ದುಂಡಳ್ಳಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗ್ರಾಮಸಭೆಯಲ್ಲಿ ನೋಡಲ್ ಅಧಿಕಾರಿ ಮಿಲನಾ ಭರತ್ ಮಾತನಾಡಿದರು. ಅಧ್ಯಕ್ಷೆ ಭವಾನಿ ಗುರುಪ್ರಸನ್ನ, ಪಿಡಿಒ ಆಯಿಷಾ, ಉಪಾಧ್ಯಕ್ಷೆ ಗೋಪಿಕಾ ಇತರರು ಹಾಜರಿದ್ದರು.
ಶನಿವಾರಸಂತೆ: ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಲಿರುವ ಸ್ಥಳೀಯ ಆಡಳಿತ ವ್ಯವಸ್ಥೆ, ಇದಕ್ಕಾಗಿ ಗ್ರಾಮಸ್ಥರ ಪರ ಮತ್ತು ವಿರೋಧ ಚರ್ಚೆ, ಅರಣ್ಯ ಇಲಾಖೆಯಿಂದ ಜಾತಿ ಮರ, ಸಾಮಾನ್ಯ ಮರಗಳ ಬಗ್ಗೆ ಮಾಹಿತಿ ಕೊರತೆ, ಪಶು ವೈದ್ಯರ ಸಮಸ್ಯೆ ಮುಂತಾದ ವಿಷಯಗಳ ಕುರಿತು ಬುಧವಾರ ದುಂಡಳ್ಳಿ ಗ್ರಾಪಂ ಸಭಾಂಗಣದಲ್ಲಿ ಕೊನೆಯ ಗ್ರಾಮ ಸಭೆಯಲ್ಲಿ ಬಿರುಸಿನ ಚರ್ಚೆ ನಡೆಯಿತು.
ದುಂಡಳ್ಳಿ ಗ್ರಾಪಂ ಸಂಜೀವಿನಿ ಸಭಾಂಗಣದಲ್ಲಿ ಬುಧವಾರ ಪಂಚಾಯಿತಿ ಅಧ್ಯಕ್ಷೆ ಭವಾನಿ ಗುರುಪ್ರಸನ್ನ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೊಡಗಿನಲ್ಲಿ ನೆಲೆಸಿರುವ ಹೊರ ರಾಜ್ಯದ ಕೆಲವು ಕಾರ್ಮಿಕರು ಆಧಾರ್ ಕಾರ್ಡ್ ಮಾಡಿಸಿಕೊಳ್ಳುತ್ತಿರುವ ಬಗ್ಗೆ ಗ್ರಾಮಸ್ಥರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ದುಂಡಳ್ಳಿ ಗ್ರಾಮ ಪಂಚಾಯಿತಿಯನ್ನು ಶನಿವಾರಸಂತೆ ಪಪಂಗೆ ಸೇರಿಸಿದರೆ ಕೃಷಿ ಭೂಮಿಯನ್ನು ಹೊಂದಿರುವವರಿಗೆ ಯಾವುದೇ ಪ್ರಯೋಜನವಾಗದು ಎಂದು ರೈತರು ವಿರೋಧ ವ್ಯಕ್ತಪಡಿಸಿರು.
ಮತ್ತೆ ಕೆಲವು ಗ್ರಾಮಸ್ಥರು ನಾವು ವ್ಯವಹಾರಿಕವಾಗಿ ಶನಿವಾರಸಂತೆಯನ್ನು ಅವಲಂಬಿಸಿ ದ್ದೇವೆ. ಶನಿವಾರಸಂತೆಗೆ ಗ್ರಾಪಂ ಸೇರಿಸಿಕೊಂಡರೆ ಸಾಕಷ್ಟು ಉಪಯೋಗವಾಗುತ್ತದೆ ಎಂದು ಕೆಲವರು ಸಹಮತ ವ್ಯಕ್ತಪಡಿಸಿ ಚರ್ಚಿಸಿದರು. ಈ ಬಗ್ಗೆ ಸಾಕಷ್ಟು ಸಮಯ ಪರ ಮತ್ತು ವಿರೋಧ ಚರ್ಚೆ ನಡೆದವು.
ಪ್ರಸ್ತಾವನೆಗೆ ಬೆಂಬಲ : ದುಂಡಳ್ಳಿಯನ್ನು ಯಥಾ ಪ್ರಕಾರ ಗ್ರಾಪಂ ಆಗಿಯೇ ಅಸ್ತಿತ್ವ ಉಳಿಸಿಕೊಳ್ಳಬೇಕು. ಗ್ರಾಪಂ ಜನಸಂಖ್ಯೆಯನ್ನು ಮಾತ್ರ ಪಟ್ಟಣ ಪಂಚಾಯಿತಿಯ ಪರಿಗಣನೆಗೆ ತೆಗೆದುಕೊಳ್ಳುವ ಮೂಲಕ ಶನಿವಾರಸಂತೆಯನ್ನು ಪಟ್ಟಣ ಪಂಚಾಯಿತಿ ಆಗಿ ಮೇಲ್ದರ್ಜೆ ಗೇರಿಸಲಿರುವ ಪ್ರಸ್ತಾವನೆಗೆ ಬೆಂಬಲ ನೀಡುವುದಾಗಿ ಸಭೆಯಲ್ಲಿ ನಿರ್ಣಯಿಸಲಾಯಿತು. ಗ್ರಾಮಸ್ಥರಾದ ಪ್ರಸಾದ್, ಪ್ರಕಾಶ್, ಗ್ರಾಪಂ ಸದಸ್ಯರಾದ ಗಿರೀಶ್, ಬೋಜಪ್ಪ, ದೇವರಾಜ್ ಮತ್ತಿತರರು ಚರ್ಚೆಯಲ್ಲಿ ತಮ್ಮ ಅಭಿಮತ ವ್ಯಕ್ತಪಡಿಸಿದರು.
