ಗೋಣಿಕೊಪ್ಪ ವ್ಯಾಪ್ತಿಯಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಯ ಬಗ್ಗೆ ಪ್ರಮೋದ್ ಗಣಪತಿ ಅವರು ಪಟ್ಟಿ ಬಿಡುಗಡೆಗೊಳಿಸಿದರು. ಮಂಜುಳ, ಚೆಪ್ಪುಡೀರ ಧ್ಯಾನ್ ಸುಬ್ಬಯ್ಯ, ಸಫೂರ ಭಾನು ಇದ್ದರು.
- ಗೋಣಿಕೊಪ್ಪ ಗ್ರಾ.ಪಂ ೩೦ ತಿಂಗಳಲ್ಲಿ ೧.೬೦ ಕೋಟಿ ಅಭಿವೃದ್ಧಿ
- ಸುದ್ದಿಗೋಷ್ಠಿಯಲ್ಲಿ ಗ್ರಾ.ಪಂ. ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಮಾಹಿತಿ
ಗೋಣಿಕೊಪ್ಪ: ೩೦ ತಿಂಗಳ ಅವಧಿಯಲ್ಲಿ ೧.೬೦ ಕೋಟಿ ರೂ. ವೆಚ್ಚ ಅಭಿವೃದ್ಧಿ ಕಾಮಗಾರಿಗಳು ಗೋಣಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ ಎಂದು ಗ್ರಾ.ಪಂ. ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಅಭಿವೃದ್ಧಿ ಕಾಮಗಾರಿಗಳ ಪಟ್ಟಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಗೋಣಿಕೊಪ್ಪ ಪಟ್ಟಣ ಎದುರಿಸುತ್ತಿದ್ದ ಬಸ್ ನಿಲ್ದಾಣದ ಸಮಸ್ಯೆಯನ್ನು ನೀಗಿಸುವ ನಿಟ್ಟಿನಲ್ಲಿ ೪.೪೦ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಬಸ್ ನಿಲ್ದಾಣ ಆಧುನಿಕ ಶೈಲಿಯಲ್ಲಿ ನಿರ್ಮಾಣಗೊಂಡಿದೆ. ಸ್ವಾತಂತ್ರ್ಯ ಹೋರಾಟಗಾರ ಕೊಳ್ಳಿಮಾಡ ಸಿ.ಕರುಂಬಯ್ಯ ಹೆಸರಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ನಡೆದಿದೆ. ರಾಜ್ಯದಲ್ಲಿ ಪುತ್ಥಳಿ ಹೊಂದಿರುವ ಏಕಮಾತ್ರ ಬಸ್ ನಿಲ್ದಾಣವಾಗಿ ಗೋಣಿಕೊಪ್ಪ ಗುರುತಿಸಿಕೊಂಡಿದೆ. ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಸ್ವಾತಂತ್ರ್ಯ ಹೋರಾಟಗಾರ ಗಾಂಧಿವಾದಿ ಪಂದ್ಯಂಡ ಬೊಳ್ಯಪ್ಪ ಅವರ ಪುತ್ತಳಿ ಇತಿಹಾಸವನ್ನು ಸಾರುವಂತಿದೆ ಎಂದು ತಿಳಿಸಿದರು.
ಬಸ್ ನಿಲ್ದಾಣದಲ್ಲಿ ಸುಮಾರು ೪೦ ಲಕ್ಷ ರೂ. ಕಾಮಗಾರಿ ಬಾಕಿ ಉಳಿದೆ. ಪ್ರಯಾಣಿಕರು ಕೂರಲು ಸೂಕ್ತ ಬೆಂಚು ವ್ಯವಸ್ಥೆ ಮಾಡಿದ್ದು, ಗುಣಮಟ್ಟ ಕೊರತೆಯಿಂದಾಗಿ ಬೆಂಚು ಅನ್ನು ಅಳವಡಿಸಿರಲಿಲ್ಲ. ಗುಣಮಟ್ಟದ ಬೆಂಚು ಅಳವಡಿಸಲು ಗುತ್ತಿಗೆಯಲ್ಲಿ ನಿಯಮದಂತೆ ನಡೆಯಲಿದೆ. ಬಸ್ ನಿಲ್ಲುವ ಜಾಗದಲ್ಲಿರುವ ಕಟ್ಟೆಯನ್ನು ಸ್ಥಳೀಯ ಬಸ್‌ಗಳ ಅನುಕೂಲವಾಗುವಂತೆ ಕ್ರಮಕೈಗೊಳ್ಳಲಾಗುವುದು. ಪುತ್ಥಳಿಗೆ ಸುತ್ತಲೂ ಗಾಜಿನ ಕೋಣೆ ನಿರ್ಮಿಸಿ ಬಂದೋಬಸ್ತ್ ಮಾಡಲಾಗುವುದು. ಇದೆಲ್ಲವೂ ಯೋಜನೆಯಲ್ಲಿ ರೂಪಿಸಲಾಗಿದೆ ಎಂದು ತಿಳಿಸಿದರು. ಶಾಸಕರ ಅನುದಾನದಿಂದ ಬಸ್ ನಿರ್ಮಾಣ ಕಾರ್ಯ ರೂಪಿಸಲಾಗಿದೆ. ಜನರ ಬವಣೆ ನೀಗಿಸಿದ ತೃಪ್ತಿ ಇದೆ. ೧ ಕೋಟಿ ರೂ. ಹಳೆಯ ಅನುದಾನ ಇತ್ತು ಎಂದು ಹೇಳಿಕೆ ನೀಡಿರುವ ಸದಸ್ಯೆ ಕೊಣಿಯಂಡ ಬೋಜಮ್ಮ ಉತ್ತಪ್ಪ ಸೂಕ್ತ ದಾಖಲಾತಿ ನೀಡಲಿ ಎಂದು ಒತ್ತಾಯಿಸಿದರು.
