ), ಮಡಿಕೇರಿ ಭಗವತಿ ನಗರ ಅಂಗನವಾಡಿ ಕೇಂದ್ರದ ಕೆ.ಯು. ಶಶಿ (33 ವರ್ಷಗಳ ಸೇವೆ), ಹೂಕಾಡು ಪೈಸಾರಿ ಅಂಗನವಾಡಿ ಕೇಂದ್ರದ ಜಯಶ್ರೀ ರೈ (8 ವರ್ಷಗಳ ಸೇವೆ), ಪರಂಬು ಪೈಸಾರಿ ಅಂಗನವಾಡಿ ಕೇಂದ್ರದ ಎಂ.ಕೆ. ಭವಾನಿ ( 35 ವರ್ಷಗಳ ಸೇವೆ), ವಣಚಲು ಅಂಗನವಾಡಿ ಕೇಂದ್ರದ ಪಿ.ಆರ್. ಧರಣಿ (6 ವರ್ಷಗಳ ಸೇವೆ), ಬಿಳಿಗೇರಿ ಅಂಗನವಾಡಿ ಕೇಂದ್ರದ ಎಚ್.ಪಿ. ದೇವಕಿ (36 ವರ್ಷಗಳ ಸೇವೆ), ಅಯ್ಯಂಗೇರಿ ಅಂಗನವಾಡಿ ಕೇಂದ್ರದ ಐ.ಎ. ಜಮೀಲಾ ( 30 ವರ್ಷಗಳ ಸೇವೆ) , ಐವತ್ತೋಕ್ಲು ಅಂಗನವಾಡಿ ಕೇಂದ್ರದ ಎ.ಟಿ. ಇಂದಿರಾ ( 37 ವರ್ಷಗಳ ಸೇವೆ), ಅರಪಟ್ಟು ಪೈಸಾರಿ ಅಂಗನವಾಡಿಯ ಟಿ.ಕೆ. ಕವಿತಾ (31 ವರ್ಷಗಳ ಸೇವೆ), ಚಟ್ಟೆಕಾಡು ಅಂಗನವಾಡಿ ಕೇಂದ್ರದ ಟಿ. ಹರಿಣಿ (26 ವರ್ಷಗಳ ಸೇವೆ), ಜೋಡುಪಾಲ ಅಂಗನವಾಡಿ ಕೇಂದ್ರದ ಎಂ. ಮನೋಹರಿ (34 ವರ್ಷಗಳ ಸೇವೆ), ಮಡಿಕೇರಿ ರಾಜೇಶ್ವರಿ ನಗರದ ಅಂಗನವಾಡಿಯ ಕೆ.ಸಿ. ಇಂದಿರಾ ( 20 ವರ್ಷಗಳ ಸೇವೆ)