ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ನಡೆದ ಶಿಕ್ಷಣ ಕಾರ್ಯಕ್ರಮವನ್ನು ರಾಬಿನ್ ದೇವಯ್ಯ ಉದ್ಘಾಟಿಸಿ ಮಾತನಾಡಿದರು. ಸಿ.ಎ.ಶಂಭುಲಿಂಗಪ್ಪ, ಶ್ಯಾಂಚಂದ್ರ ಇತರರಿದ್ದರು.
- ಸಹಕಾರ ಕ್ಷೇತ್ರ ರೈತರ ಬೆನ್ನುಲುಬು
- ಜಿಎಸ್‌ಟಿ ಮತ್ತು ಆದಾಯ ತೆರಿಗೆ ಶಿಕ್ಷಣ ಕಾರ್ಯಕ್ರಮದಲ್ಲಿ ರಾಬಿನ್ ದೇವಯ್ಯ ಬಣ್ಣನೆ
ಮಡಿಕೇರಿ: ಸಹಕಾರ ಕ್ಷೇತ್ರ ರೈತರ ಬೆನ್ನುಲುಬಾಗಿದ್ದು, ಇಂತಹ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ತಮ್ಮ ಕೆಲಸವನ್ನು ದೇಶ ಸೇವೆ ಎಂದು ಅರಿತುಕೊಂಡು ತೃಪ್ತಿದಾಯಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಪಿ.ಯು.ರಾಬಿನ್ ದೇವಯ್ಯ ಕರೆ ನೀಡಿದರು.
ಕರ್ನಾಟಕ ರಾಜ್ಯ ಸಹಕಾರ ಮಾಹಾ ಮಂಡಳ ಬೆಂಗಳೂರು, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯ ಪ್ಯಾಕ್ಸ್, ಪಿಕಾರ್ಡ್ ಬ್ಯಾಂಕ್, ಎಪಿಸಿಎಂಎಸ್, ಜೇನು ಸಹಕಾರ ಸಂಘ, ಪತ್ತಿನ ಹಾಗೂ ಮಾರಾಟ ಸಹಕಾರ ಸಂಘಗಳ ಲೆಕ್ಕಿಗರು, ಸಹಾಯಕ ಸಿಬ್ಬಂದಿಗಳಿಗೆ ಜಿಎಸ್‌ಟಿ ಮತ್ತು ಆದಾಯ ತೆರಿಗೆ ಕುರಿತು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ನಡೆದ ಶಿಕ್ಷಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮೊಟ್ಟ ಮೊದಲು ಗದಗ ಜಿಲ್ಲೆಯಲ್ಲಿ ಆರಂಭ ಕಂಡ ಸಹಕಾರ ಕ್ಷೇತ್ರ ಇಂದು ಬೃಹತ್ತಾಗಿ ಬೆಳೆದಿದ್ದು, ದೇಶ ವ್ಯಾಪಿ ಕಟ್ಟ ಕಡೆಯ ರೈತನನ್ನು ತಲುಪಲು ಸಾಧ್ಯವಾಗಿದೆ. ಕೇಂದ್ರ ಸರ್ಕಾರ ಕೂಡ ರೈತರ ಅಭಿವೃದ್ಧಿಗಾಗಿ ಸಹಕಾರ ಖಾತೆಯನ್ನು ಸೃಷ್ಟಿಸಿದ್ದು, ೫ ವರ್ಷಗಳನ್ನು ಪೂರೈಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಸಹಕಾರ ಕ್ಷೇತ್ರದಲ್ಲಿ ಹಲವಾರು ಬದಲಾವಣೆಗಳು, ತಿದ್ದುಪಡಿಗಳು, ನೀತಿ ನಿಯಮ, ಕಾನೂನುಗಳನ್ನು ಆಯಾ ಕಾಲಗಟ್ಟದಲ್ಲಿ ಮಾರ್ಪಾಡು ಮಾಡಲಾಗುತ್ತದೆ. ಇಂತಹ ವಿಚಾರಗಳ ಕುರಿತು ಸಹಕಾರ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವ ಸಿಬ್ಬಂದಿಗಳು ಅರಿತುಕೊಳ್ಳುವುದು ಅತೀ ಅವಶ್ಯವಾಗಿದೆ ಎಂದು ಹೇಳಿದರು. ಇದನ್ನು ನಿಮ್ಮ ಕೆಳ ಹಂತದ ಸಿಬ್ಬಂದಿಗಳಿಗೂ ಮನವರಿಕೆ ಹಾಗೂ ಅರಿವು ಮೂಡಿಸುವ ಕೆಲಸವೂ ನಿಮ್ಮದಾಗಿದೆ. ರೈತರಿಗೆ ಈ ಕುರಿತು ಮಾಹಿತಿ ನೀಡುವ ಉತ್ತರದಾಯಿತ್ವ ಕೂಡ ನಿಮ್ಮ ಮೇಲಿದೆ ಎಂದು ಹೇಳಿದರು.
