ವಿಭಾಗೀಯ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್ ಕಾರ್ಯನಿರ್ವವಹಣೆ ಬಗ್ಗೆ ತರಬೇತಿ ಪಡೆದುಕೊಂಡ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ 
ಕೊಡಗು

ತಂತ್ರಜ್ಞಾನ ಮೊರೆ ಹೋದ ಸರ್ಕಾರ

ಪ್ರಮುಖ ಮುಖ್ಯಾಂಶಗಳು

  • ಮಾನವ-ಪಾಣಿ ಸಂಘರ್ಷಕ್ಕೆ ಕಡಿವಾಣ
  • ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್ ಆರಂಭ
  • ಎಐ ಕ್ಯಾಮರಾ, ಥರ್ಮಲ್ ಡ್ರೋನ್ ಕ್ಯಾಮರಾ ಬಳಕೆ
ಮಡಿಕೇರಿ:
ಕೊಡಗು ಸೇರಿದಂತೆ ಪಶ್ಚಿಮಘಟ್ಟ ಮತ್ತು ಮಲೆನಾಡಿನ ಜಿಲ್ಲೆಗಳಲ್ಲಿ ಹೆಚ್ಚಾಗಿರುವ ಮಾನವ-ಪಾಣಿ ಸಂಘರ್ಷಕ್ಕೆ ಕಡಿವಾಣ ಹಾಕಲು ಸರ್ಕಾರ ತಂತ್ರಜ್ಞಾನದ ಮೊರೆ ಹೋಗಿದೆ. ಆಧುನಿಕ ದಿನಮಾನದ ತಾಂತ್ರಿಕ ಸೌಲಭ್ಯಗಳನ್ನೇ ಬಳಸಿಕೊಂಡು ಹಾನಿ ಪ್ರಮಾಣ ಕಡಿಮೆ ಮಾಡಲು ಬೇಕಾದ ವ್ಯವಸ್ಥೆಗಳನ್ನು ಮಾಡಿಕೊಂಡಿದೆ. ಈ ನಿಟ್ಟಿನಲ್ಲಿ ಆರಂಭಿಸಲಾಗಿರುವ ವಿಭಾಗೀಯ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್ ಮಡಿಕೇರಿಯಲ್ಲೂ ತನ್ನ ಚಟುವಟಿಕೆ ಶುರು ಮಾಡಿದೆ.
ಪಶ್ಚಿಮ ಘಟ್ಟದ ಸೆರಗಿನಲ್ಲಿ ಇರುವ ಮಲೆನಾಡು ಜಿಲ್ಲೆ ಕೊಡಗಿನಲ್ಲಿ ಮಾನವ-ವನ್ಯಜೀವಿ ಸಂಘರ್ಷ ಹೊಸದಲ್ಲ. ಇತ್ತೀಚಿನ ವರ್ಷಗಳಲ್ಲಂತೂ ಜನವಸತಿ ಪ್ರದೇಶಗಳಿಗೆ ಕಾಡುಪ್ರಾಣಿಗಳು ದಾಳಿ ಇಡುವ ಪ್ರಕರಣಗಳು ಹೆಚ್ಚಾಗಿ ವರದಿ ಆಗುತ್ತಿದೆ. ರಾಜ್ಯದಲ್ಲಿ 2023-24ನೇ ಸಾಲಿನಲ್ಲಿ ವನ್ಯಜೀವಿಗಳಿಂದ ದಾಳಿಗೆ ಒಳಗಾಗಿ ಒಟ್ಟು 65 ಜನರು ಮೃತಪಟ್ಟಿದ್ದಾರೆ. ಈ ಪೈಕಿ ಕೊಡಗಿನಲ್ಲಿ 10 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ವರ್ಷ ಇಲ್ಲಿಯತ ತನಕ 13 ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಮಾನವ-ವನ್ಯಜೀವಿ ಸಂಘರ್ಷಕ್ಕೆ ಕಡಿವಾಣ ಹಾಕಲು ಸರ್ಕಾರ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದೆ. ಮಾನವ ಪ್ರಾಣ ಹಾನಿ, ಬೆಳೆ ನಷ್ಟಕ್ಕೆ ಪರಿಹಾರವನ್ನು ಕೂಡ ಕೊಡುತ್ತಾ ಬಂದಿದೆ. ಇಷ್ಟಾದರೂ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದಿರುವ ಬಗ್ಗೆ ಚರ್ಚೆಗಳು ನಡೆದಿವೆ. ವನ್ಯಜೀವಿಗಳು ಜನ ವಸತಿ ಪ್ರದೇಶದ ಕಡೆಗೆ ಬಾರದಂತೆ ಭೌತಿಕ ಅಡೆತಡೆಗಳ ನಿರ್ಮಾಣ, ಆನೆ ಕಾರ್ಯಪಡೆಗಳ ಸ್ಥಾಪನೆ, ಚಿರತೆ ಕಾರ್ಯಪಡೆಗಳ ಸ್ಥಾಪನೆ, ಜಲಸಂಪನ್ಮೂಲ ಅಭಿವೃದ್ಧಿ, ಆವಾಸ ಸ್ಥಾನಗಳ ಅಭಿವೃದ್ಧಿ, ತ್ವರಿತ ಕಾರ್ಯಾಚರಣೆ, ಅರಿವು ಕಾರ್ಯಕ್ರಮ, ರೈತರಿಗೆ ಸಹಾಯಧನ ಮತ್ತಿತರ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತಂದಿದ್ದರೂ ಸಮಸ್ಯೆ ಮಾತ್ರ ಏರುಗತಿಯಲ್ಲೇ ಇದೆ.
ಇದೀಗ ಸರ್ಕಾರ ಮಾನವ-ವನ್ಯಜೀವಿ ಸಂಘರ್ಷಕ್ಕೆ ಕಡಿವಾಣ ಹಾಕಲು ತಜ್ಞರ ಸಲಹೆ ಪಡೆದು ಅತ್ಯಾಧುನಿಕ ತಂತ್ರಜ್ಞಾನಗಳ ಬಳಕೆ ಆರಂಭಿಸಿದೆ. ಈ ಮೂಲಕ ಇತ್ತೀಚಿನ ವರ್ಷಗಳಲ್ಲಿ ಕಾಡಂಚಿನ ನಿವಾಸಿಗಳ ಪಾಲಿಗೆ ಅತೀ ದೊಡ್ಡ ಸಮಸ್ಯೆಯೊಂದಕ್ಕೆ ಪರಿಹಾರ ಕಂಡುಕೊಳ್ಳಲು ಮುಂದಾಗಿದೆ. ವನ್ಯಜೀವಿಗಳ ಚಲನವಲನಕ್ಕೆ ಸಂಬAಧಿಸಿದAತೆ ವಿವಿಧ ಮೂಲಗಳಿಂದ ಲಭ್ಯವಾಗುವ ವಿಭಾಗವಾರು ಮಾಹಿತಿಗಳನ್ನು ರಿಯಲ್-ಟೈಮ್‌ನಲ್ಲಿ ಸಂಗ್ರಹಿಸಿ, ವಿಶ್ಲೇಷಿಸಿ, ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲು ಮತ್ತು ಕ್ಷೇತ್ರ ಮಟ್ಟದ ಚಟುವಟಿಕೆಗಳನ್ನು ಸಮನ್ವಯಗೊಳಿಸಿ, ತುರ್ತು ಘಟನೆಗಳಿಗೆ ತಕ್ಷಣ ಪ್ರತಿಕ್ರಿಯಿಸಲು ಕೇಂದ್ರಸ್ಥಾನದಲ್ಲಿ ಸಂಯೋಜಿತ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್ ಮತ್ತು 11 ವಿಭಾಗಗಳಲ್ಲಿ ವಿಭಾಗೀಯ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್ ಸ್ಥಾಪಿಸಲಾಗಿದ್ದು ಮಡಿಕೇರಿ ಅರಣ್ಯ ವಿಭಾಗದಲ್ಲಿ ಮಡಿಕೇರಿಯ ಅರಣ್ಯ ಭವನದಲ್ಲಿ ಈ ಕೇಂದ್ರ ಕಾರ್ಯಾರಂಭ ಮಾಡಿದೆ.
