ಮಾಲಂಬಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಹೊರನೋಟ
ಶನಿವಾರಸಂತೆ ಹೋಬಳಿಗೆ ಸೇರಿದ, ಆಲೂರು ಸಿದ್ದಾಪುರ ಗ್ರಾ.ಪಂ.ವ್ಯಾಪ್ತಿಯ
ಮಾಲಂಬಿ ಗ್ರಾಮವು ತನ್ನದೇ ಆದ ಇತಿಹಾಸ ಮತ್ತು ಪರಂಪರೆ ಹೊಂದಿರುವ ವಿಶಿಷ್ಟ ಗ್ರಾಮವಾಗಿದೆ. ಕೃಷಿ ಇಲ್ಲಿನ ಮೂಲ ಕಸುಬು. ರೈತರು ಹೆಚ್ಚಾಗಿ ಕಾಫಿ, ಭತ್ತ, ಶುಂಠಿ, ಸಿಹಿ ಗೆಣಸು, ಜೋಳ, ಅಡಿಕೆ ಇನ್ನಿತರ ಬೆಳೆಗಳನ್ನು ಬೆಳೆಯುತ್ತಾರೆ. ಎಲ್ಲರೂ ಶ್ರಮಜೀವಿಗಳಾಗಿದ್ದಾರೆ ಎಂಬುದು ವಿಶೇಷ. ಚೋಳರ ಅಧಿಪತ್ಯಕ್ಕೆ ಒಳಪಟ್ಟಿದ್ದ ಈ ಹಳ್ಳಿಯು ಕೆಲ ಕಾಲ ಪಟೇಲ ಆಳ್ವಿಕೆಗೂ ಸೇರಿದ್ದ ಗ್ರಾಮವಾಗಿ ಹೆಸರುವಾಸಿಯಾಗಿತ್ತು.
11ನೇ ಶತಮಾನದ ಮಧ್ಯಭಾಗದಲ್ಲಿ ಈಗಿನ ಅರಕಲಗೋಡು, ಕೊಡಗು ಜಿಲ್ಲೆಯ ಕೊಡ್ಲಿಪೇಟೆ, ನಿಡ್ತ ಹೋಬಳಿ ವ್ಯಾಪ್ತಿ ಪ್ರದೇಶವು ಚೋಳರ ರಾಜ್ಯಕ್ಕೆ ಸೇರಿತ್ತು. ಶ್ರವಣ ಬೆಳಗೊಳದಿಂದ ಮಾಳವಿ ಎಂಬ ನಾಯಕನನ್ನು ದಂಡು ಅಧಿಕಾರಿಯಾಗಿ ಈಗಿನ ಮಾಲಂಬಿ ಗ್ರಾಮಕ್ಕೆ ನೇಮಿಸಲಾಗಿತ್ತು. ಆತ ಈಗಿನ ನಿಡ್ತ, ಕಾರ್ಗೊಡು ಗ್ರಾಮಗಳನ್ನು ತನ್ನ ಹತೋಟಿಗೆ ತೆಗೆದುಕೊಂಡಿದ್ದ. ಈತ ಮಾಲಂಬಿ ಗ್ರಾಮದಲ್ಲೇ ವಾಸ ಮಾಡುತ್ತಿದ್ದ.
ಇದನ್ನು ಸಾಕ್ಷೀಕರಿಸಲು ಕೆಲವು ಶಾಸನಗಳು ದೊರಕಿರುವುದನ್ನು ಗಮನಿಸಿದರೆ, ಮಾಲಂಬಿ ಗ್ರಾಮದ ಚರಿತ್ರೆ ವೇದ್ಯವಾಗುತ್ತದೆ. ಇತಿಹಾಸ ಕಾರರೂ ಇದನ್ನೇ ಆಧಾರವಾಗಿರಿಸಿಕೊಂಡು ಗ್ರಾಮದ ಹೆಸರನ್ನು ದಾಖಲಿಸಿದ್ದಾರೆ.
ನಂತರದ ವರ್ಷಗಳಲ್ಲಿ ಈ ಗ್ರಾಮವನ್ನು ಪಾಳೆಗಾರರು ಆಳ್ವಿಕೆ ಮಾಡುತ್ತಿದ್ದರು. ಎಂಬುವುದಕ್ಕೆ ಈ ಗ್ರಾಮದಲ್ಲಿ ಅಲ್ಲಲ್ಲಿ ದೊರಕಿರುವ ವೀರಗಲ್ಲುಗಳು ಸಾಕ್ಷಿಯಾಗಿವೆ. ಆ ಕಾಲದ ಶಾಸನಗಳು, ಕೆಲವು ವಿಗ್ರಹಗಳು, ನಟರಾಜ ಶಿವನ ನೃತ್ಯಭಂಗಿಗಳು, ವೀರಭದ್ರನ ವಿಗ್ರಹಗಳು ಇತಿಹಾಸ ಸಾರುತ್ತವೆ.
