ಸ್ವಾತಂತ್ರ್ಯ ಹೋರಾಟಗಾರ ಕೊಳ್ಳಿಮಾಡ ಕರುಂಬಯ್ಯ
ಪೊನ್ನಂಪೇಟೆ:ತಾಲೂಕಿನ ಕೋಟೂರು ಗ್ರಾಮದ ಸ್ವಾತಂತ್ರ್ಯ ಹೋರಾಟಗಾರ ಕೊಳ್ಳಿಮಾಡ ಕರುಂಬಯ್ಯ ಅವರ ಸೇವೆಯನ್ನು ಸ್ಮರಿಸುವ ಮಹತ್ವದ ಹೆಜ್ಜೆಯಾಗಿ ಗೋಣಿಕೊಪ್ಪಲು ಬಸ್ ನಿಲ್ದಾಣಕ್ಕೆ ಅವರ ಹೆಸರು ನಾಮಕರಣ ಮಾಡಲಾಗಿದೆ.
ಗೋಣಿಕೊಪ್ಪದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಖಾಸಗಿ ಬಸ್ ನಿಲ್ದಾಣಕ್ಕೆ ಕೊಳ್ಳಿಮಾಡ ಕರುಂಬಯ್ಯ ಬಸ್ ನಿಲ್ದಾಣ ಎಂದು ಹೆಸರಿಡುವ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮದೇ ಆದ ಕೊಡುಗೆ ನೀಡಿದ ಇವರಿಗೆ ಶಾಶ್ವತ ಗೌರವ ಸಲ್ಲಿಸಲಾಗಿದೆ. ಈ ಐತಿಹಾಸಿಕ ನಿರ್ಧಾರದಿಂದ ಕೋಟೂರು ಗ್ರಾಮದ ಜನತೆ, ಕರುಂಬಯ್ಯ ಅವರ ಕುಟುಂಬಸ್ಥರು ಮತ್ತು ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಕಿಗ್ಗಟ್ಟ್ ನಾಡ್ ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಕಾಟಿಮಾಡ ಜಿಮ್ಮಿ ಅಣ್ಣಯ್ಯ, ನಮ್ಮ ಪ್ರೀತಿಯ ಅಜ್ಜ ಕೊಳ್ಳಿಮಾಡ ಕರುಂಬಯ್ಯ ಅವರ ಹೆಸರನ್ನು ಗೋಣಿಕೊಪ್ಪಲು ಬಸ್ ನಿಲ್ದಾಣಕ್ಕೆ ನಾಮಕರಣ ಮಾಡಿರುವುದು ಅತ್ಯಂತ ಸಂತಸ ಮತ್ತು ಹೆಮ್ಮೆಯ ವಿಷಯವಾಗಿದೆ. ಈ ಮೂಲಕ ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯುವಂತಾಗಿದೆ. ದೀರ್ಘಕಾಲದಿಂದ ಕೋಟೂರಿನ ಜನರು ಕಂಡಿದ್ದ ಕನಸು ಇದೀಗ ನನಸಾಗಿದೆ. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಸೇವೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಈ ಕ್ರಮ ಶ್ಲಾಘನೀಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದೇ ಸಂದರ್ಭದಲ್ಲಿ ಈ ಐತಿಹಾಸಿಕ ನಿರ್ಧಾರಕ್ಕೆ ಕಾರಣಕರ್ತರಾದ ವೀರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅವರಿಗೆ ಕೃತಜ್ಞತೆ ಸಲ್ಲಿಸಿರುವ ಅವರು, ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆಯನ್ನು ಉಳಿಸುವ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ ಎಂದು ತಿಳಿಸಿದ್ದಾರೆ.
ಕೋಟೂರು ಗ್ರಾಮದ ಹೆಮ್ಮೆಯ ಪುತ್ರರಾದ ಕೊಳ್ಳಿಮಾಡ ಕರಂಬಯ್ಯ ಅವರ ಹೆಸರು ಈಗ ಗೋಣಿಕೊಪ್ಪಲು ಬಸ್ ನಿಲ್ದಾಣದೊಂದಿಗೆ ಶಾಶ್ವತವಾಗಿ ಬೆಸೆದುಕೊಂಡಿದ್ದು, ಅವರ ದೇಶ ಸೇವೆಯ ಸ್ಮರಣೆ ಮುಂದಿನ ಪೀಳಿಗೆಗಳಿಗೂ ಪ್ರೇರಣೆಯಾಗಲಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.