ಕೊಡಗು ಜಿಲ್ಲೆಯ ಅರಣ್ಯದೊಳಗೆ ಗಸ್ತು ಹೆಚ್ಚಿಸುವ ಮೂಲಕ ಅರಣ್ಯದಂಚಿನಲ್ಲಿ ವಾಸವಿರುವ ಜನರಿಗೆ ಮಾನವ-ಪ್ರಾಣಿ ಸಹಬಾಳ್ವೆಯ ಅರಿವು ಮೂಡಿಸಲು, ಜೀವ ಹಾನಿ ತಪ್ಪಿಸಲು ಮಡಿಕೇರಿ ಅರಣ್ಯಭವನದಲ್ಲಿ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ಆರಂಭಿಸಲಾಗಿದ್ದು, ಇಲ್ಲಿ ಕೃತಕ ಬುದ್ದಿಮತ್ತೆ ಕ್ಯಾಮರಾ, ಥರ್ಮಲ್ ಡ್ರೋನ್ ಕ್ಯಾಮರಾ ಸೇರಿದಂತೆ ಆಧುನಿಕ ತಂತ್ರಜ್ಣಾನ ಆಧಾರಿತ ಉಪಕರಣಗಳನ್ನು ಬಳಸಿಕೊಂಡು ವನ್ಯಜೀವಿಗಳ ಚಲನವಲನದ ಬಗ್ಗೆ ನಿಗಾ ಇರಿಸಲಾಗುವುದು.
ಮಡಿಕೇರಿ ಅರಣ್ಯ ಭವನದಲ್ಲಿ ಕಾರ್ಯಾಚರಣೆ ಆರಂಭಿಸಿರುವ ವಿಭಾಗೀಯ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್ ಜಿಲ್ಲೆಯ ಜ್ವಲಂತ ಸಮಸ್ಯೆಗಳಲ್ಲಿ ಒಂದಾಗಿರುವ ಮಾನವ-ವನ್ಯಜೀವಿ ಸಂಘರ್ಷಕ್ಕೆ ಕಡಿವಾಣ ಹಾಕುವಲ್ಲಿ ಸಕರಾತ್ಮಕ ಪರಿಣಾಮ ಬೀರುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಜಿಲ್ಲೆಯ 13 ಕಡೆಗಳಲ್ಲಿ ಇರುವ ಆನೆ ಕಾರ್ಯಾಚರಣೆ ಪಡೆ ಜತೆ ಈ ಕೇಂದ್ರ ನಿಕಟ ಸಂಪರ್ಕ ಇಟ್ಟಿಕೊಂಡಿದೆ. ಕಾಡುಪ್ರಾಣಿಗಳ ಚಲನವಲನಕ್ಕೆ ಸಂಬAಧಿಸಿದ ಎಲ್ಲಾ ಮಾಹಿತಿಗಳನ್ನು ಈ ಕೇಂದ್ರದ ಮೂಲಕ ಏಕಕಾಲದಲ್ಲಿ ಸಂವಹನಗೊಳಿಸಲು ಸಾಧ್ಯವಾಗಿದೆ. ಇದೇ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಇರುವ ಸಂಯೋಜಿತ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್‌ಗೂ ಮಾಹಿತಿ ಹೋಗುತ್ತದೆ. ಇದು ತುರ್ತು ಸಂದರ್ಭದಲ್ಲಿ ಚುರುಕಿನ ಕಾರ್ಯಾಚರಣೆಗೆ ಅನುಕೂಲ ಮಾಡಿಕೊಡಲಿದೆ.
