ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಸಮಿತಿ ಸಭೆಯಲ್ಲಿ ಧರ್ಮಜ ಉತ್ತಪ್ಪ ಮಾತನಾಡಿದರು. ಶರೀ ಗಿರೀಶ್, ಕೆ.ಸಿ.ಭೀಮಯ್ಯ, ಪಂಕಜ ಇತರರಿದ್ದರು.
- ಜಿಲ್ಲೆಯ ಅಗತ್ಯವಿರುವ ಕಡೆ ಸರ್ಕಾರಿ ಬಸ್ಸು ಕಲ್ಪಿಸಿ
- ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಸಮಿತಿ ಸಭೆಯಲ್ಲಿ ಧರ್ಮಜ ಉತ್ತಪ್ಪ
ಮಡಿಕೇರಿ: ಕೊಡಗು ಜಿಲ್ಲೆಯ ಪಾಲಿಬೆಟ್ಟ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಕೆಎಸ್‌ಆರ್‌ಟಿಸಿ ಬಸ್ ಇಲ್ಲದೆ ಪರಿತಪಿಸುತ್ತಿದ್ದಾರೆ. ಆದ್ದರಿಂದ ಕೂಡಲೇ ಸರ್ಕಾರಿ ಬಸ್ ನಿಯೋಜಿಸುವಂತೆ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ ಅವರು ಸೂಚಿಸಿದರು.
ನಗರದ ಜಿ.ಪಂ.ಕೆಡಿಪಿ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಹಾಗೂ ಮೇಲ್ವಿಚಾರಣೆ ಸಂಬಂಧ ಶುಕ್ರವಾರ ನಡೆದ ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಕುರಿತು ವಿಷಯ ಪ್ರಸ್ತಾಪಿಸಿದ ವಿರಾಜಪೇಟೆ ತಾಲ್ಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷ ಪಿ.ವಿ.ಜಾನ್ಸನ್, ಪಿರಿಯಾಪಟ್ಟಣ ಮಾಲ್ದಾರೆ, ಚೆನ್ನಂಗಿ, ಚೆನ್ನಯ್ಯನಕೋಟೆ, ಪಾಲಿಬೆಟ್ಟ, ಅಮ್ಮತ್ತಿ, ವಿರಾಜಪೇಟೆ ಮಾರ್ಗ ಬೆಳಗ್ಗೆ ಮತ್ತು ಸಂಜೆ ವೇಳೆಯಲ್ಲಿ ಸರ್ಕಾರಿ ಬಸ್‌ನ್ನು ನಿಯೋಜಿಸುವಂತೆ ಅಲ್ಲಿನ ಸಾರ್ವಜನಿಕರು ಹಾಗೂ ಪ್ರಾಚಾರ್ಯರು ಮನವಿ ಮಾಡಿದ್ದು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಗಮನ ಸೆಳೆದರು.
ಸಮಿತಿ ಸದಸ್ಯ ಕೆ.ಜಿ.ಪೀಟರ್ ಮಾತನಾಡಿ, ಕೊಡಗು ಜಿಲ್ಲಾ ಕೇಂದ್ರದಲ್ಲಿ ಕೆಎಸ್‌ಆರ್‌ಟಿಸಿ ವಿಭಾಗೀಯ ಕಚೇರಿ ಇಲ್ಲದಿರುವುದು ಬೇಸರ ತರಿಸುವ ಸಂಗತಿ. ರಾಜ್ಯದ ೩೦ ಜಿಲ್ಲಾ ಕೇಂದ್ರಗಳಲ್ಲಿ ಕೆಎಸ್‌ಆರ್‌ಟಿಸಿ ವಿಭಾಗೀಯ ಕಚೇರಿ ಇದೆ. ಆದರೆ ಮಡಿಕೇರಿಯಲ್ಲಿ ವಿಭಾಗೀಯ ಕೇಂದ್ರ ಇಲ್ಲದಿರುವುದು ನೋವಿನ ಸಂಗತಿ. ಆದ್ದರಿಂದ ಈ ಕಚೇರಿ ತೆರೆಯಬೇಕು. ಇದರಿಂದ ಸರ್ಕಾರಿ ಬಸ್‌ಗಳ ನಿಯೋಜನೆಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಸೋಮವಾರಪೇಟೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕಾಂತರಾಜು, ಅವರು ಕೂಡಲೇ ಮಡಿಕೇರಿಯಲ್ಲಿ ಕೆಎಸ್‌ಆರ್‌ಟಿಸಿ ವಿಭಾಗೀಯ ಕಚೇರಿ ಆರಂಭಿಸಲು ಸಾರಿಗೆ ಸಚಿವರು ಮತ್ತು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಲು ನಿಯೋಗ ತೆರಳುವಂತಾಗಬೇಕು. ಆ ನಿಟ್ಟಿನಲ್ಲಿ ಜಿಲ್ಲಾಧ್ಯಕ್ಷರು ಪ್ರಯತ್ನಿಸುವಂತೆ ಸಲಹೆ ಮಾಡಿದರು.
