ಭಾರತದ ಸ್ವಾತಂತ್ರ್ಯದ ೮೦ನೇ ವರ್ಷಾಚರಣೆ ಅಂಗವಾಗಿ ಯುನೈಟೆಡ್ ಕೊಡವ ಆರ್ಗನೈಜೇಷನ್(ಯುಕೊ) ಹಾಗೂ ಮೂರ್ನಾಡು ಕೊಡವ ಸಮಾಜದ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ನೆಪ್ಪುರ ನಳತ್ ಮಾಂಜತ ಮೊಟ್ಟ್ ಕಾರ್ಯಕ್ರಮದಲ್ಲಿ ಆಯೋಜಿಸಿದ್ದ ನೆಪ್ಪುರ ಚೊಪ್ಪು ಛಾಯಾಚಿತ್ರ ಪ್ರದರ್ಶನವನ್ನು ಡಾ.ಮಂತರ್ ಗೌಡ ಅವರು ವೀಕ್ಷಿಸಿದರು. ಮಂಜು ಚಿಣ್ಣಪ್ಪ, ತೇಲಪಂಡ ಸುಬ್ಬಯ್ಯ ಇತರರಿದ್ದರು.
- ಸ್ವಾತಂತ್ರ್ಯ ಹೋರಾಟಗಾರರಿಗೆ ಭಾವಪೂರ್ಣ ನಮನ
ಮಡಿಕೇರಿ: ಭಾರತದ ಸ್ವಾತಂತ್ರ್ಯದ ೮೦ನೇ ವರ್ಷಾಚರಣೆ ಅಂಗವಾಗಿ ಯುನೈಟೆಡ್ ಕೊಡವ ಆರ್ಗನೈಜೇಷನ್(ಯುಕೊ) ಹಾಗೂ ಮೂರ್ನಾಡು ಕೊಡವ ಸಮಾಜದ ಸಹಯೋಗದಲ್ಲಿ ಆಯೋಜಿಸಿದ್ದ ನೆಪ್ಪುರ ನಳತ್ ಮಾಂಜತ ಮೊಟ್ಟ್ ಕಾರ್ಯಕ್ರಮದಲ್ಲಿ ಕೊಡಗಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಿಗೆ ಭಾವಪೂರ್ಣ ನಮನ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್.ಪೊನ್ನಣ್ಣ ಹಾಗೂ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಆಯೋಜಿಸಿದ್ದ ನೆಪ್ಪುರ ಚೊಪ್ಪು ಛಾಯಾಚಿತ್ರ ಪ್ರದರ್ಶನವನ್ನು ವೀಕ್ಷಿಸಿದರು.
ಕೊಡಗಿನ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಸೇವೆ ಹಾಗೂ ಬಲಿದಾನಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಇಂತಹ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿರುವ ಯುಕೊ ಹಾಗೂ ಮೂರ್ನಾಡು ಕೊಡವ ಸಮಾಜದ ಪ್ರಯತ್ನವನ್ನು ಶಾಸಕರು ಶ್ಲಾಘಿಸಿದರು.
ಮಾತನಾಡಿದ ಎ.ಎಸ್.ಪೊನ್ನಣ್ಣ, ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಕೊಡಗು ತನ್ನದೇ ಆದ ಅಧ್ಯಾಯ ಹೊಂದಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಈ ನಾಡಿನ ಅನೇಕ ಹಿರಿಯರು ನಿಸ್ವಾರ್ಥ ಸೇವೆ ಸಲ್ಲಿಸಿ ಸರ್ವಸ್ವವನ್ನೂ ತ್ಯಾಗ ಮಾಡಿದ್ದಾರೆ. ಆದರೆ ಅವರಿಗೆ ಸೂಕ್ತ ಗೌರವ ದೊರೆಯದಿರುವುದು ದುರದೃಷ್ಟಕರ ಎಂದರು.
ಯುಕೊ ಕಳೆದ ವರ್ಷ ಆಯೋಜಿಸಿದ್ದ ಕಾರ್ಯಕ್ರಮದಿಂದ ಪ್ರೇರಣೆ ಪಡೆದು ಗೋಣಿಕೊಪ್ಪ ಬಸ್ ನಿಲ್ದಾಣಕ್ಕೆ ಕೊಳ್ಳಿಮಾಡ ಕರುಂಬಯ್ಯ ಅವರ ಹೆಸರಿಡುವ ಹಾಗೂ ಅದೇ ಸ್ಥಳದಲ್ಲಿ ಪಂದ್ಯಂಡ ಬೆಳ್ಯಪ್ಪ ಅವರ ಪ್ರತಿಮೆ ನಿರ್ಮಿಸುವ ಕಾರ್ಯ ಕೈಗೊಂಡಿರುವುದಾಗಿ ಅವರು ತಿಳಿಸಿದರು.
ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಇತಿಹಾಸದ ಪುಟಗಳಲ್ಲಿ ಮರೆಯಾಗಿರುವ ಕೊಡಗಿನ ಸ್ವಾತಂತ್ರ್ಯ ಹೋರಾಟಗಾರರ ಸೇವೆ, ತ್ಯಾಗ ಮತ್ತು ಬಲಿದಾನಗಳನ್ನು ದಾಖಲಿಸುವ ಸಮಗ್ರ ಮ್ಯೂಸಿಯಂ ಸ್ಥಾಪನೆಯ ಅಗತ್ಯವಿದೆ ಎಂದರು.
ಮಡಿಕೇರಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕೊಡವ ಹೆರಿಟೇಜ್ ಕೇಂದ್ರದ ಆವರಣದಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗಾಗಿ ಪ್ರತ್ಯೇಕ ಮ್ಯೂಸಿಯಂ ನಿರ್ಮಿಸಲು ತಮ್ಮ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಯುಕೊ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಕೆಲವೇ ಕೆಲವು ಹೋರಾಟಗಾರರನ್ನು ಗುರುತಿಸಿ ಗೌರವಿಸಲಾಗುತ್ತಿದೆ. ಸ್ಥಳೀಯವಾಗಿ ನೈಜ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಸತ್ಯಾಗ್ರಹಿಗಳನ್ನು ಗುರುತಿಸಿ, ಗ್ರಾಮ ಪಂಚಾಯಿತಿ ಮಟ್ಟದಿಂದ ಜಿಲ್ಲಾಡಳಿತದವರೆಗೆ ಗೌರವಿಸುವ ಕೆಲಸವಾಗಬೇಕು. ಇಲ್ಲವಾದರೆ ಈ ಮಣ್ಣಿನ ನೈಜ ಇತಿಹಾಸ ಅಳಿಸಿಹೋಗುವ ಅಪಾಯವಿದೆ ಎಂದರು.
ಮೂರ್ನಾಡು ಕೊಡವ ಸಮಾಜದ ಅಧ್ಯಕ್ಷ ತೇಲಪಂಡ ಸುಬ್ಬಯ್ಯ ಮಾತನಾಡಿ, ಸಮಾಜದ ವತಿಯಿಂದ ಇಂತಹ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿರುವುದು ಹೆಮ್ಮೆಯ ಸಂಗತಿ. ನಿರೀಕ್ಷೆಗೂ ಮೀರಿ ಜನರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿರುವುದು ಸಂತಸ ತಂದಿದೆ. ಮುಂದೆಯೂ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದಾಗಿ ತಿಳಿಸಿದರು.
ನೆಪ್ಪುರ ಚೊಪ್ಪು ಛಾಯಾಚಿತ್ರ ಪ್ರದರ್ಶನವನ್ನು ಪಂದ್ಯಂಡ ಬೆಳ್ಯಪ್ಪ ಹಾಗೂ ಸ್ವಾತಂತ್ರ್ಯ ಹೋರಾಟಗಾರ್ತಿ ಪಂದ್ಯಂಡ ಸೀತಮ್ಮ ಬೆಳ್ಯಪ್ಪ ಅವರ ಪುತ್ರ ಪಂದ್ಯಂಡ ವಿಜಯ್ ಬೆಳ್ಯಪ್ಪ, ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಮನ್ ಸುಬ್ರಮಣಿ, ಪತ್ರಕರ್ತ ಉಳ್ಳಿಯಡ ಪೂವಯ್ಯ ಹಾಗೂ ಏಕೀಕರಣ ರಂಗದ ಪ್ರಮುಖ ಅಜ್ಜೀನಂಡ ತಮ್ಮೂ ಪೂವಯ್ಯ ಜಂಟಿಯಾಗಿ ಉದ್ಘಾಟಿಸಿದರು. ಪೆಮ್ಮಡಿಯಂಡ ವೇಣು ಅಪ್ಪಣ್ಣ ಅವರು ಸಾಂಪ್ರದಾಯಿಕವಾಗಿ ತಪ್ಪಡ್ಕ ಕಟ್ಟುವ ಮೂಲಕ ನಾಡಿನ ಒಳಿತಿಗಾಗಿ ಪ್ರಾರ್ಥಿಸಿದರು.
ಹೆಸರಾಂತ ಗಾಯಕರಾದ ಚೆಕ್ಕೇರ ಪಂಚಮ್ ಬೋಪಣ್ಣ, ಬೊಟ್ಟೋಳಂಡ ಅಶಿತಾ ಬೋಪಣ್ಣ, ಪಳಂಗಂಡ ಮೇಘನಾ ನಾಚಪ್ಪ, ರೀಟಾ ನಾಚಪ್ಪ ಹಾಗೂ ಜೂನಿಯರ್ ಕಿಶೋರ್ ಕುಮಾರ್ ಖ್ಯಾತಿಯ ಮಾಳೇಟಿರ ಅಜಿತ್ ಪೂವಣ್ಣ ಅವರ ದೇಶಭಕ್ತಿ ಗೀತೆಗಳು ಪ್ರೇಕ್ಷಕರನ್ನು ಭಾವಪರವಶಗೊಳಿಸಿದವು. ಮೂರ್ನಾಡಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳ ಸಾಂಸ್ಕೃತಿಕ ಪ್ರದರ್ಶನಗಳು ಕಾರ್ಯಕ್ರಮಕ್ಕೆ ಮೆರುಗು ನೀಡಿದವು.
ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ವಿರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ಅಮ್ಮಣಿಚಂಡ ರವಿ ಉತ್ತಪ್ಪ, ವಿವಿಧ ಕೊಡವ ಸಮಾಜಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಕೊಡವ ಕೂಟಗಳ ಸದಸ್ಯರು, ಸ್ವಾತಂತ್ರ್ಯ ಹೋರಾಟಗಾರರ ಕುಟುಂಬ ಸದಸ್ಯರು, ಗಣ್ಯರು ಹಾಗೂ ಯುಕೊ ಸದಸ್ಯರು ಉಪಸ್ಥಿತರಿದ್ದರು.