ಸುಂಟಿಕೊಪ್ಪ ಸಮೀಪದ ಗುಡ್ಡೆ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳೂರು ಗ್ರಾಮದಲ್ಲಿ ನೂತನ ದೇವಾಲಯ  
ಕೊಡಗು

ಬೇಡಿದ್ದನ್ನು ಕರುಣಿಸುವ ಚೌಡೇಶ್ವರಿ ದೇವಿ

ಪ್ರಮುಖ ಮುಖ್ಯಾಂಶಗಳು

  • ಬೆಳ್ಳೂರು ಗ್ರಾಮದಲ್ಲಿರುವ ಶಕ್ತಿ ಪೀಠ
  • ವರ್ಷಪೂರ್ತಿ ಸಾವಿರಾರು ಭಕ್ತರ ಆಗಮನದ ತಾಣ
ಸುಂಟಿಕೊಪ್: ಶಕ್ತಿ ಸ್ವರೂಪಿಣಿಯಾಗಿ, ಸಾಂಸ್ಕೃತಿಕ-ಧಾರ್ಮಿಕ ಪರಂಪರೆ ಪ್ರತೀಕವಾಗಿ, ನಂಬಿ ಬಂದ ಭಕ್ತರ ಕಷ್ಟ ದೂರ ಮಾಡಿ ಸುಖ-ಶಾಂತಿ ನೆಲೆಸುವಂತೆ ಮಾಡುವ ಶಕ್ತಿ ದೇವರೆ ಶ್ರೀ ಚೌಡೇಶ್ವರಿ ದೇವಿ. ಸುಂಟಿಕೊಪ್ಪ ಸಮೀಪದ ಗುಡ್ಡೆ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳೂರು ಗ್ರಾಮದಲ್ಲಿ ದೇವಿ ನೆಲೆಸಿದ್ದಾಳೆ.
ಪ್ರಕೃತಿ ಸೌಂದರ್ಯದ ನಡುವೆ ನೆಲೆಗೊಂಡಿರುವ ಈ ದೇವಾಲಯವು ಧಾರ್ಮಿಕ ಕ್ಷೇತ್ರವಾಗಿರುವ ಜತೆಗೆ ಗ್ರಾಮೀಣ ಸಂಸ್ಕೃತಿ ಮತ್ತು ಪರಂಪರೆಯನ್ನು ಜೀವಂತವಾಗಿಟ್ಟಿರುವ ಪವಿತ್ರ ತಾಣವಾಗಿದೆ. ಭಕ್ತಿ, ಶಾಂತಿ ಮತ್ತು ಆಧ್ಯಾತ್ಮಿಕ ಅನುಭವವನ್ನು ಬಯಸುವವರಿಗೆ ಗುಡ್ಡೆ ಹೊಸೂರಿನ ಶ್ರೀ ಚೌಡೇಶ್ವರಿ ದೇವಾಲಯವು ವಿಶೇಷ ಆಕರ್ಷಣೆಯಾಗಿದೆ. ಗ್ರಾಮ ದೇವತೆಯಾಗಿ ಆರಾಧಿಸುವ ಶ್ರೀ ಚೌಡೇಶ್ವರಿ ಅಮ್ಮನವರು ಗ್ರಾಮಸ್ಥರ ಬದುಕಿನ ಅವಿಭಾಜ್ಯ ಅಂಗವಾಗಿದ್ದು, ವರ್ಷಪೂರ್ತಿ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆಯಲು ಆಗಮಿಸುತ್ತಾರೆ.
ಚೌಡೇಶ್ವರಿ ದೇವಿಯನ್ನು ಶಕ್ತಿ ಸ್ವರೂಪಿಣಿಯಾಗಿ ಪೂಜಿಸಲಾಗುತ್ತದೆ. ಭಕ್ತರು ಕಷ್ಟಗಳು ನಿವಾರಣೆಯಾಗಲಿ, ಕುಟುಂಬದಲ್ಲಿ ಸುಖ-ಶಾಂತಿ ನೆಲೆಸಲಿ ಹಾಗೂ ಉತ್ತಮ ಆರೋಗ್ಯ ಮತ್ತು ಸಮೃದ್ಧಿ ದೊರಕಲಿ ಎಂದು ಹರಕೆ ಹೊತ್ತು ದೇವಿಯ ದರ್ಶನ ಪಡೆಯುತ್ತಾರೆ. ಭಕ್ತಿಯಿಂದ ಪ್ರಾರ್ಥಿಸಿದವರ ಇಷ್ಟಾರ್ಥ ಈಡೇರುತ್ತವೆ ಎಂಬ ನಂಬಿಕೆ ಭಕ್ತರಲ್ಲಿದೆ.
ಉದ್ಭವಗೊಂಡ ಕಲ್ಲಿನ ಮೂರ್ತಿ:
