ಯಾವ-ಯಾವ ಶಾಲೆಗಳನ್ನು ವಿಲೀನಗೊಳಿಸಬೇಕೆಂದು ಸರ್ಕಾರ ಈಗಾಗಲೇ ಮ್ಯಾಪಿಂಗ್ ನಡೆಸಿದೆ. ಅಧಿಕಾರಿಗಳಿಂದ ಮ್ಯಾಗ್ನೆಟ್ ಶಾಲೆಯ ಸಮೀಕ್ಷೆ ಮಾಡಿಸಲಾಗುತ್ತಿದೆ. ವಿಲೀನಗೊಳ್ಳುವ ಶಾಲೆಗಳ ಮುಖ್ಯಶಿಕ್ಷಕರಿಗೆ ಮೌಖಿಕವಾಗಿ ಆದೇಶ ನೀಡಲಾಗಿದೆ. ಏ. 9 ಮತ್ತು 10 ರಂದು ನಡೆಯಲಿರುವ ಪೋಷಕರ ಸಭೆಗಳಲ್ಲಿ , ಮುಂದಿನ ಶೈಕ್ಷಣಿಕ ವರ್ಷದಲ್ಲಿ ತಮ್ಮ ಮಕ್ಕಳನ್ನು KPS ಶಾಲೆಗೆ ಕಳುಹಿಸುವಂತೆ ಒತ್ತಾಯಿಸಲು ಶಾಲೆಗಳಿಗೆ ನೋಟಿಸ್ ನೀಡಲಾಗಿದೆ. ಇದರ ವಿರುದ್ಧ ಏ.10 ರಂದು ರಾಜ್ಯಮಟ್ಟದ ಬೃಹತ್ ಜನತಾ ಸಮಾವೇಶವ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿದೆ
ಕೊಡಗು ಜಿಲ್ಲೆಯಲ್ಲಿ ಪ್ರಮುಖವಾಗಿ ಸರ್ಕಾರಿ ಶಾಲೆಗೆ ಬರುವವರು ಬಡ ರೈತರು ಹಾಗೂ ಕಾಫಿ ಎಸ್ಟೇಟ್ಗಳಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರ ಮಕ್ಕಳು. ಪೋಷಕರು ಬೆಳಗ್ಗೆ 7ಕ್ಕೆ ಕೆಲಸಕ್ಕೆ ಹೋದರೆ ರಾತ್ರಿ 7ಕ್ಕೆ ಮನೆಗೆ ಬರುತ್ತಾರೆ ಹಾಗಾಗಿ ಊರಲ್ಲಿ ಶಾಲೆ ಇದ್ದರೆ ಮಕ್ಕಳು ಶಾಲೆಗೆ ಹೋಗಿ ಬರುವುದು ಸುಲಭವಾಗುತ್ತದೆ. ಇಲ್ಲವಾದರೆ ಕೂಲಿ ಮಾಡುವ ಕಾರ್ಮಿಕರು ಐದು ಆರು ಕಿಲೋ ಮೀಟರ್ ದೂರ ಮಕ್ಕಳನ್ನು ಕಳಿಸುವುದು ಅಸಾಧ್ಯವಾದ ಮಾತು, ಹಾಗಾಗಿ ಪ್ರತಿಯೊಂದು ಗ್ರಾಮದಲ್ಲೂ ಸರ್ಕಾರಿ ಶಾಲೆ ಉಳಿಯಬೇಕು. ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳು ಬೇಡವೇ ಬೇಡ.
ಸರ್ಕಾರದ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯ ಸಾಧಕ ಭಾದಕ ಕುರಿತು ನಾವು ತಾಲೂಕಿನ ಕೆಲವು ಶಾಲಾ ಮಕ್ಕಳ ಅಭಿಪ್ರಾಯವನ್ನು ಕಲೆ ಹಾಕಿದಾಗ ಮಕ್ಕಳಿಗೆ ಈ ಕುರಿತು ಮಾಹಿತಿ ಇಲ್ಲದಿರುವುದು ಕಂಡು ಬಂದಿದ್ದು, ಯುಎನ್‌ಸಿಆರ್‌ಸಿ ಮಕ್ಕಳ ಹಕ್ಕುಗಳ ಒಡಂಬಡಿಕೆ ಪ್ರಕಾರ ಸರ್ಕಾರದ ಯಾವುದೇ ನಿರ್ಧಾರಗಳು ಮಕ್ಕಳ ಹಿತದೃಷ್ಟಿಯಿಂದ ತೆಗೆದುಕೊಳ್ಳಬೇಕು ಮತ್ತು ಮಕ್ಕಳಿಗೆ ಮಾಹಿತಿ ಪಡೆಯುವ ಹಕ್ಕು ಇದ್ದು ಶಾಲೆಗಳ ವಿಲೀನ ಕುರಿತು ಮಕ್ಕಳಿಗೆ ಮಾಹಿತಿ ಇಲ್ಲದಿರುವುದು ಹಾಗೂ ಮಕ್ಕಳ ಅಭಿಪ್ರಾಯ ಕೇಳದಿರುವುದು ಮಕ್ಕಳ ಹಕ್ಕುಗಳ ಉಲ್ಲಂಘನೆ ಆಗಿದೆ. ಜತೆಗೆ ಸರ್ಕಾರದ ಈ ನಿರ್ಧಾರದಿಂದ ಹಲವಾರು ಮಕ್ಕಳು ಶಿಕ್ಷಣದಿಂದ ದೂರ ಉಳಿಯುವ ಅಪಾಯವಿದೆ.
