ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶರಾದ ಶುಭ ಅವರು ಉದ್ಘಾಟಿಸಿದರು.
- ಹೆಣ್ಣು ಮಕ್ಕಳು ಧೈರ್ಯದಿಂದ ಗುರಿ ತಲುಪಲು ಪ್ರಯತ್ನಿಸಿ
- ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶುಭ
ಮಡಿಕೇರಿ: ಹೆಣ್ಣು ಮಕ್ಕಳು ಕೀಳರಿಮೆ ಎಂಬ ಹಿಂಜರಿಕೆಯನ್ನು ಹೋಗಲಾಡಿಸಿ ಧೈರ್ಯದಿಂದ ತಮ್ಮ ಗುರಿ ತಲುಪಲು ಪ್ರಯತ್ನಿಸಬೇಕು ಎಂದು ಕೊಡಗು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶುಭ ಹೇಳಿದರು.
ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾನೂನು ಸೇವಾ ಪ್ರಾಧಿಕಾರ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯಡಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪೌಢಶಾಲಾ ವಿಭಾಗದಲ್ಲಿ ಗುರುವಾರ ನಡೆದ ೨೦೨೫-೨೬ನೇ ಸಾಲಿನ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜ.೨೪ ರಂದು ಹೆಣ್ಣು ಮಕ್ಕಳ ದಿನಾಚರಣೆಯಾಗಿ ಆಚರಿಸುತ್ತಿದ್ದೇವೆ. ಹಿಂದಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಸಿಗಬೇಕಾದಂತಹ ಗೌರವ, ಪ್ರಾಮುಖ್ಯತೆ ಕೊಡುತ್ತಿರಲಿಲ್ಲ. ಹಾಗಾಗಿ ಇಂತಹ ದಿನಾಚರಣೆ ಮಾಡುವುದರ ಮೂಲಕ ಜನರಿಗೆ ಹೆಣ್ಣು ಮಕ್ಕಳ ಮಹತ್ವ ಮತ್ತು ಪ್ರಾಮುಖ್ಯತೆ ತಿಳಿಯಲಿ ಎಂಬುದಕ್ಕಾಗಿ ಮಹಿಳೆಯರಿಗೆ, ಹೆಣ್ಣು ಮಕ್ಕಳಿಗೆ ಸಂಬಂಧಿಸಿದ ದಿನಾಚರಣೆಗಳು ಆಚರಣೆಗೆ ಬಂದಿತು ಎಂದರು.
ಹೆಣ್ಣು ಎಂದರೆ ಜವಾಬ್ದಾರಿ, ಹೊರೆ ಎಂಬ ಮನೋಭಾವ ಹಿಂದಿನ ಕಾಲದಿಂದಲೂ ಕೆಲವರ ಮನಸ್ಸಿನಲ್ಲಿ ಬೇರೂರಿದೆ. ಯಾವುದೇ ದಿನಾಚರಣೆ ಮಾಡಿದರೂ, ಎಷ್ಟೇ ಕಾನೂನುಗಳನ್ನು ತಂದರೂ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ನಿರಂತರವಾಗಿ ನಡೆಯುತ್ತಲೇ ಇದೆ. ಅದಕ್ಕಾಗಿ ಇಂದಿನ ಪ್ರಜೆಗಳೇ ನಾಳಿನ ಭವಿಷ್ಯ ಎನ್ನುವ ಹಾಗೆ, ಪ್ರಪಂಚವನ್ನು ಸಂಪೂರ್ಣವಾಗಿ ಬದಲಾಯಿಸಲು ಸಾಧ್ಯವೇ ಇಲ್ಲ. ಹಾಗಾಗಿ ಮೊದಲು ನಿಮ್ಮನ್ನು ನೀವು ಬದಲಾಯಿಸಿಕೊಳ್ಳಬೇಕು ಎಂದರು.
ಪ್ರತಿಯೊಬ್ಬರೂ ತಮ್ಮ ಆಲೋಚನೆ ಬದಲಾಯಿಸಿಕೊಳ್ಳಬೇಕು. ಕೀಳರಿಮೆ ಎಂಬ ಹಿಂಜರಿಕೆಯನ್ನು ಹೋಗಲಾಡಿಸಿ ಎಲ್ಲಾ ಹೆಣ್ಣು ಮಕ್ಕಳು ಧೈರ್ಯದಿಂದ ತಮ್ಮ ಗುರಿ ತಲುಪಲು ಪ್ರಯತ್ನಿಸಬೇಕು ಎಂದು ನುಡಿದರು.