ಮಾಲಂಬಿ ಮಳೆಮಲ್ಲೇಶ್ವರ ದೇವಾಲಯ ಮತ್ತು ಬಸವೇಶ್ವರ ದೇವಾಲಯಗಳ ಜೀರ್ಣೋದ್ಧಾರ ಕಾಮಗಾರಿ ಸಂದರ್ಭದಲ್ಲಿ ಈ ಶಾಸನಗಳು ದೊರಕಿವೆ. ಮಣ್ಣಿನೊಳಗೆ ಸುಮಾರು 5ಅಡಿ ಕೆಳಗೆ ಹೂತು ಹೋಗಿದ್ದ 12ನೇ ಶತಮಾನದ ಶಾಸನವೂ ದೊರಕಿದ್ದು, ಮಾಲಂಬಿ ಗ್ರಾಮಕ್ಕೆ ಸುಮಾರು 11ನೇ ಶತಮಾನದ ಹಿನ್ನೆಲೆ ಇದೆ ಎಂಬುದನ್ನು ತಿಳಿಸುತ್ತದೆ.
ಜೀರ್ಣೋದ್ಧಾರವಾಯಿತು ಚಿಕ್ಕ ಗುಡಿ
ಮಾಲಂಬಿ ಗ್ರಾಮದಲ್ಲಿ ಸುಮಾರು ಒಂದೂವರೆ ಶತಮಾನದ ಹಿಂದೆಯೇ ಶ್ರೀ ಕನ್ನಂಬಾಡಿ ಅಮ್ಮನ ದೇವಸ್ಥಾನವನ್ನು ಪ್ರತಿಷ್ಠಾಪನೆ ಮಾಡಲಾಯಿತು. ಆಗ ಚಿಕ್ಕ ಗುಡಿಯನ್ನು ಕಟ್ಟಿದ ಗ್ರಾಮಸ್ಥರು ದೇವರಿಗೆ ಪೂಜೆ ಸಲ್ಲಿಸುತ್ತಿದ್ದರು. ಸುಮಾರು 100ವರ್ಷಗಳ ಹಿಂದೆ ಶ್ರೀ ಬಸವೇಶ್ವರ ದೇವಾಲಯವನ್ನು ಹಂಚಿನ ಮಾಡಿನೊಂದಿಗೆ ನಿರ್ಮಿಸಲಾಯಿತು. ಅಂದಿನಿಂದ ಇಂದಿನವರೆಗೂ ಪ್ರತೀವರ್ಷ ಮಾಲಂಬಿ ಬಸವೇಶ್ವರ ಮತ್ತು ಕನ್ನಂಬಾಡಿ ಅಮ್ಮನವರ ವಿಶೇಷ ಉತ್ಸವ ಏಪ್ರಿಲ್, ಮೇ ತಿಂಗಳಲ್ಲಿ ನಡೆಸಿಕೊಂಡು ಬರಲಾಗುತ್ತಿದೆ.
ಬಸವೇಶ್ವರ ದೇವಾಲಯವನ್ನು ದಾನಿಗಳ ನೆರವಿನಿಂದ 2012ರಲ್ಲಿ ಜೀರ್ಣೋದ್ಧಾರ ಮಾಡಿ ಸೇವೆಗೆ ಸಮರ್ಪಣೆ ಮಾಡಲಾಯಿತು. 2024 ರಲ್ಲಿ ಕನ್ನಂಬಾಡಿ ಅಮ್ಮನವರ ದೇಗುಲವೂ 20 ಲಕ್ಷ ರೂ ವೆಚ್ಚದಲ್ಲಿ ಮರು ನಿರ್ಮಾಣಗೊಂಡಿತು. ಈ ಸೇವೆಗೆ ಸರ್ಕಾರದ ಮತ್ತು ಧರ್ಮಸ್ಥಳ ಕ್ಷೇತ್ರದ ಸಹಕಾರವು ದೊರಕಿತ್ತು. ಮಳೆ ಮಲ್ಲೇಶ್ವರ, ಗ್ರಾಮದೇವತೆ, ಶ್ರೀ ವೆಂಕಟ ರಮಣ ದೇವರ ಗುಡಿಗಳೂ ಗ್ರಾಮದಲ್ಲಿವೆ. ಬ್ರಹ್ಮ ಕಲ್ಲು, ಗುಡುಗಿನ ಗಾಳಿ ದೇವಾಲಯವೂ ಇದೆ.