ಕರ್ನಾಟಕ ಪಬ್ಲಿಕ್ ಶಾಲಾ ಮ್ಯಾಗ್ನೆಟ್ ಯೋಜನೆ. ಕರ್ನಾಟಕ ಸರ್ಕಾರ ಕೆಲವು ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಿ ಅತ್ಯುತ್ತಮ ಶೈಕ್ಷಣಿಕ ಪರಿಸರವನ್ನು ರಚಿಸಲು ಹಾಗೂ ಕೆಪಿಎಸ್ ಶಾಲೆ ಅಡಿಯಲ್ಲಿ ಹೆಚ್ಚು ಮಕ್ಕಳಿದ್ದಲ್ಲಿ ಅವರನ್ನು ಮಾನಸಿಕವಾಗಿಯೂ ಉತ್ತಮ ಪಡಿಸಲು ಈ ಯೋಜನೆಯನ್ನು ರೂಪಿಸಲಾಗಿದೆ ಇಂತಹ ಶಾಲೆಗಳಲ್ಲಿ ಎಲ್‌ಕೆಜಿಯಿಂದ ಪಿಯುಸಿವರೆಗೂ ಶಿಕ್ಷಣ ನೀಡಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸುವ ಪ್ರಯತ್ನ ಇದಾಗಿದೆ. ಡ್ರಾಪೌಟ್ ರೇಟ್ ಕಡಿಮೆ ಮಾಡಬಹುದಾಗಿದೆ. ಈ ಯೋಜನೆ ತುಂಬಾ ಚೆನ್ನಾಗಿ ಕಂಡರೂ ಕೊಡಗಿನಂಥ ಮಲೆನಾಡು ಪ್ರದೇಶಗಳಲ್ಲಿ ಇಂಥ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಕಷ್ಟ ಸಾಧ್ಯ. ದೂರ ದೂರದ ಪ್ರದೇಶದಲ್ಲಿ ಶಾಲೆಗಳಿದ್ದು ಮಕ್ಕಳನ್ನು ಹತ್ತಿರದ ಶಾಲೆಗೆ ಕರೆದುಕೊಂಡು ಬರುವುದು ಒಂದು ದೊಡ್ಡ ಸವಾಲು.
ಇದು ರಾಜ್ಯಸರ್ಕಾರ ಶಿಕ್ಷಣ ಸಂಸ್ಥೆಗಳ ಮೇಲೆ ಮಾಡುತ್ತಿರುವ ಒಂದು ಪ್ರಹಾರ. ಸರ್ಕಾರ ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು ಮತ್ತು ವಿದ್ಯಾರ್ಥಿಗಳ ಜೀವನದ ಮೇಲೆ ಆಟವಾಡುತ್ತಿದೆ. ರಾಜ್ಯ ಸರ್ಕಾರ ಈ ಕೂಡಲೇ ಈ ನಿಯಮವನ್ನು ವಾಪಸ್ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ಹೋರಾಟ ಅನಿವಾರ್ಯ.ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವುದು ದುರಂತ, ಕೊಡಗು ಗುಡ್ಡಗಾಡು ಪ್ರದೇಶ. ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳನ್ನು ಮುಚ್ಚಿದರೆ ಗ್ರಾಮೀಣ ಭಾಗದ ಮಕ್ಕಳು ಶಿಕ್ಷಣದಿಂದ ವಂಚನೆಗೆ ಒಳಗಾಗುತ್ತಾರೆ. ಮತ್ತೊಮ್ಮೆ ಪರಿಶೀಲನೆ ಮಾಡಿ ಯಾವುದೇ ಕಾರಣಕ್ಕೂ ಈಗಿರುವ ಸರ್ಕಾರಿ ಶಾಲೆಗಳನ್ನು ಮುಚ್ಚದಿರಲಿ.
ಕೆಪಿಎಸ್ ಶಾಲೆಗಳ ಸ್ಥಾಪನೆ ಬಗ್ಗೆ ಆತಂಕ ಬೇಕಿಲ್ಲ. ಎಲ‌್‌ಕೆಜಿಯಿಂದ ಪಿಯುಸಿ ತನಕ ಒಂದೇ ಕ್ಯಾಂಪಸ್‌ನಲ್ಲಿ ಗುಣಮಟ್ಟದ ಶಿಕ್ಷಣ ಕೊಡುವುದು ಸರ್ಕಾರದ ಗುರಿಯಾಗಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆ ಆಗದಂತೆ ಸರ್ಕಾರ ನೋಡಿಕೊಳ್ಳಲಿದೆ.