ಭದ್ರಪ್ಪ ಬಸಪ್ಪ ಹಡಪದ 
ಕೊಡಗು

ಚಿನ್ನ, ನಗದು ಕದ್ದ ಹೋಮ್ ನರ್ಸ್ ಬಂಧನ

ಮಡಿಕೇರಿ:
ಮಡಿಕೇರಿ ಎಎಫ್‌ಎಂಸಿ ಕಾಲೇಜು ಹಿಂಭಾಗದಲ್ಲಿ ವಾಸವಾಗಿದ್ದ ವಯೋವೃದ್ಧರ ಆರೈಕೆಗೆ ನೇಮಿಸಲಾಗಿದ್ದ ಹೋಮ್ ನರ್ಸ್ ಅದೇ ಮನೆಯಲ್ಲಿ ಕಳ್ಳತನ ಮಾಡಿ ಸಿಕ್ಕಿಹಾಕಿಕೊಂಡಿದ್ದಾನೆ. ವಿಜಯಪುರ ಜಿಲ್ಲೆ ದೇವರ ಹಿಪ್ಪರಗಿ ತಾಲೂಕು ಮಣ್ಣೂರು ಗ್ರಾಮದ ಭದ್ರಪ್ಪ ಬಸಪ್ಪ ಹಡಪದ (27) ಬಂಧಿತ ಆರೋಪಿ. ಈತ ಕೊಪ್ಪಳ ಜಿಲ್ಲೆಯ ಮಹಾಂತೇಶ ಪೂಜಾರ ಎಂಬವರ ಆಧಾರ್ ಕಾರ್ಡ್ ಪ್ರತಿ ಬಳಸಿ ಕೆಲಸಕ್ಕೆ ಸೇರಿಕೊಂಡಿದ್ದ. ಬಂಧಿತನಿAದ 5,09,000 ರೂ. ನಗದು, 137 ಗ್ರಾಂ ಚಿನ್ನಾಭರಣ ಹಾಗೂ 1 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.
ಮಡಿಕೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಎಎಫ್‌ಎಂಸಿ ಕಾಲೇಜು ಹಿಂಭಾಗದ ಬಡಾವಣೆಯಲ್ಲಿ ವಾಸವಿದ್ದ ಡಾ. ಪಾರ್ಥಸಾರಥಿ ಎಂಬವರ ಅಣ್ಣ ವಯೋವೃದ್ಧರಾಗಿದ್ದು, ಅವರನ್ನು ನೋಡಿಕೊಳ್ಳುವ ಸಲುವಾಗಿ ಹೋಂ ನರ್ಸಿಂಗ್ ಕೆಲಸಕ್ಕೆ ಭದ್ರಪ್ಪ ಬಸಪ್ಪ ಹಡಪದನನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಈತ ಫೆ. 28ರಂದು ಮನೆಯಲ್ಲಿದ್ದ ಅಂದಾಜು 80 ಗ್ರಾಂ ಚಿನ್ನಾಭರಣ, 5,50,000 ರೂ. ನಗದು ಕಳವು ಮಾಡಿರುವ ಕುರಿತು ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಈ ಬಗ್ಗೆ ತನಿಖೆ ಆರಂಭಿಸಿದ ಪೊಲೀಸರು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಈತ 2025ರಲ್ಲಿ ದಾವಣಗೆರೆಯ ಕೆ.ಟಿ.ಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಳವು ಪ್ರಕರಣದಲ್ಲೂ ಭಾಗಿಯಾಗಿರುವುದು ತನಿಖೆಯಲ್ಲಿ ತಿಳಿದುಬಂದಿದೆ.
ಮಡಿಕೇರಿ ಉಪವಿಭಾಗ ಡಿ.ವೈ.ಎಸ್.ಪಿ. ಪಿ.ಎ. ಸೂರಜ್, ಮಡಿಕೇರಿ ನಗರ ವೃತ್ತ ಸಿಪಿಐ ಪಿ.ಕೆ. ರಾಜು, ಬೆರಳು ಮುದ್ರೆ ಘಟಕ ಪಿಐ., ರಾಮಕೃಷ್ಣ, ಮಡಿಕೇರಿ ನಗರ ಪೊಲೀಸ್ ಠಾಣೆ ಪಿಎಸ್‌ಐ ಎಸ್.ಎಸ್. ಅನ್ನಪೂರ್ಣ ನೇತೃತ್ವದ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು ಎಂದು ಕೊಡಗು ಎಸ್‌ಪಿ ಆರ್.ಎನ್. ಬಿಂದು ಮಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.