ಕುಶಾಲನಗರ ಸಮೀಪದ ಹೆಬ್ಬಾಲೆಯಲ್ಲಿ ತಾಲೂಕು ಹಿಂದೂ ಸಂಗಮ ಆಯೋಜನಾ ಸಮಿತಿ ಮತ್ತು ಹೆಬ್ಬಾಲೆ ಮಂಡಲದ ವತಿಯಿಂದ ಏರ್ಪಡಿಸಿದ್ದ ಹಿಂದೂ ಸಂಗಮ ಶೋಭಾಯಾತ್ರೆ ಅದ್ದೂರಿಯಾಗಿ ನಡೆಯಿತು. ಸದಾಶಿವ ಸ್ವಾಮೀಜಿ, ಮಲ್ಲೇಶ ಸ್ವಾಮೀಜಿ, ಎಚ್.ಆರ್. ಶ್ರೀನಿವಾಸ್ ಮತ್ತಿತರರು ಇದ್ದರು. 
ಕೊಡಗು

ಹೆಬ್ಬಾಲೆಯಲ್ಲಿ ಹಿಂದೂ ಸಂಗಮ ಕಾರ್ಯಕ್ರಮ

ಸುನಿಲ್ ಪೊನ್ನೇಟಿ
ಕುಶಾಲನಗರ:
ಹಿಂದೂ ಸಮುದಾಯ ಸಂಘಟಿತರಾಗುವ ಮೂಲಕ ಭಾರತೀಯ ಹಿಂದೂ ಸಂಸ್ಕೃತಿ, ಪರಂಪರೆ, ಆಚಾರ ವಿಚಾರಗಳನ್ನು ಉಳಿಸಿ ಬೆಳೆಸಬೇಕು ಎಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಹೇಳಿದರು. ತಾಲೂಕು ಹಿಂದೂ ಸಂಗಮ ಆಯೋಜನಾ ಸಮಿತಿ ಮತ್ತು ಹೆಬ್ಬಾಲೆ ಮಂಡಲದ ವತಿಯಿಂದ ಶುಕ್ರವಾರ ಹೆಬ್ಬಾಲೆ ಬನಶಂಕರಿ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಹಿಂದೂ ಸಂಗಮ ಸಮಾವೇಶದ ಸಾನಿಧ್ಯ ವಹಿಸಿ ಮಾತನಾಡಿದರು.
ಸಾವಿರಾರು ವರ್ಷಗಳ ಹಳೆಯ ಪುರಾತನ ಧರ್ಮ ನಮ್ಮ ಹಿಂದೂ ಧರ್ಮ. ಮಹಾನ್ ತ್ಯಾಗಿಗಳು, ಋಷಿಮುನಿಗಳು, ಮಹರ್ಷಿಗಳು ಇರುವಂಥ ಶ್ರೇಷ್ಠ ಸನಾತನ ಧರ್ಮದ ಸಂರಕ್ಷಣೆ ಅಗತ್ಯವಿದೆ. ಪರಿಸರ ಸಂರಕ್ಷಣೆಗೂ ಹಿಂದೂ ಧರ್ಮದ ಧಾರ್ಮಿಕ ಪದ್ಧತಿಗಳಿಗೂ ಅವಿನಾಭಾವ ಸಂಬAಧವಿದೆ.
ಭಾರತೀಯ ಸಂಸ್ಕೃತಿಯನ್ನು ಇಂದಿನ ಯುವ ಜನಾಂಗ ಆರಾಧಿಸುವ ಮೂಲಕ ಹಿರಿಯರ ಆಚರಣೆಗಳನ್ನು ಗೌರವಿಸಬೇಕು ಎಂದರು.
ತೊರೆನೂರು ವಿರಕ್ತ ಮಠದ ಮಲ್ಲೇಶ ಸ್ವಾಮೀಜಿ ಮಾತನಾಡಿ ಹಿಂದೂ ಧರ್ಮ ವಿಶ್ವಶ್ರೇಷ್ಠ ಧರ್ಮಗಳಲ್ಲಿ ಒಂದಾಗಿದ್ದು, ನಮ್ಮ ಶ್ರೀಮಂತ ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸುವ ಮೂಲಕ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಬೇಕು ಎಂದು ಹೇಳಿದರು.
