ಸೋಮವಾರಪೇಟೆ ತಾಲೂಕಿನ ತೋಳೂರುಶೆಟ್ಟಳ್ಳಿ-ಹರಪಳ್ಳಿ ಗ್ರಾಮದ ಡಾ. ಬಿ. ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯ ವಾರ್ಷಿಕೋತ್ಸವದ ಅಂಗವಾಗಿ ಹೊರತಂದಿರುವ ಪುಷ್ಪಗಿರಿ ಸ್ಮರಣ ಸಂಚಿಕೆಯನ್ನು ಶಾಸಕ ಡಾ.ಮಂತರ್‌ಗೌಡ ಬಿಡುಗಡೆಗೊಳಿಸಿದರು. ಭವಾನಿ, ಚಂದ್ರಶೇಖರ್ ರೆಡ್ಡಿ, ಪರಮೇಶ್, ರುಬಿನಾ, ಚಂದ್ರಶೇಖರ್ ಇದ್ದರು. 
ಕೊಡಗು

ಹೆಣ್ಣು ಮಕ್ಕಳ ಶಿಕ್ಷಣದಿಂದ ಸಮಾಜಕ್ಕೆ ಬೆಳಕು

ಪ್ರಮುಖ ಮುಖ್ಯಾಂಶಗಳು

  • ಶಾಸಕ ಡಾ.ಮಂತರ್ ಗೌಡ ಅಭಿಪ್ರಾಯ
ಸೋಮವಾರಪೇಟೆ : ಹೆಣ್ಣು ಮಕ್ಕಳಿಗೆ ಉತ್ತಮ ಹಾಗೂ ಉನ್ನತ ವಿದ್ಯಾಭ್ಯಾಸ ನೀಡಿದಾಗ ಅದು ಕೇವಲ ಒಂದು ಕುಟುಂಬಕ್ಕಷ್ಟೇ ಅಲ್ಲ, ಸಂಪೂರ್ಣ ಸಮಾಜಕ್ಕೂ ಬೆಳಕಾಗುತ್ತದೆ. ಶಿಕ್ಷಣವೆಂಬುದು ಯಾರಿಂದಲೂ ಕಸಿದುಕೊಳ್ಳಲಾಗದ ಶಾಶ್ವತ ಸಂಪತ್ತು ಎಂದು ಶಾಸಕ ಡಾ.ಮಂತರ್ ಗೌಡ ಹೇಳಿದರು.
ಸಮೀಪದ ತೋಳೂರುಶೆಟ್ಟಳ್ಳಿ-ಹರಪಳ್ಳಿ ಗ್ರಾಮದ ಡಾ. ಬಿ. ಆರ್. ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಹಾಗೂ ಪುಷ್ಪಗಿರಿ ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭ ಹಾಗು ನೃತ್ಯ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಜ್ಞಾನವು ಭಯಕ್ಕೆ ಕಾರಣವಾಗಿದ್ದು, ಭಯ ಮತ್ತೆ ಅಜ್ಞಾನವನ್ನು ಹೆಚ್ಚಿಸುತ್ತದೆ. ಇವೆರಡನ್ನೂ ಒಂದೇ ಸಮಯದಲ್ಲಿ ದೂರ ಮಾಡುವ ಶಕ್ತಿ ವಿದ್ಯೆಗೆ ಮಾತ್ರ ಇದೆ ಎಂದು ಹೇಳಿದರು.
ಮಕ್ಕಳಿಗೆ ಉತ್ತಮ ವೇದಿಕೆ ಸಿಕ್ಕಾಗ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಪಾಲಕರು ಸಹಕಾರ ನೀಡಬೇಕು. ಮಕ್ಕಳಲ್ಲಿ ತಪ್ಪುಗಳು ಕಂಡುಬಂದರೆ ತಿದ್ದುವ ಹಾಗೂ ಮಾರ್ಗದರ್ಶನ ನೀಡುವ ಜವಾಬ್ದಾರಿ ಪಾಲಕರು ಹಾಗೂ ಶಿಕ್ಷಕರ ಮೇಲಿದೆ ಎಂದರು.
ಹೆಣ್ಣು ಮಕ್ಕಳಿಗೆ ಸಮಾನತೆ ಮತ್ತು ಉತ್ತಮ ಶಿಕ್ಷಣ ದೊರಕಿದರೆ ಸಮಾಜ ಇನ್ನಷ್ಟು ಪ್ರಗತಿಯತ್ತ ಸಾಗುತ್ತದೆ. ಗ್ರಾಮೀಣ ಭಾಗಗಳ ಶಾಲೆಗಳಲ್ಲಿಯೂ ದೊಡ್ಡ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಬೇಕು. ಇವುಗಳಿಂದ ಮಕ್ಕಳಲ್ಲಿನ ಪ್ರತಿಭೆ ಹೊರಹೊಮ್ಮಲು ಅವಕಾಶ ಸಿಗುತ್ತದೆ. ಶಿಕ್ಷಕರು ಮಕ್ಕಳ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವ ಬೆಳೆಸಬೇಕು ಎಂದು ಸಲಹೆ ನೀಡಿದರು.
ರಾಜ್ಯ ಸಂಪನ್ಮೂಲ ವ್ಯಕ್ತಿ ಹಾಗೂ ಸಂಸ್ಕೃತಿ ಚಿಂತಕ ಪೃಥ್ವಿರಾಜ್ ಹಾಲಹಳ್ಳಿ ಮಾತನಾಡಿ, ಮಕ್ಕಳ ಭವಿಷ್ಯ ನಿರ್ಮಾಣದಲ್ಲಿ ಕನಸು ಮತ್ತು ಗುರಿ ಮಹತ್ವದ ಪಾತ್ರ ವಹಿಸುತ್ತವೆ. ಕನಸನ್ನು ಸ್ಪಷ್ಟ ಗುರಿಯಾಗಿ ರೂಪಿಸಿಕೊಂಡು ಶ್ರಮಿಸಿದಾಗ ಮಾತ್ರ ಯಶಸ್ಸು ಸಾಧ್ಯ ಎಂದರು.
ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭವಾನಿ ಮಂಜುನಾಥ್, ಶಾಲಾ ಪ್ರಾಂಶುಪಾಲ ಚಂದ್ರಶೇಖರ್ ರೆಡ್ಡಿ, ಚೌಡ್ಲು ಕೃಷಿ ಪತ್ತಿನ ಸಹಕಾರ ಸಂಘದ ಕೆ.ಟಿ. ಪರಮೇಶ್, ಸಾಹಿತಿ ಎಂ.ಎ. ರುಬಿನಾ, ಪೋಷಕ ಪರಿಷತ್ ಅಧ್ಯಕ್ಷ ಬೋಪಯ್ಯ ಸೇರಿದಂತೆ ಹಲವರು ಇದ್ದರು.