ಸಿದ್ದಾಪುರ ಗ್ರಾಮ ಪಂಚಾಯಿತಿ ಮತ್ತು ಪೌರಕಾರ್ಮಿಕರು ಸ್ವಚ್ಛ ಭಾರತ ವಾಹನ ಹಾಗೂ ಜೆಸಿಬಿ ಯಂತ್ರದ ಸಹಾಯದಿಂದ ತ್ಯಾಜ್ಯವನ್ನು ಸಂಪೂರ್ಣವಾಗಿ ತೆರವುಗೊಳಿಸಿ ನದಿ ತೀರವನ್ನು ಸ್ವಚ್ಛಗೊಳಿಸಿದ ಸಂದರ್ಭ.
- ಕರಡಿಗೋಡು ಗ್ರಾಮದ ಆಶ್ರಮ ಕಡವ್ ಬಳಿ ಸುರಿಯುತ್ತಿದ್ದ ಕಸ
ಸಿದ್ದಾಪುರ: ಕಾವೇರಿ ನದಿ ತೀರದಲ್ಲಿ ಸುರಿದಿದ್ದ ತ್ಯಾಜ್ಯವನ್ನು ಸಿದ್ದಾಪುರ ಗ್ರಾಮ ಪಂಚಾಯಿತಿ ಸಿಬ್ಬಂದಿ ಸಂಪೂರ್ಣವಾಗಿ ಸೋಮವಾರ ತೆರವುಗೊಳಿಸಿದೆ.
ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿಯಲ್ಲಿ ಜು.4ರಂದು ‘ಕಾವೇರಿ ಒಡಲು ಸೇರಲಿದೆ ತ್ಯಾಜ್ಯ..!’ ಶೀರ್ಷಿಕೆಯಡಿ ಪ್ರಕಟವಾದ ವಿಶೇಷ ವರದಿಗೆ ಎಚ್ಚೆತ್ತ ಸಿದ್ದಾಪುರ ಗ್ರಾಪಂ ಅಧಿಕಾರಿಗಳು ಹಾಗೂ ಪೌರಕಾರ್ಮಿಕರು ಸ್ವಚ್ಛ ಭಾರತ ವಾಹನ ಮತ್ತು ಜೆಸಿಬಿ ಯಂತ್ರದ ನೆರವಿನಿಂದ ಸ್ಥಳದಲ್ಲಿದ್ದ ತ್ಯಾಜ್ಯವನ್ನು ತೆರವುಗೊಳಿಸಿ ನದಿ ತೀರವನ್ನು ಸ್ವಚ್ಛಗೊಳಿಸಿದರು. ಇದರೊಂದಿಗೆ ಮಳೆ ನೀರಿನೊಂದಿಗೆ ತ್ಯಾಜ್ಯ ಕಾವೇರಿಗೆ ಸೇರುವ ಅಪಾಯ ತಪ್ಪಿಸಲಾಗಿದೆ.
ಮುಂದಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಮತ್ತೆ ತ್ಯಾಜ್ಯ ಸುರಿಯದಂತೆ ಸಿಸಿ ಕ್ಯಾಮರಾ ಅಳವಡಿಸುವುದು, ಎಚ್ಚರಿಕೆ ಫಲಕಗಳನ್ನು ಸ್ಥಾಪಿಸುವುದು ಹಾಗೂ ನಿಯಮಿತ ಪೊಲೀಸ್ ಗಸ್ತು ವ್ಯವಸ್ಥೆ ಕಲ್ಪಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಗೋಡು ಗ್ರಾಮದ ಆಶ್ರಮ ಕಡವ್ ಸಮೀಪದ ಮುಖ್ಯ ರಸ್ತೆಯ ತಡೆಗೋಡೆ ಬಳಿ ರಾತ್ರಿ ವೇಳೆ ನಡೆಯುತ್ತಿದ್ದ ಮೋಜು-ಮಸ್ತಿಯ ಬಳಿಕ ಬಿಯರ್ ಬಾಟಲಿಗಳು, ಮದ್ಯದ ಬಾಟಲಿಗಳು, ಆಹಾರದ ಪೊಟ್ಟಣಗಳು ಸೇರಿದಂತೆ ಮನೆ ಹಾಗೂ ವಿವಿಧ ಸಮಾರಂಭಗಳ ತ್ಯಾಜ್ಯವನ್ನು ಸುರಿಯಲಾಗುತ್ತಿತ್ತು. ಮಳೆಗಾಲದಲ್ಲಿ ಈ ತ್ಯಾಜ್ಯ ನೇರವಾಗಿ ಕಾವೇರಿ ನದಿಗೆ ಸೇರುವ ಅಪಾಯವಿತ್ತು. ಸಾರ್ವಜನಿಕರ ಆರೋಗ್ಯ ಹಾಗೂ ಜಲಚರಗಳಿಗೆ ಅಪಾಯಕಾರಿಯಾಗಿದ್ದ ತ್ಯಾಜ್ಯದ ರಾಶಿ ತೆರವುಗೊಂಡಿರುವುದರಿಂದ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.