ಲಿಟಲ್ ಸ್ಕಾಲರ್ಸ್ ಅಕಾಡೆಮಿ ವತಿಯಿಂದ ಆಯೋಜಿಸಲಾದ ಸ್ಪೋರ್ಟ್ಸ್ ಸ್ಪೆಕ್ಟ್ರಾ 2026 ಕಾರ್ಯಕ್ರಮಕ್ಕೆ ಡಿವೈಸ್ ಪಿ ಮಹೇಶ್ ಕುಮಾರ್ ಚಾಲನೆ ನೀಡಿದರು. ಪ್ರಸನ್ನ, ಸತೀಶ್, ಮೀರಾ ಪೂಣಚ್ಚ, ಪ್ರತಿಮಾ , ಪೂಜಾ , ಸಜೇಶ್ ಭರತನ್ ಇದ್ದರು.
- ಪಾಲಕರಿಗೆ ಡಿವೈಎಸ್ ಪಿ.ಮಹೇಶ್ ಕುಮಾರ್ ಸಲಹೆ
ವಿರಾಜಪೇಟೆ : ಮಕ್ಕಳಿಗೆ ಮಹನೀಯರ ಆದರ್ಶವನ್ನು ನೀಡಿ, ಉತ್ತಮ ವ್ಯಕ್ತಿತ್ವ ರೂಪಿಸುವ ಜವಾಬ್ದಾರಿ ಪಾಲಕರ ಮೇಲಿದೆ ಎಂದು ವಿರಾಜಪೇಟೆ ಡಿವೈಎಸ್ ಪಿ.ಮಹೇಶ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಾಂಗಾಲ ಗ್ರಾಮದ ಎಲ್‌ಎಸ್‌ಎಯ ನೂತನ ಕ್ಯಾಂಪಸ್‌ನಲ್ಲಿ ವಿರಾಜಪೇಟೆ ಮಗ್ಗುಲ ಗ್ರಾಮದ ಲಿಟಲ್ ಸ್ಕಾಲರ್ಸ್ ಅಕಾಡೆಮಿ ವತಿಯಿಂದ ಆಯೋಜಿಸಲಾದ್ದ ಸ್ಪೋರ್ಟ್ಸ್ ಸ್ಪೆಕ್ಟ್ರಾ 2026 ಕಾರ್ಯಕ್ರಮಕ್ಕೆ ಶನಿವಾರ ಕ್ರೀಡಾ ಜ್ಯೋತಿಯನ್ನು ಬೆಳಗಿಸಿ ಮಾತನಾಡಿದರು.
ಮಕ್ಕಳಿಗೆ ಕೇವಲ ಪಠ್ಯದ ಶಿಕ್ಷಣವನ್ನು ನೀಡಿದರೆ ಸಾಲದು. ಅದರೊಂದಿಗೆ ಸಾತ್ವಿಕ ಶಿಕ್ಷಣವನ್ನು ನೀಡುವಂತಹ ಜವಾಬ್ದಾರಿ ಪಾಲಕರ ಮೇಲಿದೆ. ನಮ್ಮ ಸಮಾಜದ ಮೂಲ, ಸಂಪ್ರದಾಯ, ಸಂಸ್ಕೃತಿ, ಸಾಮಾಜಿಕ ಜವಾಬ್ದಾರಿ, ಇತರರಿಗೆ ತೊಂದರೆಯನ್ನು ನೀಡದಿರುವಂತಹ ರೀತಿ ಬದುಕುವುದನ್ನು ಮಕ್ಕಳಿಗೆ ಕಲಿಸಬೇಕು. ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್ ಬಳಕೆ ಗಣನೀಯವಾಗಿ ಹೆಚ್ಚುತ್ತಿದ್ದು ಪಾಲಕರು ಆದಷ್ಟು ಮಕ್ಕಳನ್ನು ಮೊಬೈಲ್ ಚಟದಿಂದ ದೂರ ಮಾಡಲು ಪ್ರಯತ್ನಿಸುವುದರೊಂದಿಗೆ ಭಾರತದ ಮಹಾನ್ ನಾಯಕರನ್ನು ಆದರ್ಶ ತೆಗೆದುಕೊಂಡು ತಾವು ಕೂಡ ಮಹಾನೀಯರಾಗುವ ಮನಸ್ಥಿತಿಯನ್ನು ಮಕ್ಕಳಲ್ಲಿ ತುಂಬಬೇಕು ಎಂದರು.
ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುಕಚಂಡ ಪ್ರಸನ್ನ ಸುಬ್ಬಯ್ಯ ಮಾತನಾಡಿ, ಲಿಟಲ್ ಸ್ಕಾಲರ್ಸ್ ಅಕಾಡೆಮಿಯು ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಮಾತ್ರ ನೀಡುತ್ತಿಲ್ಲ. ಅದರೊಂದಿಗೆ ಜೀವನ ಕೌಶಲಗಳನ್ನು ಕಲಿಸುವತ್ತ ಗಮನಹರಿಸುತ್ತಿರುವುದು ಪ್ರಸಂಶನೀಯ. ಶಿಕ್ಷಣ ಸಂಸ್ಥೆಯು ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡು ಮಕ್ಕಳಲ್ಲಿ ಸಮಾಜ ಸೇವಾ ಮನೋಭಾವ ಬಾಲ್ಯದಿಂದಲೇ ಬೆಳೆಸುತ್ತಿರುವುದು ಶ್ಲಾಘನೀಯ ಎಂದರು.
ಬಿಟ್ಟಂಗಾಲ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ಪಟ್ಟಡ ಸತೀಶ್, ಲಿಟಲ್ ಸ್ಕಾಲರ್ಸ್ ಅಕಾಡೆಮಿ ಮುಖ್ಯಸ್ಥರಾದ ಪೂಜಾ ಸಜೇಶ್, ಸಜೇಶ್ ಭರತನ್, ಕಾರ್ಯದರ್ಶಿ ಪ್ರತಿಮಾ, ಮುಖ್ಯ ಶಿಕ್ಷಕರಾದ ಮೀರ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಗೆ ತರಗತಿವಾರು ನಡೆಸಲಾದ ವಿವಿಧ ಕ್ರೀಡಾ ಚಟುವಟಿಕೆಗಳ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.