ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಪೊನ್ನಂಪೇಟೆ ಹಾಕಿ ಟರ್ಫ್ ಮೈದಾನ ಅಭಿವೃದ್ಧಿ ಕಾಮಗಾರಿಗೆ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ ಅವರು ಭೂಮಿ ಪೂಜೆ ನೆರವೇರಿಸಿದರು. ಅರುಣ್ ಮಾಚಯ್ಯ, ವಿಸ್ಮಯ ಚಕ್ರವರ್ತಿ ಇತರರಿದ್ದರು.
- ಟರ್ಫ್ ಮೈದಾನ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ
- ರೂ.೩.೨೦ ಕೋಟಿ ವೆಚ್ಚದಲ್ಲಿ ಪುನರ್ನಿರ್ಮಾಣ: ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ
ಗೋಣಿಕೊಪ್ಪ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಪೊನ್ನಂಪೇಟೆ ಹಾಕಿ ಟರ್ಫ್ ಮೈದಾನ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು.
ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಪೊನ್ನಂಪೇಟೆ ಹಾಕಿ ಟರ್ಫ್ ಮೈದಾನವನ್ನು ರೂ.೩.೨೦ ಕೋಟಿ ವೆಚ್ಚದಲ್ಲಿ ಪುನರ್ನಿರ್ಮಾಣಗೊಳಿಸಲಾಗುತ್ತಿದ್ದು, ನೂತನ ಸ್ಪ್ರಿಂಕ್ಲರ್ ವ್ಯವಸ್ಥೆ ಹಾಗೂ ಚೈನ್ ಲಿಂಕ್ ಫೆನ್ಸಿಂಗ್ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದು ಹೇಳಿದರು.
ಟರ್ಫ್‌ನ ನವೀಕರಣಕ್ಕಾಗಿ ಕಳೆದ ಎರಡು ವರ್ಷಗಳಿಂದ ಕ್ರೀಡಾ ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ನಿರಂತರವಾಗಿ ಚರ್ಚಿಸಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದೀಗ ಕಾಮಗಾರಿಗೆ ಅನುಮೋದನೆ ದೊರೆತಿದ್ದು, ಉತ್ತಮ ಗುಣಮಟ್ಟದೊಂದಿಗೆ ಶೀಘ್ರವಾಗಿ ಕಾಮಗಾರಿ ಪೂರ್ಣಗೊಳ್ಳಲಿ ಎಂದು ಆಶಿಸಿದರು.
ಪೊನ್ನಂಪೇಟೆಯಲ್ಲಿ ರೂ.೫ ಕೋಟಿ ವೆಚ್ಚದಲ್ಲಿ ೧೦೦ ವಿದ್ಯಾರ್ಥಿಗಳ ಸಾಮರ್ಥ್ಯದ ಕ್ರೀಡಾ ವಸತಿ ಶಾಲೆಯ ನಿರ್ಮಾಣವೂ ನಡೆಯುತ್ತಿದೆ. ಇದರಲ್ಲಿ ೫೦ ಬಾಲಕರು ಹಾಗೂ ೫೦ ಬಾಲಕಿಯರಿಗೆ ವಸತಿ ಸೌಲಭ್ಯ ಕಲ್ಪಿಸಲಾಗುವುದು. ಕಾಮಗಾರಿಯನ್ನು ಸುಮಾರು ಒಂದೂವರೆ ವರ್ಷದಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದರು.
