ಪೂಜಾರಿರ ಕೃಪಾ ದೇವರಾಜ್ 
ಕೊಡಗು

ಕೃಪಾ ದೇವರಾಜ್‌ಗೆ ಗೌರಮ್ಮ ದತ್ತಿ ಪ್ರಶಸ್ತಿ

ಮಡಿಕೇರಿ:
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿಗಳಲ್ಲಿ ಅತ್ಯಂತ ಪ್ರತಿಷ್ಠಿತವಾದ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿಯ ಗೌರವಕ್ಕೆ ಈ ಬಾರಿ ಸಾಹಿತಿ, ಕವಿಯತ್ರಿ ಪೂಜಾರಿರ ಕೃಪಾ ದೇವರಾಜ್ ಪಾತ್ರರಾಗಿದ್ದಾರೆ. ಇವರ ಮಂತ್ರ ಪುಷ್ಪ -ಕಥೆಗಳ ಕ್ಯಾನ್ವಾಸ್ ಕೃತಿಗೆ ಈ ಪ್ರಶಸ್ತಿ ಲಭ್ಯವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಕೊಡಗು ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪೂಜಾರಿರ ಕೃಪಾ ದೇವರಾಜ್ ಅವರು ಭಾವದ ಕದತಟ್ಟಿ ಕವನ ಸಂಕಲನ, ಮರ್ಮರ ಕಥಾ ಸಂಕಲನ (ಆಜೂರ ಪ್ರತಿಷ್ಠಾನದ ಪ್ರತಿಷ್ಠಿತ ರಾಜ್ಯ ಮಟ್ಟದ ಆಜೂರ ಪ್ರಶಸ್ತಿ ದೊರಕಿದೆ.) ಚೌಚೌ ಬಾತ್ ಲಲಿತ ಪ್ರಬಂಧಗಳ ಸಂಕಲನ, ಕಾರ್ಪಣ್ಯದ ಹೂವು ಕವನ ಸಂಕಲನ ಮಂತ್ರ ಪುಷ್ಪ ಕಥಾ ಸಂಕಲನ ಸೇರಿ 5 ಕೃತಿಗಳನ್ನು ರಚಿಸಿದ್ದಾರೆ. ಹಲವಾರು ಕವಿತೆಗಳನ್ನು ಕವಿಗೋಷ್ಠಿಗಳಲ್ಲಿ ವಾಚಿಸಿ, ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳಿಸಿದ್ದಾರೆ.
ಕೊಡಗಿನ ಗೌರಮ್ಮ ದತ್ತಿಯನ್ನು ಕನ್ನಡದ ಖ್ಯಾತ ಕತೆಗಾರ್ತಿ ಗೌರಮ್ಮ ಅವರ ಪುತ್ರ ಬಿ.ಜಿ. ವಸಂತ ಕಸಾಪ ಕೊಡಗು ಘಟಕದಲ್ಲಿ ಆರಂಭಿಸಿದ್ದು,
ಕೊಡಗಿನ ಲೇಖಕಿಯರು ಪ್ರಕಟಪಡಿಸಿದ ಉತ್ತಮ ಕೃತಿಗೆ ಪ್ರಶಸ್ತಿ ನೀಡಿ ಗೌರವಿಸುವ ಸಲುವಾಗಿ ಸ್ಥಾಪಿಸಲಾಗಿದೆ.