ಅರಣ್ಯದೊಳಗೆ ಅಲ್ಲಲ್ಲಿ ಅಳವಡಿಸಲಾಗಿರುವ ಕೃತಕ ಬುದ್ಧಿಮತ್ತೆ ಕ್ಯಾಮೆರಾಗಳನ್ನೂ ಈ ಕೇಂದ್ರದ ಜತೆ ಸಂಪರ್ಕಿಸಲಾಗಿದೆ. ಆನೆ ಅಥವಾ ಇತರ ಪ್ರಾಣಿಗಳು ಈ ಕ್ಯಾಮೆರಾ ಕಣ್ಗಾವಲಿನ ಮೂಲಕ ಸಾಗಿ ಹೋದರೆ ಕೂಡಲೇ ಮಡಿಕೇರಿಯ ವಿಭಾಗೀಯ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್‌ಗೆ ಸಂದೇಶ ಬರುತ್ತದೆ. ಇದರಿಂದಾಗಿ ತತ್‌ಕ್ಷಣದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಎಚ್ಚೆತ್ತುಕೊಳ್ಳಬಹುದಾಗಿದ್ದು, ಸಂಬAಧಿಸಿದ ಜನವಸತಿ ಪ್ರದೇಶಗಳಿಗೆ ಸಂದೇಶ ರವಾನಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಸಾಧ್ಯವಾಗುತ್ತದೆ.
ರೇಡಿಯೋ ಕಾಲರ್ ಅಳವಡಿಸಿರುವ ಆನೆ, ಹುಲಿಗಳ ಸಂಚಾರವೂ ಮಡಿಕೇರಿಯ ವಿಭಾಗೀಯ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್‌ನಲ್ಲಿ ದಾಖಲಾಗುತ್ತದೆ. ಈ ಪ್ರಾಣಿಗಳು ಅವುಗಳ ಸಹಜ ವಾಸಸ್ಥಾನ ಬಿಟ್ಟು ಕಾಡಂಚಿನ ಜನವಸತಿ ಪ್ರದೇಶ ಅಥವಾ ಗ್ರಾಮಗಳಿಗೆ ಬಂದರೆ ನಿಯಂತ್ರಣ ಕೇಂದ್ರದ ಸಿಬ್ಬಂದಿ ಕೂಡಲೇ ಸಂಬAಧಿಸಿದವರಿಗೆ ಸಂದೇಶ ರವಾನಿಸುತ್ತಾರೆ. ಆನೆ ಕಾರ್ಯಾಚರಣೆ ಪಡೆ ಸೇರಿದಂತೆ ಸಿಬ್ಬಂದಿಗೂ ಎಚ್ಚರಿಕೆಯ ಸಂದೇಶ ಹೋಗುತ್ತದೆ. ಜನವಸತಿ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವವರಿಗೂ ಸಂದೇಶ ರವಾನಿಸಲಾಗುತ್ತದೆ. ಇದರಿಂದಾಗಿ ಸೂಕ್ತ ಸಮಯದಲ್ಲಿ ಎಚ್ಚೆತ್ತುಕೊಂಡು ಮುಂದಾಗಬಹುದಾದ ಅನಾಹುತಗಳನ್ನು ತಪ್ಪಿಸಬಹುದಾಗಿದೆ.
