ವಾಹನವೊಂದಕ್ಕೆ ಮರದ ದಿಮ್ಮಿಗಳನ್ನು ತುಂಬುತ್ತಿರುವುದು.
ಸಿದ್ದಾಪುರ: ಕೊಡಗು ಜಿಲ್ಲೆಯಾದ್ಯಂತ ಮುಂಗಾರು ಮಳೆ ಹಿನ್ನೆಲೆಯಲ್ಲಿ ಮರಳು, ಮರದ ದಿಮ್ಮಿಗಳ ಸಾಗಣೆಗಳ ವಾಹನಗಳು ಸೇರಿದಂತೆ ಭಾರಿ ವಾಹನಗಳ ಸಂಚಾರಕ್ಕೆ ಜೂ.25ರವರೆಗೆ ಕಾಲಾವಕಾಶ ನೀಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಜಿಲ್ಲೆಯಲ್ಲಿ ಮುಂಗಾರು ಮಳೆ ಆರಂಭಗೊಂಡು ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದ್ದ ಕಾರಣ ರಸ್ತೆಗಳ ಸುರಕ್ಷತೆ, ಸಾರ್ವಜನಿಕ ಆಸ್ತಿ-ಪಾಸ್ತಿಗಳ ರಕ್ಷಣೆ ಹಾಗೂ ಪ್ರಯಾಣಿಕರ ಹಿತದೃಷ್ಟಿಯಿಂದ ಕರ್ನಾಟಕ ಪೊಲೀಸ್ ಕಾಯ್ದೆ 1963ರ ವಿಧಿ 31 ಸೇರಿದಂತೆ ಇತರ ಸಂಬಂಧಿತ ಕಾಯ್ದೆಗಳಡಿ ಜಿಲ್ಲಾಧಿಕಾರಿಗಳು ಜೂ.10ರಿಂದ ಜುಲೈ 9ರವರೆಗೆ ಮರಳು, ಮರದ ದಿಮ್ಮಿಗಳ ಸಾಗಣೆ ವಾಹನಗಳು ಸೇರಿದಂತೆ ಭಾರಿ ವಾಹನಗಳ ಸಂಚಾರ ನಿಷೇಧಿಸಿ ಆದೇಶ ಹೊರಡಿಸಿದ್ದರು.
ಆದರೆ, ಕೊಡಗು ಟಿಂಬರ್ ಟ್ರೇಡಿಂಗ್ ಅಸೋಸಿಯೇಷನ್ ಸಲ್ಲಿಸಿದ ಮನವಿ ಹಾಗೂ ಜಿಲ್ಲೆಯ ಪ್ರಸ್ತುತ ಹವಾಮಾನ ಪರಿಸ್ಥಿತಿಯನ್ನು ಪರಿಶೀಲಿಸಿದ ಬಳಿಕ ಆದೇಶವನ್ನು ಮಾರ್ಪಡಿಸಲಾಗಿದೆ. ನೂತನ ಆದೇಶದಂತೆ ಜೂ.25ರವರೆಗೆ ಎಲ್ಲ ವಿಧದ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಉಳಿದಂತೆ ಮೂಲ ಆದೇಶದಲ್ಲಿನ ಇತರ ನಿಯಮಗಳು ಯಥಾಸ್ಥಿತಿಯಲ್ಲಿ ಮುಂದುವರಿಯಲಿವೆ ಎಂದು ಜಿಲ್ಲಾಡಳಿತ ತಿಳಿಸಿದೆ.