ಜಿಲ್ಲೆಯಲ್ಲಿ ಇನ್‌ಫುಯೆಂಜಾ (ಎಚ್1ಎನ್1) ವೈರಸ್‌ನಿಂದ ಹರಡುವ ಜ್ವರವನ್ನು ತಡೆಯಲು ಆರೋಗ್ಯ ಇಲಾಖೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಸಾರ್ವಜನಿಕರು ಸೂಕ್ತ ಜಾಗ್ರತೆ ವಹಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಕೆ.ಎಂ. ಸತೀಶ್ ಕುಮಾರ್ ಮನವಿ ಮಾಡಿದ್ದಾರೆ. ಇತ್ತೀಚೆಗೆ ರಾಜ್ಯ ಆರೋಗ್ಯ ಸಚಿವರು ನಡೆಸಿದ ವಿಡಿಯೋ ಕಾನ್ಫರೆನ್ಸ್ ನಿರ್ದೇಶನದಂತೆ, ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ರೋಗ ನಿಯಂತ್ರಣ ಮತ್ತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಚುರುಕುಗೊಳಿಸಲಾಗಿದೆ. ರಾಜ್ಯದಲ್ಲಿ ಜನವರಿಯಿಂದ ಮಾರ್ಚ್ ಹಾಗೂ ಜುಲೈನಿಂದ ಸೆಪ್ಟೆಂಬರ್ ಅವಧಿಯಲ್ಲಿ ತೀವ್ರ ಸ್ವರೂಪದ ಜ್ವರ, ಕೆಮ್ಮು, ಶೀತ, ಹಳದಿ ಕಫ, ಗಂಟಲು ಕೆರೆತ, ಅತಿಯಾದ ಮೈ-ಕೈ ನೋವು, ಉಸಿರಾಟದ ತೊಂದರೆ ಮತ್ತು ಕೋವಿಡ್-19 ಮಾದರಿಯ ಲಕ್ಷಣಗಳು ಸಾಮಾನ್ಯವಾಗಿ ಕಂಡುಬರುತ್ತಿವೆ. ಕಳೆದ ಜನವರಿಯಿಂದ ಇಲ್ಲಿವರೆಗೆ ಜಿಲ್ಲೆಯಲ್ಲಿ ಸುಮಾರು 3,762 ಸಾಮಾನ್ಯ ಶೀತ, ಕೆಮ್ಮು ಹಾಗೂ ಜ್ವರದ ಪ್ರಕರಣಗಳು ದಾಖಲಾಗಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತೀವ್ರ ಉಸಿರಾಟದ ಸಮಸ್ಯೆಯ 11 ಪ್ರಕರಣಗಳು ಪತ್ತೆಯಾಗಿದ್ದು, ಇವುಗಳಲ್ಲಿ 4 ಮಂದಿಗೆ ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿ ಎಚ್1ಎನ್1 ಇನ್‌ಫುಯೆಂಜಾ ಇರುವುದು ದೃಢಪಡಿಸಲಾಗಿದೆ. ಜಿಲ್ಲಾಸ್ಪತ್ರೆ ಹಾಗೂ ಎಲ್ಲಾ ತಾಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಶಂಕಿತ ರೋಗಿಗಳಿಗಾಗಿ ಪ್ರತ್ಯೇಕ ವೈರಲ್ ವಾರ್ಡ್ಗಳ ವ್ಯವಸ್ಥೆ ಮಾಡಲಾಗಿದೆ. ಅಗತ್ಯಕ್ಕೆ ತಕ್ಕಂತೆ ಆಕ್ಸಿಜನ್, ವೆಂಟಿಲೇಟರ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಜ್ವರ ನಿಯಂತ್ರಣಕ್ಕಾಗಿ ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ತಾಲೂಕು ಆಸ್ಪತ್ರೆಗಳು ಮತ್ತು ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಫೀವರ್ ಕ್ಲಿನಿಕ್ ತೆರೆಯಲಾಗಿದೆ. ಪ್ಯಾರಸಿಟಮಲ್, ಸಿಟ್ರಿಜಿನ್, ಆಂಟಿಪೈರೆಟಿಕ್ಸ್ ಹಾಗೂ ಐವಿ ಫ್ಲೂಯಿಡ್ಸ್ ಸೇರಿದಂತೆ ಅಗತ್ಯ ಔಷಧಿಗಳ ಸಮರ್ಪಕ ದಾಸ್ತಾನು ಮಾಡಲಾಗಿದೆ. ಗಂಭೀರ ಪ್ರಕರಣಗಳಿಗೆ ನೀಡಲಾಗುವ 'ಒಸೆಲ್ಮಾಮಿವಿರ್' ಆ್ಯಂಟಿವೈರಲ್ ಔಷಧವನ್ನು ಎಲ್ಲಾ ಕೇಂದ್ರಗಳಿಗೆ ಪೂರೈಸಲಾಗಿದೆ. ವೆಂಟಿಲೇಟರ್ ಅಥವಾ ತೀವ್ರ ಚಿಕಿತ್ಸೆ ಅಗತ್ಯವಿರುವ ರೋಗಿಗಳನ್ನು ಜಿಲ್ಲಾಸ್ಪತ್ರೆಗೆ ರೆಫರ್ ಮಾಡಲು ಸೂಚಿಸಲಾಗಿದೆ. ಶಾಲಾ-ಕಾಲೇಜುಗಳ ಮಕ್ಕಳಲ್ಲಿಯೂ ಈ ರೀತಿಯ ರೋಗದ ಲಕ್ಷಣಗಳು ಕಂಡುಬAದಲ್ಲಿ, ತಕ್ಷಣವೇ ಸಂಬAಧಪಟ್ಟ ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.