ಉತ್ಸವ ನಡೆಸುತ್ತಿದ್ದ ಪಟೇಲರು
ಸುಮಾರು 150ರಿಂದ 200 ವರ್ಷಗಳ ಹಿಂದೆ ಮಾಲಂಬಿ ಗ್ರಾಮವನ್ನು ವೀರಶೈವ ಜನಾಂಗದ ಪಟೇಲ ವಂಶಸ್ಥರು ಆಳುತ್ತಿದ್ದರು. ಆಗಿನಿಂದಲೂ ಮಾಲಂಬಿ ಬಸವಣ್ಣ, ಕನ್ನಂಬಾಡಿ ಅಮ್ಮದೇವರ ಉತ್ಸವವನ್ನು ಪಟೇಲ ವಂಶಸ್ಥರು ಅದ್ದೂರಿಯಾಗಿ ನಡೆಸಿಕೊಂಡು ಬರುತ್ತಿದ್ದರು. ಉತ್ಸವ ನಡೆಸಲು ಬಸವೇಶ್ವರ ದೇವಾಲಯಕ್ಕೆ ಸೇರಿದ ಸುಮಾರು 2ಎಕರೆ ಗದ್ದೆಯನ್ನು ಮೀಸಲಿಟ್ಟಿದ್ದರು. ಗದ್ದೆಯಲ್ಲಿ ಬೆಳೆದ ಭತ್ತದ ಉತ್ಪತ್ತಿಯಿಂದ ದೇವರ ಉತ್ಸವವನ್ನು ಅದ್ದೂರಿಯಾಗಿ ನಡೆಸಿಕೊಂಡು ಬರುತ್ತಿದ್ದರು. ಕಾಲಕ್ರಮೇಣ ದೇವಾಲಯ ಸಮಿತಿಯಿಂದ ಉತ್ಸವವನ್ನು ನಡೆಸುವ ಪದ್ಧತಿ ರೂಢಿಯಾಯಿತು. ಪಟೇಲರ ಸಹಾಯಕನಾಗಿ ಗ್ರಾಮದ ಕುಲ್ವಾಡಿ ಎಂಬಾತನಿದ್ದ. ಆತ ವಿಶ್ರಮಿಸಲು ಗ್ರಾಮದ ಬೃಹತ್ ಬಂಡೆಕಲ್ಲಿನ ಕೆಳಭಾಗದಲ್ಲಿ ಆಶ್ರಯಿಸಿದ್ದ. ಈ ಬಂಡೆ ಇರುವ ತಾಣವೇ ಕುಲ್ವಾಡಿ ಬೆಟ್ಟ ಎಂದು ಖ್ಯಾತವಾಗಿದೆ.
ಮಾಲಂಬಿ ಗ್ರಾಮವು ವಿವಿಧ ಜಾತಿ, ಸಮುದಾಯದವರು ವಾಸಿಸುವ ಸ್ಥಳವಾಗಿದೆ. ನಾನಾ ರಾಜ್ಯಗಳಿಂದ ಬಂದು ಇಲ್ಲಿ ಕೃಷಿ, ಕೂಲಿ ಕೆಲಸಕ್ಕಾಗಿ ನೆಲೆ ನಿಂತವರು ಇದ್ದಾರೆ. ಅವರೆಲ್ಲರೂ ಸಹಬಾಳ್ವೆ ನಡೆಸಯತ್ತಿದ್ದಾರೆ. ದಶಕಗಳ ಹಿಂದೆ ಒಕ್ಕಲಿಗ ಸಮು ದಾಯದವರು ಸುಗ್ಗಿ ಉತ್ಸವವನ್ನು ನಡೆಸುತ್ತಿದ್ದರು. ಆದರೆ ಈಗ ಸುಗ್ಗಿ ಉತ್ಸವ ಸಂಪೂರ್ಣವಾಗಿ ನಿಂತೇ ಹೋಗಿದೆ. ಮಾಲಂಬಿ ಗ್ರಾಮದ ವ್ಯಾಪ್ತಿ ಪ್ರದೇಶದಲ್ಲಿ ಶೇ.60ರಷ್ಟು ಮೀಸಲು ಅರಣ್ಯ ಇದೆ. ಇಲ್ಲಿ ಮೂಲ ನಿವಾಸಿಗಳಾದ ಜೇನು ಕುರುಬರು ಈಗಲೂ ಇದ್ದಾರೆ ಎಂಬುದೇ ವಿಶೇಷ.