ಬಿಜೆಪಿ ಬೆಂಬಲಿತರ ಆಡಳಿತ ಅವಧಿಯಲ್ಲಿ ನಡೆಯದಷ್ಟು ಕಾಮಗಾರಿ ನಡೆದಿದೆ. ೧ನೇ ವಾರ್ಡ್ ಅಂಗನವಾಡಿ ಕೇಂದ್ರವನ್ನು ಅಭಿವೃಧ್ದಿ ಪಡಿಸಿ ತುರ್ತು ಕಾಮಗಾರಿಯಾಗಿ ಉದ್ಘಾಟಿಸಲಾಗಿತ್ತು. ಬಾಕಿ ಉಳಿಸಿದ್ದ ೩ ಕೋಟಿ ತೆರಿಗೆಯನ್ನು ಸಂಗ್ರಹಿಸಿದ ಹೆಮ್ಮೆ ನಮಗಿದೆ. ವಿದ್ಯುತ್ ಬಿಲ್ ಬಾಕಿ ತೀರಿಸಲಾಗಿದೆ. ಪ್ರಸ್ತುತ ಪಂಚಾಯಿತಿಯಲ್ಲಿ ೮ ಲಕ್ಷ ಅನುದಾನ ಉಳಿಸಿದ್ದು, ಮುಂದಿನ ದಿನಗಳಲ್ಲಿ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ತಿಳಿಸಿದರು.
೧ನೇ ವಿಭಾಗಕ್ಕೆ ೨೪ ಲಕ್ಷ ರೂ, ೨ನೇ ವಿಭಾಗಕ್ಕೆ ೧೫ ಲಕ್ಷ, ೩ ನೇ ವಿಭಾಗಕ್ಕೆ ೩೩ ಲಕ್ಷ, ೬ ನೇ ವಿಭಾಗಕ್ಕೆ ೨೯, ೭ ನೇ ವಿಭಾಗಕ್ಕೆ ೧೧, ೮ ನೇ ವಿಭಾಗಕ್ಕೆ ೧೨ ಲಕ್ಷ, ಹೀಗೆ ಅನುದಾನ ಬಳಸಿಕೊಂಡು ಅಭಿವೃದ್ದಿ ಪಡಿಸಲಾಗಿದೆ. ಆಡಳಿತಕ್ಕೂ ಕೇವಲ ೩೫ ಲಕ್ಷ ಮಾತ್ರ ಅನುದಾನವಿತ್ತು. ೧.೬೦ ಕೋಟಿ ರೂ ವೆಚ್ಚದ ಕಾಮಗಾರಿ ನಡೆಸಲಾಗಿತ್ತು ಎಂದು ತಿಳಿಸಿದರು.
ಶಾಸಕರ ಅನುದಾನದಿಂದ ೨ ಸೇತುವೆ ನಿರ್ಮಾಣ, ಬೈಪಾಸ್ ರಸ್ತೆ ಅಭಿವೃದ್ದಿ, ತಡೆಗೋಡೆ ನಿರ್ಮಾಣ, ಮತ್ತೊಂದು ತಡೆಗೋಡೆ ನಿರ್ಮಾಣಕ್ಕೆ ೩೯ ಲಕ್ಷ ರೂ. ಇನ್ನಷ್ಟು ಬಿಡುಗಡೆಗೊಳ್ಳಲಿದೆ. ಸರ್ಕಾರಿ ಪ್ರಾಥಮಿಕ ಶಾಲೆಗೆ ೨೧ ಲಕ್ಷ ರೂ. ಅನುದಾನ ನೀಡಿ ಅಭಿವೃದ್ಧಿ ಪಡಿಸಲಾಗಿದೆ. ಕೀರೆ ಹೊಳೆಗೆ ನಿರ್ಮಿಸಿದ್ದ ಟ್ರ್ಯಾಶ್ ಬ್ಯಾರಿಕೇಡ್ ಯೋಜನೆಯಿಂದ ಕೀರೆ ಹೊಳೆ ನದಿ ಜರಿಯುವ ಗ್ರಾಮಸ್ಥರ ಕೃಷಿ ಭೂಮಿಗೆ ಸೇರುತ್ತಿದ್ದ ತ್ಯಾಜ್ಯಗಳನ್ನು ತಡೆಯುವಂತಾಗಿದೆ. ಇದೊಂದು ಉತ್ತಮ ಯೋಜನೆಯಾಗಿದೆ ಎಂದು ತಿಳಿಸಿದರು.
೨೦೨೪-೨೫ನೇ ಸಾಲಿನಲ್ಲಿ ೫೪.೪೮ ಲಕ್ಷ, ೨೦೨೫-೨೬ ರಲ್ಲಿ ೬೯.೦೮ ಲಕ್ಷ, ೨೦೨೬-೨೭ ನೇ ಸಾಲಿನಲ್ಲಿ ಈಗಾಗಲೇ ೩೬ ಲಕ್ಷ ರೂ. ಗಳ ಕಾಮಗಾರಿ ನಡೆದಿದೆ ಎಂದು ತಿಳಿಸಿದರು.
ಹಾಜರಾತಿ ತಿದ್ದಿದ ಬಿಜೆಪಿ ಬೆಂಬಲಿತ ಸದಸ್ಯರುಗಳು ಆಡಳಿತ ಅವಧಿಯ ಕೊನೆಯ ಸಾಮಾನ್ಯ ಸಭೆಗೆ ಹಾಜರಾಗಿದ್ದ ಬಿಜೆಪಿ ಬೆಂಬಲಿತ ಸದಸ್ಯರು ಸಭೆಯನ್ನು ನಡೆಸಲು ಬಿಡದೆ ಹೊರ ಬಂದಿದ್ದರು. ಚೈತ್ರ ಬಿ ಚೇತನ್, ಸೌಮ್ಯ ಬಾಲು, ಪುಷ್ಪ ಮನೋಜ್ ಹಾಜರಾತಿಗೆ ಸಹಿ ಹಾಕಿ ನಂತರ ವೈಟ್ನರ್ ಮೂಲಕ ತಿದ್ದಿದ್ದಾರೆ ಎಂದು ಆರೋಪಿಸಿದ ಅವರು, ಸಾರ್ವಜನಿಕ ಕಾರ್ಯಕ್ಕೆ ಸಭೆ ನಡೆಸಲು ಅವಕಾಶ ಮಾಡಿಕೊಡದೆ, ಸಾರ್ವಜನಿಕರೇ ಟೀಕೆ ಮಾಡುವಂತೆ ನಡೆದುಕೊಂಡಿರುವುದು ಬೇಸರ ತಂದಿದೆ ಎಂದರು.
ಬಸ್ ನಿಲ್ದಾಣ ಉದ್ಘಾಟನೆ ಸರ್ಕಾರದ ಶಿಷ್ಠಾಚಾರದಲ್ಲಿ ನಡೆದಿದೆ. ಸರ್ವ ಸದಸ್ಯರನ್ನು ಆಹ್ವಾನಿಸಲಾಗಿದೆ. ಪುತ್ಥಳಿ ಅನಾವರಣ, ನಾಮಫಲಕ ಅನಾವರಣ, ಉದ್ಘಾಟನೆ ನಡೆಸಲಾಗಿದೆ. ಶಾಸಕರ ಹುಟ್ಟುಹಬ್ಬ ಆಚರಣೆ ಪ್ರತ್ಯೇಕ ವೇದಿಕೆಯಲ್ಲಿ ನಡೆದಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷೆ ಮಂಜುಳ, ಸದಸ್ಯರಾದ ಚೆಪ್ಪುಡೀರ ಧ್ಯಾನ್ ಸುಬ್ಬಯ್ಯ, ಸಫೂರ ಭಾನು ಇದ್ದರು.