ವಿರಾಜಪೇಟೆಯ ಸಂತ ಅನ್ನಮ್ಮ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸಿಇಟಿ, ಜೆಇಇ, ನೀಟ್ ಪ್ರವೇಶ ಮಾಹಿತಿ ಉಚಿತ ಕಾರ್ಯಾಗಾರದಲ್ಲಿ ಹಾಜರಿದ್ದ ಕಾಲೇಜು ಉಪನ್ಯಾಸಕರು, ವಿದ್ಯಾರ್ಥಿಗಳು. 
ಕೊಡಗು

ಪರಿಶ್ರಮವೇ ಸಾಧನೆಗೆ ಪ್ರೇರಣೆ

ಎ. ಆರ್. ರಘುರಾಮ
ವಿರಾಜಪೇಟೆ : ಪರಿಶ್ರಮವೇ ಸಾಧನೆಗೆ ಪ್ರೇರಣೆ ಎಂದು ಮಂಗಳೂರಿನ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ತರಬೇತುದಾರ ಡಾ. ಪ್ರಶಾಂತ್ ರಾವ್ ಹೇಳಿದರು.
ಪಟ್ಟಣದ ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ಆಯೋಜಿಸಿದ್ದ ಸಿಇಟಿ, ಜೆಇಇ ಹಾಗೂ ನೀಟ್ ಪ್ರವೇಶ ಮಾಹಿತಿ ಉಚಿತ ಕಾರ್ಯಾಗಾರ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು. ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಸರಿಸಮನಾಗಿ ಗ್ರಾಮೀಣ ಮಕ್ಕಳೂ ಅಂಕಗಳನ್ನು ಗಳಿಸುತ್ತಿದ್ದಾರೆ. ಸಿಇಟಿ, ಜೆಇಇ ಹಾಗೂ ನೀಟ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ರ‌್ಯಾಂಕಿಂಗ್ ಗಳಿಸಿದರೂ ಆಯ್ಕೆ ವಿಷಯದಲ್ಲಿ ಹಲವರು ಹಿಂದುಳಿಯುತ್ತಾರೆ. ನಗರ ಪ್ರದೇಶಗಳ ವಿದ್ಯಾರ್ಥಿಗಳಿಗೆ ದೊರಕುವ ಮಾಹಿತಿ ಮತ್ತು ಆಯ್ಕೆ ವಿಧಾನಗಳ ಬಗ್ಗೆ ನಿರ್ಧಾರ ಕೈಗೊಳ್ಳುವ ಮಾರ್ಗದರ್ಶನ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಹೆಚ್ಚಾಗಿ ದೊರಕುತ್ತಿಲ್ಲ. ಇದರಿಂದ ನಿಜವಾದ ಪ್ರತಿಭೆಗಳಿಗೆ ಅಡಚಣೆ ಆದಂತಾಗುತ್ತದೆ. ಈ ನಿಟ್ಟಿನಲ್ಲಿ ಕಾರ್ಯಾಗಾರ ಆಯೋಜನೆ ಶ್ಲಾಘನೀಯವಾಗಿದೆ ಎಂದರು.
ಸಂತ ಅನ್ನಮ್ಮ ವಿದ್ಯಾಸಂಸ್ಥೆ ವ್ಯವಸ್ಥಾಪಕ ಜೇಮ್ಸ್ ಡೊಮಿನಿಕ್ ಮಾತನಾಡಿ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಸಂದರ್ಭ ಕೇವಲ ಪುಸ್ತಕದಲ್ಲಿನ ವಿಚಾರವಲ್ಲದೆ ಅಗತ್ಯ ಕೌಶಲ ಮತ್ತು ಜೀವನ ಮೌಲ್ಯಗಳನ್ನೂ ಕಲಿತುಕೊಳ್ಳಬೇಕು. ಆಗ ಮಾತ್ರ ನಿಗದಿತ ಕ್ಷೇತ್ರದಲ್ಲಿ ಭವಿಷ್ಯ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದರು. ಕಾಲೇಜಿನ ಉಪನ್ಯಾಸಕ ಡಾ. ಹೇಮಂತ್ ಮಾತನಾಡಿ, ಪಾಲಕರು ಮತ್ತು ಉಪನ್ಯಾಸಕರು ಸಮಗ್ರ ಮಾರ್ಗದರ್ಶನ ನೀಡಿದರೆ ವಿದ್ಯಾರ್ಥಿಯ ಭವಿಷ್ಯ ರೂಪುಗೊಳ್ಳುತ್ತದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಧರ್ಮಗುರು ಮದಲೈ ಮುತ್ತು ಅಧ್ಯಕ್ಷತೆ ವಹಿಸಿ ಮಾತನಾಡಿ, ಪದವಿ ಪೂರ್ವ ಶಿಕ್ಷಣದ ಹಂತವು ವಿದ್ಯಾರ್ಥಿಗಳ ಬದುಕಿನ ದಿಕ್ಕನ್ನೇ ಬದಲಾಯಿಸುತ್ತದೆ. ಈ ಹಂತದಲ್ಲಿ ಪಾಲಕರು ನೀಡುವ ಸಹಕಾರ ಬಹು ಅಮೂಲ್ಯವಾಗಿರುತ್ತದೆ ಎಂದರು. ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ ವಾಣಿಜ್ಯ ವಿಭಾಗದಲ್ಲಿ 588 ಅಂಕ ಗಳಿಸಿದ ನಿಶಿಕಾ ದೇಚಮ್ಮ ಹಾಗೂ ವಿಜ್ಞಾನ ವಿಭಾಗದಲ್ಲಿ 586 ಅಂಕ ಪಡೆದ ಜೆಸಿಕಾ ಅವರನ್ನು ಸನ್ಮಾನಿಸಲಾಯಿತು. ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉನ್ನತ ಶ್ರೇಣಿ ಪಡೆದ ಕಾಲೇಜಿನ 99 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಗೌರವಿಸಲಾಯಿತು. ಉಪನ್ಯಾಸಕರಾದ ತೀರ್ಥಾ, ಕವಿತಾ, ಕೃಷ್ಣರಾಜ್, ವಿವೇಕ್, ಅಶ್ವಿನಿ, ರಮ್ಯಾ ಹಾಜರಿದ್ದರು.