ಅರಣ್ಯ ಇಲಾಖೆ ಅಧಿಕಾರಿ ವಿಕ್ರಂ ಅವರು ಮರಗಳ ಬಗ್ಗೆ ನೀಡಿದ ಮಾಹಿತಿಗೆ ಸಂಬಂಧ ಪಟ್ಟಂತೆ ಗ್ರಾಮಸ್ಥ ಪ್ರಕಾಶ್ ವಿರೋಧ ವ್ಯಕ್ತಪಡಿಸಿದರು. ನಾವು ರೈತರು. ನಮ್ಮ ತೋಟ, ಜಮೀನಿನಲ್ಲಿರುವ ಕೆಲವೊಂದು ಉಪಯೋಗಕ್ಕೆ ಬಾರದ ಮರವನ್ನು ಸೌದೆಗಾಗಿ ಕಡಿಯುತ್ತೇವೆ ಇಂಥಹ ಸಂದರ್ಭದಲ್ಲಿ ಮಾಹಿತಿ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಜಾತಿ ಮರವನ್ನು ಕಡಿದಿರುವುದಾಗಿ ಹೇಳಿ ರೈತರನ್ನು ಬಂಧಿಸುತ್ತಾರೆ. ಆದರೆ ನಮಗೆ ಜಾತಿ ಮರಗಳು ಯಾವುದು, ಸಾಮಾನ್ಯ ಮರಗಳು ಯಾವುದು ಎಂಬ ಮಾಹಿತಿಯನ್ನು ಸೂಕ್ತವಾಗಿ ನೀಡಬೇಕು ಎಂದು ಒತ್ತಾಯಿಸಿದರು.
ವಲಸೆ ಕಾರ್ಮಿಕರಿಗೆ ಆಧಾರ್ : ಅಸ್ಸಾಂ ಮುಂತಾದ ಹೊರ ರಾಜ್ಯದಿಂದ ಜಿಲ್ಲೆಯ ತೋಟಗಳಲ್ಲಿ ಕೆಲಸ ಮಾಡಲು ವಲಸೆ ಬಂದಿರುವ ಕಾರ್ಮಿಕರಿಗೆ ಇಲ್ಲಿ ಆಧಾರ್ ಕಾರ್ಡ್ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮ ಆಡಳಿತಾಧಿಕಾರಿ ಚೈತ್ರಾ, ಇದು ತಪ್ಪು ಮಾಹಿತಿ ಎಂದರು. ಆಧಾರ್ ಕಾರ್ಡ್ ಹಕ್ಕು ಇಡೀ ಭಾರತಕ್ಕೆ ಅನ್ವಯವಾಗುತ್ತದೆ. ಒಮ್ಮೆ ಆಧಾರ್ ಕಾರ್ಡ್ ಮಾಡಿಸಿಕೊಂಡರೆ ಮತ್ತೊಮ್ಮೆ ಆಧಾರ್ ಮಾಡಿಸಲಾಗದು ಎಂದು ಸ್ಪಷ್ಟಪಡಿಸಿದರು.
ಪಟ್ಟಣದಲ್ಲಿ ಕೆಲವು ಪುಂಡರು ಶಾಲಾ ಕಾಲೇಜು ಬಿಡುವ ಸಂದರ್ಭದಲ್ಲಿ ಬೈಕ್ ಶಬ್ದ ಹೆಚ್ಚಿಸಿ ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಾರೆ. ಈ ಬಗ್ಗೆ ಗ್ರಾಪಂ ಮೂಲಕ ಪೊಲೀಸರಿಗೆ ದೂರು ನೀಡಬೇಕು. ವಿದ್ಯಾರ್ಥಿನಿಯರಿಗೆ ರಕ್ಷಣೆ ನೀಡಬೇಕು ಎಂದು ಶಿಕ್ಷಕ ಕೆ.ಪಿ.ಜಯಕುಮಾರ್ ಮನವಿ ಮಾಡಿದರು. ನೋಡಲ್ ಅಧಿಕಾರಿ ಮಿಲನಾ ಭರತ್, ಗ್ರಾಪಂ ಅಧ್ಯಕ್ಷೆ ಭವಾನಿ ಗುರುಪ್ರಸನ್ನ, ಪಿಡಿಒ ಆಯಿಷಾ, ಉಪಾಧ್ಯಕ್ಷೆ ಗೋಪಿಕಾ ಸೇರಿದಂತೆ ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.