ಮಾಲಂಬಿ ಈ ಗ್ರಾಮವು ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆಗಳಿಗೆ ಖ್ಯಾತವಾಗಿದೆ. ಇಲ್ಲಿ ದೀಪಾವಳಿ, ಗೌರಿ, ಗಣೇಶ, ಯುಗಾದಿ, ಓಣಂ, ವಿಶು ಇನ್ನಿತರ ಹಬ್ಬಗಳನ್ನು ನಡೆಸಿಕೊಂಡು ಬರುವ ಸಮುದಾಯದವರು ಇದ್ದಾರೆ. ಪ್ರತಿ ಹಬ್ಬಕ್ಕೂ ಊರು ಸಂಭ್ರಮ ಪಡುತ್ತದೆ. ಈ ಗ್ರಾಮದಲ್ಲಿ ಕೃಷಿಕರು, ಕಾರ್ಮಿಕರು, ಸ್ವ ಉದ್ಯೋಗಿಗಳು, ಸರ್ಕಾರಿ ಉದ್ಯೋಗಿಗಳು, ಮಾಜಿ ಸೈನಿಕರು, ಆರೋಗ್ಯ ಇಲಾಖೆ, ಶಿಕ್ಷಣ, ಪಶು, ಅಂಚೆ ಇಲಾಖೆಯಲ್ಲಿ ಕೆಲಸ ನಿರ್ವಹಿಸುವವರು ವಾಸವಾಗಿದ್ದಾರೆ. ಎಲ್ಲರೂ ಸೌಹಾರ್ದವಾಗಿ ಇರುವುದು ಗ್ರಾಮದ ಕೀರ್ತಿ ಹೆಚ್ಚಿಸಿದೆ.
ಪ್ರಾಥಮಿಕ ಶಿಕ್ಷಣ ಕೇಂದ್ರಗಳಿವೆ
ಗ್ರಾಮದಲ್ಲಿ ಶಿಕ್ಷಣಕ್ಕೆ ಉತ್ತಮ ನೆಲೆಗಟ್ಟಿದೆ. ಪ್ರಾಥಮಿಕ ಶಿಕ್ಷಣಕ್ಕಾಗಿ ಮಾಲಂಬಿಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೆ. ವಾಲ್ಮೀಕಿ ಗಿರಿಜನ ಆಶ್ರಮ ಶಾಲೆ ಇದೆ. ಮಕ್ಕಳಿಗಾಗಿ ಅಂಗನವಾಡಿ ಕೇಂದ್ರವೂ ಸುಸಜ್ಜಿತವಾಗಿದೆ. ಹೆಚ್ಚಿನ ಶಿಕಣಕ್ಕಾಗಿ ಶನಿವಾರಸಂತೆ, ಆಲೂರು ಸಿದ್ದಾಪುರ, ಸೊಮವಾರಪೇಟೆ, ಕುಶಾಲನಗರ ಭಾಗಗಳಿಗೆ ತೆರಳಬೇಕಾಗಿದೆ.
ರಾಜಕೀಯವಾಗಿ ಗ್ರಾಮ ಹೆಚ್ಚಿನದಾಗಿ ಬೆಳೆದಿಲ್ಲ. ಜಿಪಂ ಉಪಾದ್ಯಕ್ಷರಾಗಿ ಒಬ್ಬರು ಆಯ್ಕೆಯಾಗಿದ್ದರು. ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿಗೆ ಸದಸ್ಯರಾಗಿ, ಅಧ್ಯಕ್ಷರಾಗಿ ಒಬ್ಬರು ಆಯ್ಕೆಯಾಗಿದ್ದರು. ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಒಬ್ಬರು ಅಧ್ಯಕ್ಷರಾಗಿದ್ದರು.
ಗ್ರಾಮದಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ಸಮುದಾಯ ಭವನ ಇಲ್ಲ. ಗ್ರಾಮಸ್ಥರ ಕ್ರೀಡಾ ಚಟುವಟಿಕೆಗಾಗಿ ಆಟದ ಮೈದಾನ ಅಭಿವೃದ್ಧಿ ಪಡಿಸಬೇಕು, ರಸ್ತೆ ಅಭಿವೃದ್ಧಿ ಪಡಿಸಬೇಕು, ಕಾಡು ಪ್ರಾಣಿ ಹಾವಳಿಗೆ ಶಾಶ್ವತ ಪರಿಹಾರ ಬೇಕಿದೆ.
