ಶ್ರೀ ನಾರಾಯಣ ಗುರು ಜಯಂತಿಯನ್ನು ಗಣ್ಯರು ಉದ್ಘಾಟಿಸಿದರು. ಚೆಪ್ಪುಡೀರ ಅರುಣ್ ಮಾಚಯ್ಯ, ವಿ.ಕೆ. ಲೋಕೇಶ್, ಡಾ. ಎಂ. ರಾಮಚಂದ್ರನ್ ಇತರರಿದ್ದರು. 
ಕೊಡಗು

ನಾರಾಯಣ ಗುರು ಕೊಡುಗೆ ಅಪಾರ

ಎ. ಆರ್. ರಘುರಾಮ
ಸಿದ್ದಾಪುರ : ಸಾಮಾಜಿಕ ಸುಧಾರಣೆಯಲ್ಲಿ ಬಸವಣ್ಣ ಹಾಗೂ ಶ್ರೀ ನಾರಾಯಣ ಗುರು ಅವರ ಕೊಡುಗೆ ಮಹತ್ವದ್ದಾಗಿದೆ ಅಸ್ಪೃಶ್ಯತೆ, ಜಾತಿಮತ ಭೇದಭಾವ ಹಾಗೂ ಶೋಷಣೆಯಿಂದ ಕೂಡಿದ್ದ ಕೇರಳದಲ್ಲಿ ಸಾಮಾಜಿಕ ಪರಿವರ್ತನೆ ತರಲು ನಾರಾಯಣ ಗುರುಗಳು ಮಹತ್ವದ ಪಾತ್ರ ವಹಿಸಿದ್ದರು ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡೀರ ಅರುಣ್ ಮಾಚಯ್ಯ ಹೇಳಿದರು.
ಶ್ರೀ ನಾರಾಯಣ ಧರ್ಮ ಪರಿಪಾಲನ ಶಾಖಾ ಯೋಗಂ ಗೋಣಿಕೊಪ್ಪ ಹಾಗೂ ಶ್ರೀ ನಾರಾಯಣ ಗುರು ಜಯಂತಿ ಆಚರಣಾ ಸಮಿತಿ ವತಿಯಿಂದ 172ನೇ ಶ್ರೀ ನಾರಾಯಣ ಗುರು ಜಯಂತಿಯನ್ನು ಭಾನುವಾರ ಗೋಣಿಕೊಪ್ಪದ ಪರಿಮಳ ಮಂಗಳ ವಿಹಾರದಲ್ಲಿ ಆಚರಿಸಲಾಯಿತು.
ಶೋಷಿತರು,ಹಿಂದುಳಿದವರ ಧ್ವನಿಯಾಗಿ ಶ್ರೀ ನಾರಾಯಣ ಗುರುಗಳು ಇದ್ದರು ಎಂದು ಹೇಳಿದರು.
ಗೋಣಿಕೊಪ್ಪದ ಎಸ್‌ಎನ್‌ಡಿಪಿ ಭವನ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ದೊರಕಿಸಲು ಶಾಸಕ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಅವರು ನೀಡಿದ ಸಹಕಾರವನ್ನು ಸ್ಮರಿಸಿದ ಅವರು, ಮುಂದಿನ ದಿನಗಳಲ್ಲಿಯೂ ಸಮುದಾಯದ ಅಭಿವೃದ್ಧಿಗೆ ಶಾಸಕರೊಂದಿಗೆ ಕೈಜೋಡಿಸುವುದಾಗಿ ತಿಳಿಸಿದರು,
ಎಸ್‌ಎನ್‌ಡಿಪಿ ಯೂನಿಯನ್ ಕೊಡಗು ಅಧ್ಯಕ್ಷ ವಿ.ಕೆ. ಲೋಕೇಶ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಸುಮಾರು 15 ಸಾವಿರ ನೋಂದಾಯಿತ ಸದಸ್ಯರನ್ನು ಹೊಂದಿರುವ ಎಸ್‌ಎನ್‌ಡಿಪಿ ಪ್ರಮುಖ ಸಾಮಾಜಿಕ ಸಂಘಟನೆಯಾಗಿದೆ. ನಾರಾಯಣ ಗುರುಗಳ ಚಿಂತನೆಗಳು ಅಸ್ಪೃಶ್ಯತೆ ಸೇರಿದಂತೆ ಹಲವು ಸಾಮಾಜಿಕ ಪಿಡುಗುಗಳ ವಿರುದ್ಧ ಶಾಂತಿಯುತ ಹೋರಾಟಕ್ಕೆ ಪ್ರೇರಣೆಯಾಗಿವೆ. ಶಿಕ್ಷಣ, ದೇವಸ್ಥಾನ ಪ್ರವೇಶ ಸೇರಿದಂತೆ ಸಮಾಜದ ಎಲ್ಲ ವರ್ಗಗಳ ಅಭಿವೃದ್ಧಿಗೆ ವಿಚಾರಧಾರೆ ದಾರಿ ಮಾಡಿಕೊಟ್ಟಿದೆ ಎಂದರು.