ಜಿಲ್ಲೆಯಾದ್ಯಂತ ಅರಣ್ಯದಂಚಿನ ಪ್ರದೇಶಗಳಲ್ಲಿ ಅಲ್ಲಲ್ಲಿ ಡಿಜಿಟಲ್ ಸೈನ್ ಬೊರ್ಡ್ಗಳನ್ನು ಈಗಾಗಲೇ ಅಳವಡಿಸಲಾಗಿದೆ. ಈ ಡಿಜಿಟಲ್ ಸೈನ್ ಬೋರ್ಡ್ಗಳಲ್ಲಿ ಯಾವ ಸಂದೇಶ ಭಿತ್ತರ ಆಗಬೇಕು ಎನ್ನುವುದನ್ನು ವಿಭಾಗೀಯ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್‌ನಲ್ಲಿ ನಿರ್ಧರಿಸಬಹುದು. ಹಾಗಾಗಿ ಈ ಬೋರ್ಡ್ಗಳು ಇರುವ ಪ್ರದೇಶದಲ್ಲಿ ಆನೆ ಅಥವಾ ಹುಲಿ ಸಂಚಾರದ ಸಾಧ್ಯತೆ ಕಂಡುಬAದರೆ ಕೂಡಲೇ ಈ ಬೋರ್ಡ್ ಮೂಲಕ ಸಂದೇಶ ಭಿತ್ತರಿಸಿ ಆ ವ್ಯಾಪ್ತಿಯ ನಿವಾಸಿಗಳು ಮುನ್ನೆಚ್ಚರಿಕೆ ವಹಿಸುವಂತೆ ಮಾಡಲು ಸಾಧ್ಯವಿದೆ.
ಮಾನವ-ಪಾಣಿ ಸಂಘರ್ಷಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ವಿಭಾಗೀಯ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್ ಅತ್ಯಂತ ಮಹತ್ವದ ಪಾತ್ರ ವಹಿಸಲಿದ್ದು, ಬೇರೆ ಕಡೆಯಿಂದ ಬರುವ ಸಂದೇಶವನ್ನು ಸ್ವೀಕರಿಸುವ ಮತ್ತು ಅಗತ್ಯ ಇರುವ ಕಡೆಗೆ ಅದನ್ನು ರವಾನಿಸುವ ಕೆಲಸ ಮಾಡುತ್ತದೆ. ಈ ಕೇಂದ್ರದಲ್ಲಿ ಆಧುನಿಕ ತಂತ್ರಜ್ಞಾನವನ್ನು ಗರಿಷ್ಠ ಮಟ್ಟದಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕೃತಕ ಬುದ್ದಿಮತ್ತೆ ಕ್ಯಾಮರಾ, ಥರ್ಮಲ್ ಡ್ರೋನ್ ಕ್ಯಾಮರಾಗಳು ದಿನದ 24 ಗಂಟೆಯೂ ಈ ಕೇಂದ್ರದ ಕಣ್ಣುಗಳಂತೆ ಕಾರ್ಯನಿರ್ವಹಿಸಲಿದ್ದು, ತರಬೇತಿ ಹೊಂದಿದ ಸಿಬ್ಬಂದಿ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.
"

ರಾಜ್ಯದ 11 ಅರಣ್ಯ ವಿಭಾಗಗಳಲ್ಲಿ ಆರಂಭವಾಗಿರುವ ವಿಭಾಗೀಯ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್ ಮಡಿಕೇರಿ ವಿಭಾಗದಲ್ಲೂ ಕಾಯಾಚರಣೆ ಶುರು ಮಾಡಿದೆ. ಮಡಿಕೇರಿಯ ಅರಣ್ಯ ಭವನದಲ್ಲಿ ಈ ಕೇಂದ್ರವನ್ನು ತೆರೆಯಲಾಗಿದೆ. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಈ ಕೇಂದ್ರ ಕೆಲಸ ಮಾಡುತ್ತದೆ. ವನ್ಯಜೀವಿ-ಮಾನವ ಸಂಘರ್ಷಕ್ಕೆ ಕಡಿವಾಣ ಹಾಕುವುದರ ಜತೆಗೆ ವನ್ಯಜೀವಿ-ಮಾನವ ಸಹಬಾಳ್ವೆಯ ಜಾಗೃತಿ ಮೂಡಿಸುವ ನಿಟ್ಟಿನಲ್ಲೂ ಈ ಕೇಂದ್ರ ಕಾರ್ಯನಿರ್ವಹಿಸಲಿದೆ. ಇಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ಅಗತ್ಯ ತರಬೇತಿಯನ್ನೂ ನೀಡಲಾಗಿದೆ.