ನಾಲ್ಕು ಶತಮಾನಗಳ ಹಿಂದೆ ಈ ಪುಣ್ಯ ಸ್ಥಳದಲ್ಲಿ ದೇವಿಯ ಕಲ್ಲಿನ ರೂಪದ ವಿಗ್ರಹ ರೂಪತೆಳೆದಿದೆ. ಗ್ರಾಮದ ಹಿರಿಯರು ಉದ್ಭವಗೊಂಡ ಕಲ್ಲಿನ ಮೂರ್ತಿ ಚೌಡೇಶ್ವರಿ ದೇವಿಯ ರೂಪದಲ್ಲಿ ಆರಾಧಿಸುತ್ತಾರೆ. ಗ್ರಾಮದಲ್ಲೇ ಒಂದು ಪುಟ್ಟ ದೇವಾಲಯ ನಿರ್ಮಿಸಿ ಉದ್ಭವ ಮೂರ್ತಿಯನ್ನು ಪ್ರತಿಷ್ಠಾಪಿಸಿ ನಿತ್ಯ ಪೂಜೆ-ಪುನಸ್ಕಾರ ನೆರವೇರಿಸಲು ಆರಂಭಿಸಿದರು. ಈಗ ಬೆಳ್ಳೂರು ಗ್ರಾಮ ದೇವತೆಯಾಗಿ ಭಕ್ತರ ಆರಾಧ್ಯ ದೇವತೆಯಾಗಿದ್ದಾಳೆ. ದೇವಾಲಯದಲ್ಲಿ ಪ್ರತಿದಿನ ನಿತ್ಯಪೂಜೆಗಳು ನಡೆಯುತ್ತವೆ. ಮಂಗಳವಾರ, ಶುಕ್ರವಾರ ಹಾಗೂ ವಿಶೇಷ ಹಬ್ಬಗಳ ಸಂದರ್ಭದಲ್ಲಿ ಭಕ್ತರ ಸಂಖ್ಯೆ ಹೆಚ್ಚಿರುತ್ತದೆ. ನವರಾತ್ರಿ ಉತ್ಸವ, ವಾರ್ಷಿಕ ಜಾತ್ರೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಯುಗಾದಿ ನಂತರ ವಾರ್ಷಿಕೋತ್ಸವ: ಶ್ರೀ ಚೌಡೇಶ್ವರಿ ತಾಯಿಯ ದೇವಾಲಯ ಜತೆಗೆ ಪರಿವಾರ ದೇವರುಗಳಾದ ಗುಳಿಗ ಮಾರಮ್ಮ, ಬಸವೇಶ್ವರ ದೇವರು ಇಲ್ಲಿ ನೆಲೆ ನಿಂತಿದ್ದಾರೆ. ಚೌಡೇಶ್ವರಿ ಹಾಗೂ ಗುಳಿಗ ಮಾರಮ್ಮ, ಬಸವೇಶ್ವರ ದೇವಸ್ಥಾನದ ವಾರ್ಷಿಕೋತ್ಸವ ಪ್ರತಿ ವರ್ಷ ಯುಗಾದಿ ಹಬ್ಬದ ಒಂದು ವಾರದ ನಂತರ ನಡೆಸಲಾಗುತ್ತದೆ. ವಾರ್ಷಿಕೋತ್ಸವದಲ್ಲಿ ಗುಡ್ಡೆಹೊಸೂರು ಗ್ರಾಮ ಸೇರಿದಂತೆ ಬೆಳ್ಳೂರು, ಸುಣ್ಣದಕೇರೆ, ಚಿಕ್ಕಬೇಟ್ಟಗೇರಿ, ದೊಡ್ಡಬೆಟ್ಟಗೇರಿ, ಮಾದಪಟಣ್ಣ, ಬಸವನಹಳ್ಳಿ, ಅತ್ತೂರು, ಹಾರಂಗಿ ದೂರದ ಗ್ರಾಮಗಳಿಂದ ಗ್ರಾಮಸ್ಥರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ದೇವಿ ಹಾಗೂ ಪರಿವಾರ ದೇವರಿಗೆ ಪೂಜೆ ಸಲ್ಲಿಸುತ್ತಾರೆ.
ದೇವಿಯ ಪವಾಡ: ನಂಬಿ ಬಂದ ಭಕ್ತರನ್ನು ಚೌಂಡೇಶ್ವರಿ ಎಂದೂ ದೂರ ಮಾಡಿಲ್ಲ. ಕಷ್ಟಕಾರ್ಪಣ್ಯದಲ್ಲಿ ನೊಂದಿದ್ದ ಭಕ್ತರ ಕೈ ಹಿಡಿಯುವ ದೇವಿ ಇಷ್ಟಾರ್ಥಗಳನ್ನು ಈಡೇರಿಸುತ್ತಾಳೆ. ಗ್ರಾಮದಲ್ಲಿ ರೋಗ ರುಜಿನಗಳು ಕಂಡು ಬಂದರೆ, ಆರ್ಥಿಕವಾಗಿ ಹಿಂದುಳಿದಿದ್ದರೆ, ವ್ಯಾಪಾರ ವೃದ್ಧಿಯಾಗಿ, ಜಾನುವಾರುಗಳು ಕಾಣೆಯಾದರೆ ಜನರು ದೇವಿಯ ಮೊರೆ ಹೋಗುತ್ತಾರೆ. ಪುಣ್ಯ ಸನ್ನಿಧಿಗೆ ಭೇಟಿ ನೀಡಿ ಹರಕೆ ಕಟ್ಟಿಕೊಂಡು ದೇವಿಯನ್ನು ಆರಾಧಿಸುತ್ತಾರೆ. ಇತ್ತೀಚೆಗೆ 60 ಲಕ್ಷ ರೂ.ವೆಚ್ಚದಲ್ಲಿ ದೇವಾಲಯ ಜೀರ್ಣೋದ್ಧಾರಗೊಂಡಿದ್ದು, ಪ್ರವಾಸಿಗರನ್ನು ಸೆಳೆಯುತ್ತಿದೆ.