ಗೋಣಿಕೊಪ್ಪ ಕೂರ್ಗ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಡಾ. ಎಂ. ರಾಮಚಂದ್ರನ್ ಮಾತನಾಡಿ, ನಾರಾಯಣ ಗುರುಗಳ ದಾರ್ಶನಿಕತೆಯನ್ನು ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ. ಮಹಾತ್ಮ ಗಾಂಧೀಜಿ ಹಾಗೂ ನಾರಾಯಣ ಗುರುಗಳ ಐತಿಹಾಸಿಕ ಭೇಟಿಯು ಭಾರತದ ವೈಚಾರಿಕ ಇತಿಹಾಸದಲ್ಲಿ ಮಹತ್ವದ ಘಟ್ಟವಾಗಿದೆ. ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು ಎಂಬ ಗುರುಗಳ ಸಂದೇಶ ಮಾನವ ಸಹೋದರತ್ವಕ್ಕೆ ದಾರಿ ತೋರಿಸುತ್ತದೆ ಎಂದರು.
ಸುಮಾರು ಒಂದು ಶತಮಾನದ ಹಿಂದೆ ಕೇರಳದಲ್ಲಿ ಅಸಮಾನತೆ ಜಾತೀಯ ತಾರತಮ್ಯ ಹಾಗೂ ಮೂಲ ಹಕ್ಕುಗಳ ನಿರಾಕರಣೆ ತೀವ್ರವಾಗಿದ್ದ ಸಂದರ್ಭದಲ್ಲಿ ನಾರಾಯಣ ಗುರುಗಳು ಜ್ಞಾನ ಮತ್ತು ಸಾಮಾಜಿಕ ಸಮಾನತೆಯ ಸಂದೇಶ ಸಾರಿದರು ಎಂದು ಹೇಳಿದರು
ದೇಶಕ್ಕಾಗಿ ದೀರ್ಘಕಾಲ ಸೇವೆ ಸಲ್ಲಿಸಿದ ಎಂಟು ಮಾಜಿ ಯೋಧರನ್ನು, ಎಸ್‌ಎನ್‌ಡಿಪಿ ಅಭಿವೃದ್ಧಿಗೆ ಶ್ರಮಿಸಿದ ನಾಲ್ವರನ್ನು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಐವರನ್ನು ಸನ್ಮಾನಿಸಲಾಯಿತು.
ಎಸ್‌ಎಸ್‌ಎಲ್‌ಸಿ, ಪಿಯು ಹಾಗೂ ಬಿ.ಎಸ್ಸಿ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿದ ಸದಸ್ಯರ ಮಕ್ಕಳನ್ನೂ ಗೌರವಿಸಲಾಯಿತು.
ಜಯಂತಿ ಆಚರಣಾ ಸಮಿತಿ ಅಧ್ಯಕ್ಷ ಪಿ.ಆರ್. ಸುರೇಂದ್ರ ಕಾರ್ಯದರ್ಶಿ ಕೆ.ವಿ. ಭಾಸ್ಕರ್ , ಗೋಣಿಕೊಪ್ಪಲು ಎಸ್‌ಎನ್‌ಡಿಪಿ ಶಾಖೆ ಅಧ್ಯಕ್ಷ ಪಿ.ಜಿ. ರಾಜಶೇಖರ್, ಗುರುಜಯಂತಿ ಸಂಘದ ಗೌರವಾಧ್ಯಕ್ಷ ಶಾಜಿ ಅಚ್ಯುತನ್, ಮಹಿಳಾ ಸಂಘಟನೆಯ ಅಧ್ಯಕ್ಷೆ ಅಶ್ವಧಿ ಚಂದ್ರನ್, ಮಾಜಿ ಸೈನಿಕರು, ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು