ತೂಗು ಸೇತುವೆಗಳ ನಿರ್ಮಾತೃ ಗಿರೀಶ್ ಭಾರದ್ವಾಜ್ ಅವರಿಗೆ ಕಣಿವೆ ಗ್ರಾಮದಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಭಾರದ್ವಾಜ್ ಕೆ.ಆನಂದತೀರ್ಥ, ಕೆ.ಎನ್.ಸುರೇಶ್, ಕೆ.ಎಸ್. ಮಹದೇವ, ಮಂಜುನಾಥ ಸ್ವಾಮಿ, ಅನಂತರಾಮ, ಕೆ.ಆರ್.ಲೋಕೇಶ್ ಇತರರು ಇದ್ದರು.
- ಸಾಹಿತಿ ಭಾರದ್ವಾಜ್ ಕೆ. ಆನಂದತೀರ್ಥ ಬಣ್ಣನೆ
- ಶ್ರದ್ಧಾಂಜಲಿ ಕಾರ್ಯಕ್ರಮ
ಕುಶಾಲನಗರ: ಸೇತುವೆ ರಾಮ ಎಂದೇ ಪ್ರಸಿದ್ಧರಾಗಿರುವ ಗಿರೀಶ್ ಭಾರದ್ವಾಜ್ ಭಾರತದ ಗ್ರಾಮೀಣ ಪ್ರದೇಶಗಳನ್ನು ಸಂಪರ್ಕಿಸುವಲ್ಲಿ ಮತ್ತು ತೂಗು ಸೇತುವೆ ನಿರ್ಮಿಸುವಲ್ಲಿ ಕ್ರಾಂತಿಕಾರಿ ಕೊಡುಗೆ ನೀಡಿದ ಶ್ರೇಷ್ಠ ಇಂಜಿನಿಯರ್ ಹಾಗೂ ಸಾಮಾಜಿಕ ಕಾರ್ಯಕರ್ತ ಎಂದು ಸಾಹಿತಿ ಭಾರದ್ವಾಜ್ ಕೆ. ಆನಂದತೀರ್ಥ ಹೇಳಿದರು.
ಸಮೀಪದ ಕಣಿವೆ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ತೂಗು ಸೇತುವೆಗಳ ನಿರ್ಮಾತೃ ಗಿರೀಶ್ ಭಾರದ್ವಾಜ್‌ಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗಿರೀಶ್ ಭಾರದ್ವಾಜ್ ನಿರ್ಮಿಸಿದ ಸೇತುವೆಗಳಿಂದಾಗಿ ಮಳೆಗಾಲದಲ್ಲಿ ಬಾಹ್ಯ ಪ್ರಪಂಚದಿಂದ ಸಂಪರ್ಕ ಕಡಿದುಕೊಳ್ಳುತ್ತಿದ್ದ ನೂರಾರು ಹಳ್ಳಿಗಳ ಜನರಿಗೆ, ವಿದ್ಯಾರ್ಥಿಗಳಿಗೆ ಹಾಗೂ ರೈತರಿಗೆ ಸಾರಿಗೆ ವ್ಯವಸ್ಥೆ ಸುಲಭವಾಯಿತು. ಕನಿಷ್ಠ ವೆಚ್ಚದಲ್ಲಿ ಗರಿಷ್ಠ ಬಾಳಿಕೆ ಬರುವಂತೆ ಸೇತುವೆಗಳನ್ನು ನಿರ್ಮಿಸುವುದು ಇವರ ಶೈಲಿಯ ವಿಶೇಷತೆಯಾಗಿದೆ. ಕಣಿವೆಯಲ್ಲಿ ಇವರು ನಿರ್ಮಿಸಿಕೊಟ್ಟ ತೂಗು ಸೇತುವೆಯಿಂದಾಗಿಯೇ ಪಕ್ಕದ ಮೈಸೂರು ಜಿಲ್ಲೆಯ ಗ್ರಾಮಗಳ ಜತೆ ಸಂಪರ್ಕ ಸುಲಭವಾಯಿತು. ಅತ್ತ ಕಡೆಯವರು ಉದ್ಯೋಗಕ್ಕಾಗಿ ಈ ಭಾಗಕ್ಕೆ ಬರುವುದು ಸುಲಭವಾಯಿತು. ಎರಡೂ ಕಡೆಗಳಲ್ಲಿ ವೈವಾಹಿಕ ಸಂಬಂಧಗಳು ಬೆಳೆದು ಗ್ರಾಮ ಗ್ರಾಮಗಳ ಮಧ್ಯೆ ಬಾಂಧವ್ಯ ವೃದ್ಧಿಯಾಗಲು ಕಾರಣವಾಯಿತು.
1989ರಲ್ಲಿ ದಕ್ಷಿಣ ಕನ್ನಡದ ಅರಂಬೂರು ಎಂಬಲ್ಲಿ ಯಶಸ್ವಿಯಾಗಿ ತಮ್ಮ ಮೊದಲ ತೂಗು ಸೇತುವೆ ನಿರ್ಮಿಸಿದ ಗಿರೀಶ್ ಭಾರದ್ವಾಜ್, ಯಾವುದೇ ಅತ್ಯಾಧುನಿಕ ಯಂತ್ರೋಪಕರಣಗಳಿಲ್ಲದೆ, ಕಡಿಮೆ ವೆಚ್ಚದಲ್ಲಿ ಮತ್ತು ಸ್ಥಳೀಯ ವಸ್ತುಗಳನ್ನು ಬಳಸಿ ತೂಗು ಸೇತುವೆಗಳನ್ನು ನಿರ್ಮಿಸುವ ತಂತ್ರಜ್ಞಾನ ಬೆಳೆಸಿಕೊಂಡರು. ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ 140ಕ್ಕೂ ಹೆಚ್ಚು ತೂಗು ಸೇತುವೆಗಳನ್ನು ನಿರ್ಮಿಸಿದರು. ಅವರೇ ಹೇಳಿಕೊಂಡಂತೆ ನಾನು ನಿರ್ಮಿಸುವ ಸೇತುವೆಗಳು ಕೇವಲ ಸಿಮೆಂಟ್-ಕಬ್ಬಿಣದ ಸೇತುವೆಗಳಲ್ಲ, ಅವು ಎರಡು ದಂಡೆಯ ಜನರ ಭಾವನೆಗಳನ್ನು ಬೆಸೆಯುವ ಸಂಪರ್ಕ ಸೇತುವೆಗಳಾಗಿವೆ. ಕುಶಾಲನಗರದ ಕಾವೇರಿ ನಿಸರ್ಗಧಾಮ ಈ ಮಟ್ಟದಲ್ಲಿ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಗಿರೀಶ್ ಅವರ ತೂಗುಸೇತುವೆ ಕೊಡುಗೆಯೂ ಇದೆ ಎಂದರು.
ಕಣಿವೆ ಶ್ರೀ ರಾಮಲಿಂಗೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಕೆ.ಎನ್.ಸುರೇಶ್, ಪ್ರಧಾನ ಕಾರ್ಯದರ್ಶಿ ಕೆ.ಎಸ್.ಮಹದೇವ, ಉಪಾಧ್ಯಕ್ಷ ಮಂಜುನಾಥ ಸ್ವಾಮಿ, ಪ್ರಮುಖರಾದ ಅನಂತರಾಮ, ಕೆ.ಆರ್.ಲೋಕೇಶ್ ಇತರರು ಇದ್ದರು.