ಬಾಳುಗೋಡಿನ ಏಕಲವ್ಯ ಮಾದರಿ ವಸತಿ ಶಾಲೆಯ ಸಭಾಂಗಣದಲ್ಲಿ ಭಾನುವಾರ ನಡೆದ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರದಲ್ಲಿ ಎ.ಎಸ್.ಪೊನ್ನಣ್ಣ ಮಾತನಾಡಿದರು. ಡಾ.ಲೋಕೇಶ್, ಡಾ.ಮೋಹನ್ ಅಪ್ಪಾಜಿ, ಡಾ.ಕರುಂಬಯ್ಯ ಇತರರಿದ್ದರು.
- ಬುಡಕಟ್ಟು ಸಮುದಾಯದ ಏಳಿಗೆಗೆ ಶ್ರಮಿಸಿ
ಮಡಿಕೇರಿ: ನಾಡಿನ ಸಂಸ್ಕೃತಿ ಕಾಪಾಡುವ ಬುಡಕಟ್ಟು ಸಮುದಾಯದ ಏಳಿಗೆಗೆ ಶ್ರಮಿಸುವುದು ಎಲ್ಲರ ಕರ್ತವ್ಯ ಎಂದು ವಿರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್.ಪೊನ್ನಣ್ಣ ಕರೆ ನೀಡಿದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆ, ಮಡಿಕೇರಿ, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಮತ್ತು ಸಂಸ್ಕೃತಿ ಸಿಹಿ ಟ್ರಸ್ಟ್, ಕೊಡಗು ಇವರ ಜಂಟಿ ಸಹಯೋಗದಲ್ಲಿ ವಿಶ್ವ ಬುಡಕಟ್ಟು ದಿನಾಚರಣೆ ಹಾಗೂ ೮೦ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಬಾಳುಗೋಡಿನ ಏಕಲವ್ಯ ಮಾದರಿ ವಸತಿ ಶಾಲೆಯ ಸಭಾಂಗಣದಲ್ಲಿ ಭಾನುವಾರ ನಡೆದ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.
ವಿಶ್ವ ಬುಡಕಟ್ಟು ದಿನದ ಅಂಗವಾಗಿ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳುವುದು ಸಮಯೋಚಿತ. ನಾಡಿನ ಸಂಸ್ಕೃತಿ ಕಾಪಾಡುವ ಬುಡಕಟ್ಟು ಜನಾಂಗದ ಏಳಿಗೆಗೆ ಶ್ರಮಿಸುವುದು ಎಲ್ಲರ ಕರ್ತವ್ಯ. ಅವರ ನಡುವೆ ಆರೋಗ್ಯ ಶಿಬಿರ ಹಾಗೂ ರಕ್ತದಾನದಂತಹ ಕಾರ್ಯ ಮಾಡುವುದು ಪುಣ್ಯದ ಕೆಲಸ. ಇಂತಹ ಶಿಬಿರಗಳನ್ನು ಕ್ಷೇತ್ರದ ಇತರ ಬುಡಕಟ್ಟು ಹಾಡಿಗಳಲ್ಲೂ ಆಯೋಜಿಸಬೇಕು ಎಂದು ಸಲಹೆ ನೀಡಿದರು.
ಬುಡಕಟ್ಟು ಸಮುದಾಯದ ಅನೇಕರು ಉನ್ನತ ಶಿಕ್ಷಣ ಪಡೆದು ಉನ್ನತ ಹುದ್ದೆಯಲ್ಲಿದ್ದಾರೆ. ಅವರನ್ನು ಮಾದರಿಯಾಗಿಟ್ಟುಕೊಂಡು ಎಲ್ಲರೂ ಸಮಾಜದಲ್ಲಿ ಮುನ್ನಡೆಯಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ನಿತಿನ್ ಚಕ್ಕಿ, ಡಾ.ಲೋಕೇಶ್, ಡಾ.ಮೋಹನ್ ಅಪ್ಪಾಜಿ, ಡಾ.ಕರುಂಬಯ್ಯ, ಐಟಿಡಿಪಿ ಅಧಿಕಾರಿ ಭಾಗೀರಥಿ, ಪ್ರಮುಖರಾದ ಹರಿಣಿವಿಜಯ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.