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ವಿವಿಧ ಹೋಬಳಿಗಳಲ್ಲಿರುವ ಕ್ರೀಡಾ ಮೈದಾನಗಳ ಅಭಿವೃದ್ಧಿಗೂ ಆದ್ಯತೆ ನೀಡಲಾಗುತ್ತಿದೆ. ಕಾನೂರಿನ ಜನತಾ ಪ್ರೌಢಶಾಲೆ ಹಿಂಭಾಗದ ಮೈದಾನವನ್ನು ಪುನಶ್ಚೇತನಗೊಳಿಸಿ ಫೆನ್ಸಿಂಗ್ ಅಳವಡಿಸುವುದು, ವಿರಾಜಪೇಟೆ ತಾಲೂಕು ಮೈದಾನ ಸೇರಿದಂತೆ ಅಮ್ಮತ್ತಿ, ಹೆಬ್ಬಾಲೆ ಮತ್ತಿತರ ಹೋಬಳಿಗಳಲ್ಲಿನ ಮೈದಾನಗಳನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಬಿ.ಬಾಡಗದಲ್ಲಿ ೧೧.೫ ಎಕರೆ ಸರ್ಕಾರಿ ಜಾಗವನ್ನು ಗುರುತಿಸಿ ಸುಮಾರು ರೂ ೪೦೪೫ ಕೋಟಿ ವೆಚ್ಚದಲ್ಲಿ ಸಮಗ್ರ ಕ್ರೀಡಾ ತರಬೇತಿ ಕೇಂದ್ರ ನಿರ್ಮಿಸುವ ಮಹತ್ವಾಕಾಂಕ್ಷಿ ಯೋಜನೆ ಆರಂಭಿಸಲಾಗಿದೆ. ಈಗಾಗಲೇ ಆಡಳಿತ ಕಟ್ಟಡದ ಕಾಮಗಾರಿ ಪ್ರಾರಂಭವಾಗಿದ್ದು, ಕೇಂದ್ರದಲ್ಲಿ ಟೆನಿಸ್ ಕೋರ್ಟ್‌ಗಳು, ಒಳಾಂಗಣ ಬ್ಯಾಡ್ಮಿಂಟನ್ ಕೋರ್ಟ್‌ಗಳು, ಅಂತರರಾಷ್ಟ್ರೀಯ ಮಟ್ಟದ ಒಳಾಂಗಣ ಈಜುಕೊಳ, ಹಾಕಿ ಟರ್ಫ್ ಹಾಗೂ ರನ್ನಿಂಗ್ ಟ್ರ್ಯಾಕ್ ಸೇರಿದಂತೆ ವಿವಿಧ ಕ್ರೀಡಾ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶವಿದೆ ಎಂದು ಪೊನ್ನಣ್ಣ ಹೇಳಿದರು.
ಪೊನ್ನಂಪೇಟೆ ಹಾಕಿ ಟರ್ಫ್‌ನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಮೂಲಕ ಕ್ರೀಡಾಪಟುಗಳಿಗೆ ಉತ್ತಮ ತರಬೇತಿ ಹಾಗೂ ಕ್ರೀಡಾ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಕಾಮಗಾರಿ ಕೈಗೊಳ್ಳಲಾಗಿದೆ. ಕೊಡಗು ಜಿಲ್ಲೆಯ ಹಾಕಿ ಪ್ರತಿಭೆಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಈ ಅಭಿವೃದ್ಧಿ ಕಾಮಗಾರಿ ಮಹತ್ವದ್ದಾಗಿದೆ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚಿಪ್ಪುಡೀರ ಅರುಣ್ ಮಾಚಯ್ಯ ಮಾತನಾಡಿ, ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಲವು ಮಹತ್ವದ ಕ್ರಮಗಳನ್ನು ಕೈಗೊಂಡಿದ್ದು, ಸರ್ಕಾರಿ ಉದ್ಯೋಗಗಳಲ್ಲಿ ಕ್ರೀಡಾಪಟುಗಳಿಗೆ ಶೇ.೨ರಷ್ಟು ಮೀಸಲಾತಿ ಕಲ್ಪಿಸಲಾಗಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಸುಮಾರು ೭೪ ಸಾವಿರ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಕೈಗೊಂಡಿದ್ದು, ಕ್ರೀಡಾಪಟುಗಳಿಗೆ ಶೇ.