ಗ್ರಾಮದ ಹಲವು ದೇಗುಲಗಳನ್ನು ಜೀರ್ಣೋದ್ಧಾರ ಮಾಡಲಾಗಿದೆ. ಸರ್ಕಾರ ಮತ್ತಷ್ಟು ಹಣವನ್ನು ಬಿಡುಗಡೆ ಮಾಡಿದರೆ ಉಳಿದ ಎಲ್ಲ ದೇವಾಲಯಗಳನ್ನೂ ಅಭಿವೃದ್ಧಿ ಪಡಿಸಬಹುದು.ಗ್ರಾಮದಲ್ಲಿ ಎಲ್ಲರೂ ಒಗ್ಗೂಡಿ ಗ್ರಾಮದ ಪ್ರಗತಿ ಪರ ಕೆಲಸವನ್ನು ಮಾಡುತ್ತಿದ್ದಾರೆ. ಒಟ್ಟಾರೆ ಗ್ರಾಮವು ಶಾಂತಿಯ ನೆಲೆಯಾಗಿದೆ ಎಂಬುದೇ ಹೆಮ್ಮೆ.
ಮಾಲಂಬಿ ಗ್ರಾಮಸಮಿತಿ ಕಾರ್ಯದರ್ಶಿ
ಈ ಗ್ರಾಮದಲ್ಲಿ ಎಲ್ಲಾ ಜಾತಿ, ಜನಾಂಗದವರೂ ವಾಸ ಮಾಡುತ್ತಿದ್ದಾರೆ. ಎಲ್ಲರ ನಡುವೆ ಉತ್ತಮ ಬಾಂಧವ್ಯ ಇದೆ. ನಾನು ಜಿಲ್ಲಾ ಪಂಚಾಯಿತಿ ಸದಸ್ಯೆ, ಉಪಾಧ್ಯಕ್ಷೆ ಆಗಿದ್ದ ಸಂದರ್ಭ ಎಲ್ಲರೂ ಸಹಕಾರ ನೀಡಿದ್ದರು. ಆಗ ಸರ್ಕಾರದ ವಿಶೇಷ ಅನುದಾನ ತಂದು ಕೆಲವು ಅಭಿವೃದ್ಧಿ ಕಾರ್ಯ ಮಾಡಲಾಗಿತ್ತು.
ಮಾಲಂಬಿಯು ಇತಿಹಾಸ ಪ್ರಸಿದ್ಧ ಸ್ಥಳವಾಗಿದೆ. ಈ ಗ್ರಾಮದಲ್ಲಿ ಇನ್ನಷ್ಟು ಸಂಶೋಧನೆಗಳು ನಡೆಯಬೇಕಿದೆ. ಇಲ್ಲಿ ದೊರಕಿರುವ ಕುರುಹುಗಳನ್ನು ಪತ್ತೆ ಹಚ್ಚಿ, ಹೊಸ ಹೊಸ ವಿಷಯಗಳ ಮೇಲೆ ಬೆಳಕು ಚಲ್ಲಬೇಕಿದೆ. ಸಂಬಂಧ ಪಟ್ಟ ಇತಿಹಾಸ ವಿದ್ಯಾರ್ಥಿಗಳು, ಉಪನ್ಯಾಸಕರು
ಇತ್ತ ಆಸಕ್ತಿ ತೋರಬೇಕಿದೆ. ಗ್ರಾಮಕ್ಕೆ ಒಂದು ಸಮುದಾಯ ಭವನ ಅಗತ್ಯವಿದೆ.
ಈ ಗ್ರಾಮದಲ್ಲಿ ಇರುವ ಕೆರೆಗಳನ್ನು ಅಭಿವೃದ್ಧಿ ಪಡಿಸಬೇಕಿದೆ. ಕೃಷಿಯನ್ನೇ ಹೆಚ್ಚಿನ
ಜನ ನಂಬಿಕೊಂಡು ಬದುಕುತ್ತಿದ್ದಾರೆ. ಅವರು ನೀರಿಗಾಗಿ ಕೆರೆಯನ್ನು
ಆಶ್ರಯಿಸಿದ್ದಾರೆ. ಇದರಿಂದಲೇ ಬೆಳೆಗಳನ್ನು ಬೆಳೆಯುತಿದ್ದಾರೆ. ಇದರೊಂದಿಗೆ ಗ್ರಾಮದ ರಸ್ತೆಗಳನ್ನು ಇನ್ನಷ್ಟು ಅಭಿವೃದ್ಧಿ ಪಡಿಸಬೇಕಿದೆ.
ಆಲೂರು ಸಿದ್ದಾಪುರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