ಕಳ್ಳಬೇಟೆಗಾರರ ವಿರುದ್ಧದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಅರಣ್ಯ ಇಲಾಖೆ ಸಿಬ್ಬಂದಿ 
ಕೊಡಗು

ಗುಂಡೇಟಿನಿ0ದ ಅಕ್ರಮ ಬೇಟೆ ಆರೋಪಿಗಳಿಗೆ ಗಾಯ

ಮಡಿಕೇರಿ:
ಸಂಪಾಜೆ ಅರಣ್ಯ ವಲಯದ ಪಟ್ಟಿಗಾಟ್ ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಕಾಡುಕೋಣ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಜಾಲವನ್ನು ಅರಣ್ಯ ಇಲಾಖೆ ಸಿಬ್ಬಂದಿ ಭೇದಿಸಿದ್ದಾರೆ. ಕಾರ್ಯಾಚರಣೆ ವೇಳೆ ತಡೆದರೂ ಜೀಪ್ ನಿಲ್ಲಿಸದೆ ಸಿಬ್ಬಂದಿ ಮೇಲೆಯೇ ವಾಹನ ಚಲಾಯಿಸಲು ಯತ್ನಿಸಿದಾಗ, ಆತ್ಮರಕ್ಷಣೆಗಾಗಿ ಅರಣ್ಯ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದ್ದು, ಗಾಯಗೊಂಡಿರುವ ಇಬ್ಬರು ಆರೋಪಿಗಳು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.
ಗುರುವಾರ ರಾತ್ರಿ ಪಟ್ಟಿಘಾಟ್ ಮೀಸಲು ಅರಣ್ಯದಲ್ಲಿ ಬೇಟೆ ನಡೆಸಿ, ಮಾಂಸ ಸಾಗಿಸುತ್ತಿರುವ ಮಾಹಿತಿ ಹಿನ್ನೆಲೆಯಲ್ಲಿ ಕಾರ್ಯಾಚರಣೆಗೆ ಇಳಿದ ಅರಣ್ಯ ಇಲಾಖೆ ಸಿಬ್ಬಂದಿ ಬೆಟ್ಟತ್ತೂರು ಗ್ರಾಮದ ಸುಬ್ರಹ್ಮಣ್ಯ ದೇವಸ್ಥಾನದ ಕಮಾನಿನ ಬಳಿ ಹೊಂಚು ಹಾಕಿ ಕಾಯುತ್ತಿದ್ದರು. ಈ ಸಂದರ್ಭ ಶಂಕಿತ ಜೀಪ್ ಬರುತ್ತಿರುವುದನ್ನು ಗಮನಿಸಿದ ಅರಣ್ಯ ಸಿಬ್ಬಂದಿ ವಾಹನವನ್ನು ತಡೆಯಲು ಪ್ರಯತ್ನಿಸಿದ್ದಾರೆ. ಆದರೆ, ಆರೋಪಿಗಳು ಜೀಪು ನಿಲ್ಲಿಸದೇ ನೇರವಾಗಿ ಸಿಬ್ಬಂದಿ ಮೇಲೆಯೇ ಚಲಾಯಿಸಲು ಮುಂದಾಗಿದ್ದಾರೆ. ಈ ವೇಳೆ ಸಿಬ್ಬಂದಿ ಪಕ್ಕಕ್ಕೆ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದು, ತಡೆಯುವ ಪ್ರಯತ್ನದಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ವಾಹನವನ್ನು ನಿಲ್ಲಿಸುವ ಉದ್ದೇಶದಿಂದ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.
ಗುಂಡಿನ ಸದ್ದಿನಿಂದ ಹೆದರಿದ ಆರೋಪಿಗಳು ಮುಂದೆ ಹೋಗಿ ಜೀಪನ್ನು ರಸ್ತೆ ಬದಿಯಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಅರಣ್ಯ ಸಿಬ್ಬಂದಿ ಜೀಪನ್ನು ತಪಾಸಣೆ ನಡೆಸಿದಾಗ ಸುಮಾರು 260 ಕೆಜಿ ತೂಕದ ಕಾಡುಕೋಣದ ಮಾಂಸ ಪತ್ತೆಯಾಗಿದೆ. ಇದರೊಂದಿಗೆ ಬೇಟೆಗೆ ಬಳಸಲಾದ ಗುಂಡುಗಳ ಖಾಲಿ ಕಾರ್ಟ್ರಿಡ್ಜ್ಗಳು, ಚಾಕು, ಕೊಡಲಿ, ಅರಾ, ಟಾರ್ಚ್ಗಳು ಸಿಕ್ಕಿದ್ದು ಜೀಪು ಸಮೇತ ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳಾದ ಜುಬೇರ್ ಮತ್ತು ಯಾಸಿನ್ ಎಂಬವರು ಗಾಯಗೊಂಡು ಶುಕ್ರವಾರ ಬೆಳಗ್ಗೆ ಆಸ್ಪತ್ರೆಗೆ ದಾಖಲಾಗಿರುವ ಮಾಹಿತಿ ಪೊಲೀಸರಿಂದ ಅರಣ್ಯ ಇಲಾಖೆಗೆ ತಲುಪಿದೆ. ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಇವರೇ ಜೀಪಿನಿಂದ ಪರಾರಿಯಾಗಿದ್ದ ಬೇಟೆಗಾರರು ಎಂಬುದು ದೃಢಪಟ್ಟಿದೆ. ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದಾಗ ಅದರ ಸಣ್ಣ ಚೂರುಗಳು ತಗುಲಿ ಇಬ್ಬರಿಗೂ ಗಾಯಗಳಾಗಿವೆ ಎಂದು ಡಿಸಿಎಫ್ ಅಭಿಷೇಕ್ ಮಾಹಿತಿ ನೀಡಿದ್ದಾರೆ.
ಮತ್ತೊಂದು ಕಡೆ ಅರಣ್ಯ ಸಿಬ್ಬಂದಿಯೇ ನಮ್ಮ ಮೇಲೆ ಹಲ್ಲೆ ನಡೆಸಿ ಶೂಟ್ ಮಾಡಿದ್ದಾರೆ ಎಂದು ಆರೋಪಿಗಳು ಪ್ರತಿದೂರು ದಾಖಲಿಸಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನಾವು ಅನಗತ್ಯವಾಗಿ ಗುಂಡು ಹಾರಿಸಿಲ್ಲ. ಜೀಪನ್ನು ನಿಲ್ಲಿಸದೆ ನಮ್ಮ ಸಿಬ್ಬಂದಿ ಮೇಲೆಯೇ ಗಾಡಿ ಓಡಿಸಲು ಬಂದಾಗ ಅನಿವಾರ್ಯವಾಗಿ ಗಾಳಿಯಲ್ಲಿ ಶೂಟ್ ಮಾಡಬೇಕಾಯಿತು. ಆರೋಪಿಗಳು ಕೊಳಕೇರಿ ಗ್ರಾಮದವರೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸದ್ಯ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ವಿ. ಅಭಿಷೇಕ್, ಡಿಸಿಎಫ್, ಮಡಿಕೇರಿ