೨ರಷ್ಟು ಮೀಸಲಾತಿ ನೀಡಿರುವುದರಿಂದ ಸುಮಾರು ೧,೪೨೦ ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗ ಪಡೆಯಲು ಅವಕಾಶ ದೊರೆಯಲಿದೆ. ಕ್ರೀಡಾ ಸಚಿವರು ಸ್ವತಃ ರಾಷ್ಟ್ರಮಟ್ಟದ ಕ್ರೀಡಾಪಟುವಾಗಿರುವುದರಿಂದ ಕ್ರೀಡೆಗೆ ಹೆಚ್ಚಿನ ಉತ್ತೇಜನ ನೀಡುತ್ತಿದ್ದಾರೆ. ವಿವಿಧ ಕ್ರೀಡೆಗಳಲ್ಲಿ ಸಾಧನೆ ಮಾಡಿರುವ ಕ್ರೀಡಾಪಟುಗಳನ್ನು ಗುರುತಿಸಿ ಸರ್ಕಾರಿ ಸೇವೆಗೆ ನೇಮಕ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಸುಮಾರು ೬೦ ಕ್ರೀಡಾಪಟುಗಳಿಗೆ ತಿಂಗಳಿಗೆ ರೂ.೮೦ ಸಾವಿರದಂತೆ ೨೦೨೮ ರವರೆಗೆ ಪ್ರೋತ್ಸಾಹಧನ ನೀಡುವ ವ್ಯವಸ್ಥೆ ಮಾಡಲಾಗಿದೆ. ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಕ್ರೀಡಾಪಟುಗಳಿಗೆ ಚಿನ್ನದ ಪದಕಕ್ಕೆ ರೂ.೬ ಕೋಟಿ, ಬೆಳ್ಳಿಗೆ ರೂ.೪ ಕೋಟಿ ಹಾಗೂ ಕಂಚಿನ ಪದಕಕ್ಕೆ ರೂ.೨ ಕೋಟಿ ಬಹುಮಾನ ನೀಡುವುದಾಗಿ ಸರ್ಕಾರ ಘೋಷಿಸಿದೆ ಎಂದರು.
ಕೊಡಗು ಜಿಲ್ಲೆಯಲ್ಲಿ ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿಗೆ ಕ್ರೀಡಾ ಇಲಾಖೆಯಿಂದ ಸುಮಾರು ರೂ.೩೪ ಕೋಟಿ ಅನುದಾನ ಮಂಜೂರಾಗಿದೆ. ಕರ್ನಾಟಕದಿಂದ ಏಷ್ಯನ್ ಗೇಮ್ಸ್‌ಗೆ ಆಯ್ಕೆಯಾಗಿರುವ ಆರು ಕ್ರೀಡಾಪಟುಗಳಲ್ಲಿ ನಾಲ್ವರು ಕೊಡಗಿನವರಾಗಿರುವುದು ಜಿಲ್ಲೆಯ ಕ್ರೀಡಾ ಪ್ರತಿಭೆಯ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಕೊಡಗಿಗೆ ಮತ್ತೊಂದು ವಿಶೇಷ ಕ್ರೀಡಾಶಾಲೆ ಮಂಜೂರಾಗಿದ್ದು, ಸೂಕ್ತ ಸ್ಥಳ ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ. ಸ್ಥಳ ಅಂತಿಮಗೊಂಡರೆ ಪ್ರಸಕ್ತ ವರ್ಷದಿಂದಲೇ ನೂತನ ಕ್ರೀಡಾಶಾಲೆ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ವಿಸ್ಮಯ ಚಕ್ರವರ್ತಿ, ಒಲಂಪಿಯನ್ ಬಾಳೆಯಡ ಸುಬ್ರಮಣಿ, ಮಾಜಿ ಜಿಲ್ಲಾಪಂಚಾಯತ್ ಸದಸ್ಯ ಮೂಕಳೇರ ಕುಶಾಲಪ್ಪ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಅಣ್ಣೀರ ಹರೀಶ್ ಒಲಂಪಿಯನ್ ಸಿ.ಎಸ್.ಪೂಣಚ್ಚ, ಚೆಪ್ಪುಡೀರ ಕಾರ್ಯಪ್ಪ, ಚೆಕ್ಕೇರ ವಾಸು, ಅಜ್ಜಿಕುಟ್ಟೀರ ಗಿರೀಶ್, ಕರ್ತಮಾಡ ರಶಿಕ, ಮೂಕಳೇರ ಸುಮಿತ್ರಾ, ಅಜ್ಜಿಕುಟ್ಟೀರ ಪೊನ್ನಪ್ಪ ಹಾಗೂ ಇತರರಿದ್ದರು.