ಈಗಿನ ಕಾಲದಲ್ಲಿ ಮಕ್ಕಳು ಕೇವಲ ದೈಹಿಕವಾಗಿಯೂ ಅಲ್ಲದೇ ಮಾನಸಿಕವಾಗಿಯೂ ಅಸುರಕ್ಷಿತರಾಗಿದ್ದಾರೆ. ಮೊಬೈಲ್‌ನಿಂದಾಗಿ ತಮ್ಮ ಸಮಯದ ಜೊತೆಗೆ ಮನಸ್ಸನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಈ ಸಮಯ ಓದಲು ಇರುವಂತಹ ಸಮಯ. ಒಮ್ಮೆ ಅವಕಾಶ ತಪ್ಪಿ ಹೋದರೆ, ನಂತರ ಇಂತಹ ಅವಕಾಶ ದೊರೆಯುವುದಿಲ್ಲ. ಸಿಕ್ಕಿದ ಸಮಯವನ್ನು ಚೆನ್ನಾಗಿ ಉಪಯೋಗಿಸಿಕೊಂಡು, ಮೊಬೈಲ್ ದೂರವಿಟ್ಟು, ಪುಸ್ತಕದ ಕಡೆ ಗಮನಹರಿಸಿ, ಮೊಬೈಲ್ ದುರ್ಬಳಕೆಯಿಂದ ತಲೆ ತಗ್ಗಿ ನಡೆಯಬೇಕಾಗಬಹುದು. ಆದರೆ, ಪುಸ್ತಕದ ಅರಿವಿನಿಂದ ತಲೆ ಎತ್ತಿ ನಡೆಯಬಹುದು ಎಂದು ತಿಳಿಸಿದರು.
ಕೊಡಗು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಪ್ರಸನ್ನಕುಮಾರ್ ಮಾತನಾಡಿ, ಈಗ ಇರುವಂತಹ ಸಮಯವನ್ನು ಬಳಸಿಕೊಂಡು ತಮ್ಮ ಉಜ್ವಲವಾದ ಭವಿಷ್ಯ ರೂಪಿಸಿಕೊಳ್ಳಿ. ಓದಿನ ಕಡೆ ಗಮನ ಹರಿಸಿದರೆ ಮುಂದೆ ಉತ್ತಮ ಪ್ರಜೆಗಳಾಗಬಹುದು ಎಂದರು.
ವೈಯಕ್ತಿಕವಾಗಿ ಅಥವಾ ಸಾರ್ವಜನಿಕವಾಗಿ ಸಮಸ್ಯೆ ಎದುರಾದರೆ ಅಥವಾ ತುರ್ತು ಸಂದರ್ಭಗಳಲ್ಲಿ ಮಕ್ಕಳ ಸಹಾಯವಾಣಿ, ತುರ್ತು ಸಹಾಯವಾಣಿಗಳಿಗೆ ಕರೆ ಮಾಡಿದರೆ ತಕ್ಷಣದ ಸಹಾಯ ದೊರಕಿಸಿಕೊಡುತ್ತೇವೆ. ಇಲಾಖೆ ಮೂಲಕ ಮಕ್ಕಳಿಗಾಗಿ ಅನೇಕ ಸೌಲಭ್ಯಗಳಿದ್ದು, ಅವುಗಳೆಲ್ಲದರ ಸದುಪಯೋಗ ಪಡೆದುಕೊಳ್ಳಬೇಕು. ಪ್ರತಿಯೊಂದು ಹೆಣ್ಣು ಕಡ್ಡಾಯ ಶಿಕ್ಷಣ ಪಡೆದುಕೊಳ್ಳಬೇಕು. ಯಾರೂ ಕೂಡ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಹೇಳಿದರು.
ಕೊಡಗು ಜಿಲ್ಲಾ ಮಕ್ಕಳ ವಿಶೇಷ ಪೊಲೀಸ್ ಘಟಕದ ಸುಮತಿ ಮಾತನಾಡಿ, ಪ್ರತಿಯೊಂದು ಹೆಣ್ಣು ಮಗುವು ಶಿಕ್ಷಣವನ್ನು ಪಡೆದು, ತಮ್ಮ ಗುರಿ ತಲುಪಬೇಕು. ಯಾವುದೇ ತೊಂದರೆಗೊಳದಾಗ ತುರ್ತು ಸಂದರ್ಭದಲ್ಲಿ ಮಕ್ಕಳ ಸಹಾಯವಾಣಿಗೆ ಅಥವಾ ತುರ್ತು ಸಹಾಯವಾಣಿಗೆ ಕರೆ ಮಾಡಿ ಸಹಾಯ ಪಡೆದುಕೊಳ್ಳಬಹುದು. ಹೆಣ್ಣು ಗಂಡು ನಡುವಿನ ಅಸಮಾನತೆ ಈ ಸಮಾಜದಲ್ಲಿ ಈಗಲೂ ಜೀವಂತವಾಗಿದೆ. ಅದನ್ನು ಹೋಗಲಾಡಿಸಬೇಕಾದರೆ ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಕ್ಕಳಿಗೆ ರಸಪ್ರಶ್ನೆ ಏರ್ಪಡಿಸಿ, ಬಹುಮಾನ ವಿತರಿಸಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕೇಶಿನಿ, ಕಾನೂನು ಸೇವಾ ಪ್ರಾಧಿಕಾರದ ಜೋಯಪ್ಪ, ಮಡಿಕೇರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಶಶಿಕಲಾ, ಕೊಡಗು ಜಿಲ್ಲಾ ವಿಶೇಷ ಮಕ್ಕಳ ಘಟಕದ ಸಿಬ್ಬಂದಿ ಸತ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಸಿಬ್ಬಂದಿಗಳು, ಅಕ್ಕಪಡೆ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.