ದೇಶದ ಗಡಿಯಲ್ಲಿ ನಿಂತು ದೇಶ ರಕ್ಷಣೆ ಮಾಡುವ ಅವಕಾಶ ಎಲ್ಲರಿಗೂ ದೊರಕಲಾರದು. ಆದರೆ, ತಾವು ಮಾಡುವ ಕೆಲಸವೂ ದೇಶ ಸೇವೆ ಎಂದು ಅರಿತುಕೊಂಡು ತೃಪ್ತಿದಾಯಕ ಸೇವೆಯನ್ನು ಸಹಕಾರ ಕ್ಷೇತ್ರದಲ್ಲಿ ಸಲ್ಲಿಸಬೇಕು. ಇದರಿಂದ ಸೇವಾ ನಿವೃತ್ತಿಯ ಬಳಿಕವೂ ಆತ್ಮ ತೃಪ್ತಿ ಇರಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಜಿಲ್ಲಾ ಕೇಂದ್ರ ಬ್ಯಾಂಕ್ ಮತ್ತು ಜಿಲ್ಲಾ ಯೂನಿಯನ್ ಮೂಲಕ ಉತ್ತಮ ಸಹಕಾರ ಸಂಘಗಳಿಗೆ ಪ್ರತಿ ವರ್ಷ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಇಂತಹ ಪ್ರತಿಷ್ಠಿತ ಪ್ರಶಸ್ತಿ ಪಡೆಯಲು ಅಲ್ಲಿನ ಸಿಬ್ಬಂದಿಗಳ ಅಳಿಲು ಸೇವೆಯೂ ಮುಖ್ಯವಾಗುತ್ತದೆ ಎಂಬುದನ್ನು ನೆನಪಿಡಬೇಕು ಎಂದು ಸಲಹೆ ನೀಡಿದರು.
ಹಾಸನದ ಸನ್ನದ್ದು ಲೆಕ್ಕಿಗರಾದ ಸಿ.ಎ.ಶಂಭುಲಿಂಗಪ್ಪ ಅವರು ಜಿಎಸ್‌ಟಿ, ಆದಾಯ ತೆರಿಗೆ ವಿಚಾರಗಳ ಕುರಿತು ಉಪನ್ಯಾಸ ನೀಡಿದರು. ೨೦೧೭ರಿಂದ ದೇಶದಲ್ಲಿ ಏಕರೂಪದ ತೆರಿಗೆ ಎಂಬ ನೀತಿಯ ಅಡಿಯಲ್ಲಿ ಜಿಎಸ್‌ಟಿಯನ್ನು ಜಾರಿಗೆ ತರಲಾಗಿದೆ. ಈ ನಿಯಮ ರೂಪಿಸುವ ಸಂದರ್ಭ ಕನಿಷ್ಟ ೬ ಸಾವಿರ ತಿದ್ದುಪಡಿಗಳನ್ನು ಮಾಡಲಾಗಿದೆ. ಈ ಕುರಿತು ಸಂಪೂರ್ಣ ಮಾಹಿತಿ ಪಡೆದುಕೊಳ್ಳುವುದು ಕಷ್ಟಸಾಧ್ಯವಾದರೂ ಇದರ ಬಗ್ಗೆ ಸಹಕಾರ ಕ್ಷೇತ್ರದ ಪ್ರತಿ ಸಿಬ್ಬಂದಿಯೂ ಕನಿಷ್ಟ ಮಾಹಿತಿಯನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ಹೇಳಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರುಗಳಾದ ಎ.ಎಸ್.ಶ್ಯಾಂಚಂದ್ರ, ಎಂ.ಎಂ. ಶ್ಯಾಮಲ, ಎಂ.ಟಿ.ಸುಬ್ಬಯ್ಯ, ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ ಉಪಸ್ಥಿತರಿದ್ದರು.