ಸುಳ್ಯದ ಡಾ. ಮನೋಜ್ ದಿಕ್ಸೂಚಿ ಭಾಷಣ ಮಾಡಿ, ಶ್ರೇಷ್ಠ ಹಿಂದೂ ಧರ್ಮದ ತಳಹದಿ ಗಟ್ಟಿ ಗೊಳಿಸಬೇಕು. ಹಿಂದೂ ಯುವ ಶಕ್ತಿ ಒಗ್ಗೂಡಬೇಕು. ಜಗತ್ತಿಗೆ ಶಾಂತಿ ಸಾರಿದ ದೇಶ ಭಾರತ. ಹಿಂದೂ ವಿಚಾರಧಾರೆಯಿಂದ ಮಾತ್ರ ಶಾಂತಿ ದೊರಕಲು ಸಾಧ್ಯ ಎಂದರು.
ಕಾರ್ಯಕ್ರಮ ಸಂಯೋಜಕರೂ ಆದ ಜಿಪಂ ಮಾಜಿ ಸದಸ್ಯ ಎಚ್.ಆರ್.ಶ್ರೀನಿವಾಸ್ ಮಾತನಾಡಿದರು.
ತಾಲೂಕು ಹಿಂದೂ ಸಂಗಮ ಆಯೋಜನಾ ಸಮಿತಿ ಸಂಯೋಜಕ ದೇವಿಪ್ರಸಾದ್, ಹೆಬ್ಬಾಲೆ ಗ್ರಾಪಂ ಮಾಜಿ ಅಧ್ಯಕ್ಷೆ ಅರುಣಕುಮಾರಿ, ಜಿಪಂ ಮಾಜಿ ಅಧ್ಯಕ್ಷ ಹೆಚ್.ಎಸ್. ಅಶೋಕ್, ಗ್ರಾಪಂ ಸದಸ್ಯರುಗಳಾದ ಮಂಜುನಾಥ್, ಪರಮೇಶ್, ಹೆಚ್.ಎಸ್. ರಘು, ಕಣಿವೆ ಶ್ರೀ ರಾಮಲಿಂಗೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಸುರೇಶ್, ನಿವೃತ್ತ ಶಿಕ್ಷಕ ಲೋಕೇಶ್, ಹೆಬ್ಬಾಲೆ ವಿದ್ಯಾವರ್ಧಕ ಸಂಘದ ಮಾಜಿ ಅಧ್ಯಕ್ಷ ಹೆಚ್.ಎಲ್. ಮಂಜುನಾಥ್ ಮತ್ತಿತರರು ಇದ್ದರು.
ಸಭಾಕಾರ್ಯಕ್ರಮಕ್ಕೂ ಮೊದಲು ಹಿಂದೂ ಸಂಗಮ ಶೋಭಾಯಾತ್ರೆ ಅದ್ಧೂರಿಯಾಗಿ ನಡೆಯಿತು. ಕೇಸರಿ ಶಲ್ಯ ಧರಿಸಿ ಬಾವುಟ ಹಿಡಿದು ಕಣಿವೆ ಶ್ರೀ ರಾಮಲಿಂಗೇಶ್ವರ ದೇವಾಲಯ ಬಳಿಯಿಂದ ಹೆಬ್ಬಾಲೆಯ ಬನಶಂಕರಿ ಸಮುದಾಯ ಭವನದವರೆಗೆ ಮೆರವಣಿಗೆ ನಡೆಸಲಾಯಿತು. ಚಂಡೆವಾದ್ಯ, ವೀರಗಾಸೆ ಸಮ್ಮುಖದಲ್ಲಿ ಕಳಸ ಹೊತ್ತು ಮಹಿಳೆಯರು ಮೆರವಣಿಗೆಯಲ್ಲಿ ಭಾಗಿಯಾಗಿ ಮೆರಗು ನೀಡಿದರು. ಭಾರತಾಂಭೆಯ ಭಾವಚಿತ್ರ ಹೊತ್ತ ಬೆಳ್ಳಿರಥದಲ್ಲಿ ವಿವಿಧ ವೇಷ ಧರಿಸಿದ ಶಾಲಾ ವಿದ್ಯಾರ್ಥಿಗಳು ಗಮನ ಸೆಳೆದರು. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರಿಗೆ ಮಜ್ಜಿಗೆ, ತಂಪು ಪಾನಿಯ ವಿತರಣೆ ಮಾಡಲಾಯಿತು.