ಸೋಮವಾರಪೇಟೆ ತಾಲೂಕಿನ ಯಡೂರು ಬಿಟಿಸಿಜಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿರುವ ಎನ್‌ಎಸ್‌ಎಸ್ ಶಿಬಿರವನ್ನು ಮಹೇಶ್ ಗುರಪ್ಪ ಉದ್ಘಾಟಿಸಿದರು. ಹರ್ಷ, ಶಿವಮೂರ್ತಿ, ಸುಶೀಲಾ, ರಾಜು ಇದ್ದರು. 
ಕೊಡಗು

ಯುವಶಕ್ತಿ ಬಳಸಿಕೊಂಡರೆ ಸಮಾಜದಲ್ಲಿ ಮಹತ್ತರ ಬದಲಾವಣೆ

ಸೋಮವಾರಪೇಟೆ: ವಿದ್ಯಾರ್ಥಿ ಜೀವನದಲ್ಲೇ ಸೇವಾ ಮನೋಭಾವನೆಯನ್ನು ಮೈಗೂಡಿಸಿಕೊಳ್ಳುವುದು ಅತ್ಯಂತ ಅಗತ್ಯ. ಯುವಶಕ್ತಿಯು ಸರಿಯಾದ ದಿಕ್ಕಿನಲ್ಲಿ ಬಳಸಿದರೆ ಸಮಾಜದಲ್ಲಿ ಮಹತ್ತರ ಬದಲಾವಣೆ ತರಲು ಸಾಧ್ಯ ಎಂದು ಉದ್ಯಮಿ ಹಾಗೂ ಕಾಲೇಜಿನ ಹಳೆಯ ವಿದ್ಯಾರ್ಥಿ ಮಹೇಶ್ ಗುರಪ್ಪ ಹೇಳಿದರು.
ಯಡೂರು ಗ್ರಾಮದ ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಘಟಕದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಯುವ ಜನತೆ ದೇಶದ ಭವಿಷ್ಯ. ನೀವು ಪಡೆಯುವ ಶಿಕ್ಷಣ ಕೇವಲ ಪುಸ್ತಕಗಳಿಗೆ ಸೀಮಿತವಾಗಿರಬಾರದು. ಅದನ್ನು ಸಮಾಜದ ಒಳಿತಿಗೆ ಬಳಸಬೇಕು. ಸೇವೆಯ ಮೂಲಕ ವ್ಯಕ್ತಿತ್ವ ವಿಕಾಸ ಸಾಧ್ಯ. ಸಹಾಯ ಮಾಡುವ ಮನೋಭಾವವು ಜೀವನದಲ್ಲಿ ಸಂತೋಷವನ್ನು ನೀಡುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಡಿ.ಹರ್ಷ ಮಾತನಾಡಿ, ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಗೆ ಸೇವಾ ಚಟುವಟಿಕೆ ಮೂಲಕ ಜೀವನ ಮೌಲ್ಯಗಳನ್ನು ಅರಿಯುವ ಉತ್ತಮ ವೇದಿಕೆಯಾಗಿದೆ. ಶಿಸ್ತಿನ ಜೀವನ, ನಾಯಕತ್ವ ಗುಣ, ಸಮಾಜದ ಬಗ್ಗೆ ಜವಾಬ್ದಾರಿ ಇವೆಲ್ಲವನ್ನು ಬೆಳೆಸುವಲ್ಲಿ ಈ ಯೋಜನೆ ಮಹತ್ವದ ಪಾತ್ರ ವಹಿಸುತ್ತದೆ ಎಂದರು.
ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಎಂ.ಎಸ್.ಶಿವಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಲ್ಲಿ ಶಿಸ್ತಿನ ಜೀವನ, ಸಹಕಾರ ಮನೋಭಾವ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವ ಉದ್ದೇಶ ಹೊಂದಿದೆ. ಇದರ ಉಗಮ ಮತ್ತು ಹಿನ್ನೆಲೆ ಸಮಾಜದ ಅಭಿವೃದ್ಧಿಗೆ ವಿದ್ಯಾರ್ಥಿಗಳನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವದಾಗಿದೆ ಎಂದರು.
ಶಿಬಿರದಲ್ಲಿ ವಿದ್ಯಾರ್ಥಿಗಳು ಈ ಮೌಲ್ಯಗಳನ್ನು ಅನುಭವಾತ್ಮಕವಾಗಿ ಕಲಿಯುವ ಅವಕಾಶ ಹೊಂದಿದ್ದಾರೆ. ಸಮಾಜದ ಸಮಸ್ಯೆಗಳ ಪರಿಹಾರಕ್ಕೆ ತಮ್ಮದೇ ಆದ ಕೊಡುಗೆ ನೀಡಲು ಈ ಶಿಬಿರ ನೆರವಾಗುತ್ತದೆ ಎಂದು ಹೇಳಿದರು.
ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಸುಶೀಲಾ ಹಾನಗಲ್, ದಳವಾಯಿ ರಾಜು, ಐ.ಕ್ಯು.ಎ.ಸಿ. ಸಂಚಾಲಕರಾದ ಎಂ.ಎ.ಸುನೀತಾ, ಪ್ರಾಧ್ಯಾಪಕರಾದ ಪಿ.ಪಾವನಿ, ಎಚ್.ಹುಚ್ಚೇಗೌಡ, ಬಿ.ಎಸ್.ವಿನೋದ, ರಾಜಾ ನಾಯಕ್, ಸಿಬ್ಬಂದಿ ದಿವ್ಯಾ, ಸಂಧ್ಯಾ ಹಾಗೂ ಎಚ್.ಜೆ.ಜವರಪ್ಪ ಇದ್ದರು.