ಕೊಡಗರಹಳ್ಳಿ ವಿಘ್ನೇಶ್ವರ ಸೇವಾ ಸಮಿತಿಯ ವತಿಯಿಂದ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿ.
ಸುಂಟಿಕೊಪ್ಪ: ಕೊಡಗರಹಳ್ಳಿ ವಿಘ್ನೇಶ್ವರ ಸೇವಾ ಸಮಿತಿಯ ವತಿಯಿಂದ 8ನೇ ವರ್ಷದ ಗೌರಿ ಗಣೇಶೋತ್ಸವನ್ನು ಸೋಮವಾರ ಬೆಳಗ್ಗೆ ಧಾರ್ಮಿಕ ವಿಧಿ-ವಿಧಾನದೊಂದಿಗೆ ಗೌರಿ-ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.
ಬೆಳಗ್ಗೆ 11.30 ಗಂಟೆಗೆ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು. ಸಂಜೆ 6 ಗಂಟೆಯಿಂದ ಕೊಡಗರಹಳ್ಳಿ ಬೈತೂರಪ್ಪ ಭಜನಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಿತು. ರಾತ್ರಿ ನೆರೆದಿದ್ದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.
ಸಮೀಪದ 7ನೇ ಹೊಸಕೋಟೆ ಗಳೆಯರ ಬಳಗದ ವತಿಯಿಂದ 41ನೇ ಗಣೇಶ ಮೂರ್ತಿಯನ್ನು ಶ್ರೀ ಮಹಾಗಣಪತಿ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಯಿತು. ಎಮ್ಮೆಗುಂಡಿ ಶ್ರೀ ಬಾಲಗಣಪತಿ ಮಿತ್ರ ಮಂಡಳಿ ವತಿಯಿಂದ 2ನೇ ವರ್ಷದ ಗೌರಿ-ಗಣೇಶೋತ್ಸವವು ಅದ್ದೂರಿಯಾಗಿ ನಡೆಯಿತು.
ಸುಂಟಿಕೊಪ್ಪದ ಅಯ್ಯಪ್ಪಸ್ವಾಮಿ ದೇವಾಲಯದ ಆರ್ಚಕ ಗಣೇಶ್ ಭಟ್ ಅವರ ನೇತೃತ್ವದಲ್ಲಿ ಗಣಹೋಮ ಮತ್ತು ವಿಶೇಷ ಪೂಜಾ ವಿಧಿ-ವಿಧಾನಗಳು ನಡೆದವು. ಇದೇ ವೇಳೆ ಮಹಿಳೆಯರಿಂದ ಭಜನಾ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಮಹಾಪೂಜೆಯ ನಂತರ ತೀರ್ಥ ಪ್ರಸಾದದೊಂದಿಗೆ ಭಕ್ತಾದಿಗಳಿಗೆ ಲಘು ಉಪಹಾರ ನೀಡಲಾಯಿತು.
ಸಮೀಪದ ಹೊರೂರು ಮಠದಲ್ಲಿ ಸಾರ್ವಜನಿಕ ಶ್ರೀ ಗೌರಿ ಗಣೇಶೋತ್ಸವ ಸೇವಾ ಸಮಿತಿ ವತಿಯಿಂದ 25ನೇ ವರ್ಷದ ಅಂಗವಾಗಿ ಗೌರಿ-ಗಣೇಶ ಪ್ರತಿಷ್ಠಾಪನೆ ನಡೆಯಿತು.
ದಿನದ ಅಂಗವಾಗಿ ಸ್ಥಳ ಶುದ್ಧಿ, ಗಣಹೋಮ, ವಿವಿಧ ಅಲಂಕಾರ ಪೂಜೆಗಳು ನಡೆದು ಮದ್ಯಾಹ್ಮ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು.
ಕೆದಕಲ್ ಗ್ರಾಮದ ಮಹದೇಶ್ವರ ಈಶ್ವರ ದೇವಾಲಯದಲ್ಲಿ ಬಾಲಕ ಭಕ್ತ ಮಂಡಳಿ ವತಿಯಿಂದ 14ನೇ ವರ್ಷದ ಗಣೇಶೋತ್ಸವವು ಶ್ರದ್ಧಾ-ಭಕ್ತಿಯಿಂದ ನಡೆಯಿತು.
ಹರದೂರು, ಕಾನ್‌ಬೈಲ್, ಮತ್ತಿಕಾಡು ಸೇರಿದಂತೆ ವಿವಿಧೆಡೆಗಳಲ್ಲಿ ಗೌರಿ-ಗಣೇಶ ಮೂರ್ತಿಯ ಪ್ರತಿಷ್ಠಾಪನಾ ಪೂಜೆಗಳು ನಡೆದವು. ಸೋಮವಾರ ಪ್ರತಿಷ್ಠಾಪಿಸಿದ್ದ ಗೌರಿ-ಗಣೇಶ ಉತ್ಸವ ಮೂರ್ತಿಗಳ ವಿಸರ್ಜನೋತ್ಸವವು ಸೋಮವಾರ ಸಂಜೆ ನಡೆಯಿತು.
ಕಾಂಡನಕೊಲ್ಲಿಯ ಸಾರ್ವಜನಿಕ ಶ್ರೀ ಗೌರಿ-ಗಣೇಶೋತ್ಸವ ಸಮಿತಿಯ ವತಿಯಿಂದ ಸಂಜೆ ವಿದ್ಯುತ್ ದೀಪ ಅಲಂಕೃತ ಮಂಟಪದಲ್ಲಿ ಗೌರಿ ಗಣೇಶ ಉತ್ಸವ ಮೂರ್ತಿಯ ಭವ್ಯ ಮೆರವಣಿಯು ಗ್ರಾಮಾದ್ಯಂತ ಸಂಚರಿಸಿ ರಾತ್ರಿ ಗ್ರಾಮದ ಕೆರೆಯಲ್ಲಿ ವಿಸರ್ಜಿಸಲಾಯಿತು.
ಸಮೀಪದ ಕೆದಕಲ್ ಗ್ರಾಮದ ಮಹಾದೇವ ಈಶ್ವರ ದೇವಾಲಯದಲ್ಲಿ ಸಂಜೆ ನೂರಾರು ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ವಿಸರ್ಜನಾ ಮೆರವಣಿಗೆ ನಡೆದು ಸ್ಥಳೀಯ ಕೆರೆಯಲ್ಲಿ ವಿಸರ್ಜಿಸಲಾಯಿತು.