ಈ ಸಂಬಂಧ ಕೆಎಸ್‌ಆರ್‌ಟಿಸಿ ಘಟಕ ವ್ಯವಸ್ಥಾಪಕ ಈರಸಪ್ಪ ಮಾತನಾಡಿ, ಸಾರ್ವಜನಿಕರ ಮನವಿ ಮೇರೆಗೆ ಹಲವು ಕಡೆಗಳಲ್ಲಿ ಬಸ್ ಸಂಪರ್ಕ ಕಲ್ಪಿಸಲಾಗಿದೆ. ಇನ್ನೂ ಹಲವು ಗ್ರಾಮಗಳಿಗೆ ಬೇಡಿಕೆ ಇದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪಿ.ವಿ.ಜಾನ್ಸನ್, ಈ ಹಿಂದೆ ಕೋಲಾರ ಜಿಲ್ಲೆಯ ಕೆಜಿಎಫ್‌ಗೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರವಿತ್ತು. ಕಳೆದ ಹಲವು ತಿಂಗಳಿನಿಂದ ಬಸ್ ಸಂಚಾರ ಸ್ಥಗಿತಗೊಂಡಿದೆ. ಆದ್ದರಿಂದ ಈ ಬಸ್ಸು ಮಾರ್ಗವನ್ನು ಮುಂದುವರಿಸಬೇಕು ಎಂದು ಕೋರಿದರು.
ಈ ಕುರಿತು ಮಾತನಾಡಿದ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ಪಪ್ಪ, ಈ ಹಿಂದೆ ಓಡಾಡುತ್ತಿದ್ದ ಬಸ್‌ಗಳನ್ನು ಮುಂದುವರೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಆಹಾರ ಇಲಾಖೆಗೆ ಸಂಬಂಧಿಸಿದಂತೆ ಮಾತನಾಡಿದ ಧರ್ಮಜ ಉತ್ತಪ್ಪ, ಹಲವು ಕಡು ಬಡವರಿಗೆ ಎಪಿಎಲ್ ಕಾರ್ಡ್ ದೊರೆತಿದ್ದು, ಇದನ್ನು ಸರಿಪಡಿಸುವಂತೆ ಹಲವು ಸಭೆಗಳಲ್ಲಿ ಹೇಳಲಾಗಿದೆ. ಈ ಕೆಲಸ ಪ್ರಗತಿ ಸಾಧಿಸಿಲ್ಲ ಎಂದು ಅವರು ಅತೃಪ್ತಿ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಆಹಾರ ನಿರೀಕ್ಷಕಿ ಶೀಲಕುಮಾರಿ, ಸರ್ಕಾರದಿಂದ ಆದಾಯ ತೆರಿಗೆ ಫೈಲ್ ಮಾಡಿರುವ ೧.೨೦ ಲಕ್ಷ ಮೇಲ್ಪಟ್ಟ ಆದಾಯ ಹೊಂದಿರುವ ಮತ್ತು ಇತರೆ ಮಾನದಂಡಗಳಡಿ ಜಿಲ್ಲೆಯಲ್ಲಿ ಒಟ್ಟು ೪,೫೧೧ ಪಡಿತರ ಚೀಟಿಗಳು ಎಪಿಎಲ್ ಆಗಿ ಪರಿವರ್ತನೆಗೊಂಡಿವೆ. ಪರಿವರ್ತನೆಗೊಂಡಿರುವ ಪೈಕಿ ಅರ್ಹ ಫಲಾನುಭವಿಗಳ ಪಡಿತರ ಚೀಟಿಗಳು ಎಪಿಎಲ್ ಆಗಿ ಪರಿವರ್ತನೆಗೊಂಡಿದ್ದಲ್ಲಿ ಅಂತಹ ಪಡಿತರ ಚೀಟಿದಾರರು ಅಗತ್ಯ ದಾಖಲೆಗಳೊಂದಿಗೆ ಸಂಬಂಧಪಟ್ಟ ತಾಲೂಕು ತಹಶೀಲ್ದಾರರು/ ಆಹಾರ ನಿರೀಕ್ಷಕರಿಗೆ ಅರ್ಜಿ ಸಲ್ಲಿಸಿದ್ದಲ್ಲಿ ಸ್ಥಳ ಪರಿಶೀಲಿಸಿ ಬಿಪಿಎಲ್‌ಗೆ ವರ್ಗಾಯಿಸಲು ಕ್ರಮಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಪೊನ್ನಂಪೇಟೆ ತಾಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಶಾಂತ್ ಮಾತನಾಡಿ, ಶ್ರೀಮಂಗಲ ವ್ಯಾಪ್ತಿಯಲ್ಲಿ ಲೈನ್‌ಮೆನ್‌ಗಳ ಕೊರತೆ ಇದ್ದು, ಕೂಡಲೇ ಲೈನ್‌ಮೆನ್‌ಗಳನ್ನು ನಿಯೋಜಿಸಿ ಸಮರ್ಪಕ ವಿದ್ಯುತ್ ಪೂರೈಕೆಗೆ ಕ್ರಮವಹಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಧರ್ಮಜ ಉತ್ಪಪ್ಪ, ಜಿಲ್ಲೆಯಲ್ಲಿ ೨೯೧ ಲೈನ್‌ಮೆನ್ ಹುದ್ದೆಗಳಲ್ಲಿ ೫೧ ಹಿರಿಯ ಲೈನ್‌ಮೆನ್‌ಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ೧೯ ಜನ ಲೈನ್‌ಮೆನಗಳು ನಿಯೋಜನೆಗೊಂಡಿದ್ದು, ಸ್ವಲ್ಪ ಸುಧಾರಣೆಯಾಗಲಿದೆ ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಪ್ರಸನ್ನ ಕುಮಾರ್ ಮಾತನಾಡಿ, ಗೃಹಲಕ್ಷ್ಮಿ ಯೋಜನೆಯಡಿ ಜಿಲ್ಲೆಯಲ್ಲಿ ಶೇ.,೭೮ ರಷ್ಟು ಪ್ರಗತಿ ಸಾಧಿಸಲಾಗಿದೆ. ನವೆಂಬರ್ ಅಂತ್ಯದವರೆಗೆ ಗೃಹಲಕ್ಷ್ಮಿ ಯೋಜನೆಯಡಿ ಹಣ ಪಾವತಿ ಮಾಡಲಾಗಿದ್ದು, ಶೇ.೯೮.೮೧ ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದರು.
ಗೃಹಜ್ಯೋತಿ ಯೋಜನೆಯಡಿ ಶೇ.೯೯.೨ ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ರಾಮಚಂದ್ರ ಮಾಹಿತಿ ನೀಡಿದರು.
ಯುವನಿಧಿ ಯೋಜನೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಜಿಲ್ಲಾ ಉದ್ಯೋಗ ವಿನಿಮಯಾಧಿಕಾರಿ ಮಂಜುನಾಥ್, ಫೆಬ್ರವರಿ ಮಾಸಾಂತ್ಯಕ್ಕೆ ಪದವೀಧರರು ಮತ್ತು ಡಿಪ್ಲೋಮ ಪದವೀದರರು ಸೇರಿ ೧೭೧೯ ಫಲಾನುಭವಿಗಳಿಗೆ ೫.೦೬ ಕೋಟಿ ಹಣವನ್ನು ಡಿಬಿಟಿ ಮೂಲಕ ಜಮೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ ಅವರು ಗ್ಯಾರಂಟಿ ಯೋಜನೆ ಅನುಷ್ಠಾನ ಸಂಬಂಧಿಸಿದಂತೆ ಹಲವು ಮಾಹಿತಿ ನೀಡಿದರು. ವಿವಿಧ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿದ್ದಲ್ಲಿ ಇನ್ನಷ್ಟು ಪ್ರಗತಿ ಸಾಧಿಸಬಹುದಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷರಾದ ಶರೀ ಗಿರೀಶ್, ಕೆ.ಸಿ.ಭೀಮಯ್ಯ, ಪಂಕಜ, ಸದಸ್ಯರಾದ ಮಂದ್ರೀರ ಮೋಹನ್‌ದಾಸ್, ಪಿ.ಎಲ್.ಸುರೇಶ್, ಕೆ.ಎಂ.ಬಶೀರ್, ಕಾಳಿಮಾಡ ಪ್ರಶಾಂತ್, ಇತರರು ಇದ್ದರು.