ವಿಶ್ವ ಕ್ಷಯರೋಗ ನಿರ್ಮೂಲನಾ ದಿನಾಚರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಡಾ.ಸನತ್ ಕುಮಾರ್, ರಾಮಚಂದ್ರ ಕಾಮತ್, ಡಾ.ಸತೀಶ್ ಕುಮಾರ್, ಡಾ.ಲೋಕೇಶ್ ಇತರರಿದ್ದರು. 
ಕೊಡಗು

ಗಣೇಶೋತ್ಸವ: ಹತ್ತು ಮಂಟಪಗಳ ಸಾಮೂಹಿಕ ವಿಸರ್ಜನೆ

ಆದರ್ಶ್. ಎಂ.ಕೆ.

ಪ್ರಮುಖ ಮುಖ್ಯಾಂಶಗಳು

  • ಗಣೇಶೋತ್ಸವ: ಹತ್ತು ಮಂಟಪಗಳ ಸಾಮೂಹಿಕ ವಿಸರ್ಜನೆ
  • ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆ : ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗಿ
ಗೋಣಿಕೊಪ್ಪ: ಶ್ರದ್ಧಾಭಕ್ತಿಯಿಂದ ಪೂಜಿಸಲ್ಪಟ್ಟ ವಿಘ್ನೇಶ್ವರನಿಗೆ ಅಂತಿಮ ಪೂಜೆ ಸಲ್ಲಿಸಿ, ಪ್ರಾರ್ಥನೆಯೊಂದಿಗೆ ಗೋಣಿಕೊಪ್ಪ ನಗರದಲ್ಲಿ ಭಾವಪೂರ್ಣ ಬೀಳ್ಕೊಡುಗೆ ನೀಡಲಾಯಿತು.
ಗಣೇಶ ವಿಸರ್ಜನಾ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗುತ್ತಿದ್ದಂತೆ ಹಬ್ಬದ ಸಂಭ್ರಮ ಮನೆಮಾಡಿತ್ತು. ಗಣೇಶೋತ್ಸವ ಸಮಿತಿಗಳ ಪದಾಧಿಕಾರಿಗಳು, ಯುವಕರು, ಮಹಿಳೆಯರು, ಮಕ್ಕಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಗೋಣಿಕೊಪ್ಪದ ಗಣೇಶೋತ್ಸವದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹತ್ತು ಮಂಟಪಗಳು ಒಂದೇ ದಿನ ಸಾಮೂಹಿಕ ವಿಸರ್ಜನಾ ಮೆರವಣಿಗೆಯಲ್ಲಿ ಪಾಲ್ಗೊಂಡಿರುವುದು ಹೊಸ ದಾಖಲೆ ನಿರ್ಮಿಸಿದೆ.
ಈ ಹಿಂದೆ ಬಡಾವಣೆವಾರು ಪ್ರತ್ಯೇಕವಾಗಿ ನಡೆಯುತ್ತಿದ್ದ ವಿಸರ್ಜನಾ ಕಾರ್ಯಕ್ರಮಕ್ಕೆ ಸಾಮೂಹಿಕ ಸ್ವರೂಪ ನೀಡುವ ಪ್ರಯತ್ನ ಇದೀಗ ಫಲ ನೀಡಿದೆ. ಕಳೆದ ವರ್ಷ ನಾಲ್ಕು ಮಂಟಪಗಳು ಪಾಲ್ಗೊಂಡಿದ್ದರೆ, ಈ ಬಾರಿ ಆ ಸಂಖ್ಯೆ ಹತ್ತಕ್ಕೆ ಏರಿರುವುದು ಸಾಮೂಹಿಕ ಆಚರಣೆಯತ್ತ ಒಲವನ್ನು ತೋರಿಸಿದೆ.
ಗಣೇಶ ವಿಸರ್ಜನೆಗೆ ಹೊಸ ಮಾದರಿ ಕಲ್ಪಿಸುವ ಉದ್ದೇಶದಿಂದ ಪತ್ರಕರ್ತ ಜಗದೀಶ್ ಜೋಡುಬೀಟಿ, ಸತೀಶ್ ಸಿಂಗಿ ಹಾಗೂ ಗ್ರಾಪಂ ಮಾಜಿ ಸದಸ್ಯರಾದ ರಾಜೇಶ್ ಮತ್ತು ಸುರೇಶ್ ರೈ ನಡೆಸಿದ ಪ್ರಯತ್ನ ಕಳೆದ ವರ್ಷದಿಂದಲೇ ಹೊಸ ರೂಪ ಪಡೆಯತೊಡಗಿತ್ತು. ವಿವಿಧ ಬಡಾವಣೆಗಳ ಗಣೇಶೋತ್ಸವ ಸಮಿತಿಗಳನ್ನು ಒಂದೇ ವೇದಿಕೆಗೆ ತಂದು, ಒಗ್ಗಟ್ಟಿನಿಂದ ವಿಸರ್ಜನೆ ನಡೆಸುವ ಚಿಂತನೆಗೆ ಈ ಬಾರಿ ಮತ್ತಷ್ಟು ಬಲ ದೊರೆತಿದೆ.
ಪ್ರಸನ್ನ ಗಣಪತಿ ಸೇವಾ ಸಂಘ, ಭಗತ್‌ಸಿಂಗ್ ಯುವಕ ಸಂಘ, ಉಮಾಮಹೇಶ್ವರಿ ದೇವಸ್ದಾನ, ವಿನಾಯಕ ಭಕ್ತ ಮಂಡಳಿ, ನೇತಾಜಿ ಭಕ್ತ ಮಂಡಳಿ, ವಿವೇಕಾನಂದ ಬಡಾವಣೆ ನಾಗರಿಕ ವೇದಿಕೆ, ಹರಿಶ್ಚಂದ್ರಪುರ, ಇಂಡಿಯನ್ ಯುವಕ ಸಂಘ ಸೀಗೆತೋಡು, ಸಿದ್ದಿ ವಿನಾಯಕ ಯುವಸೇನೆ ಹರಿಚಂದ್ರಪುರ ವಿನಾಯಕ ಯುವಕ ಸಂಘ ಮೂರನೇ ವಿಭಾಗ, ಸೇರಿದಂತೆ ಹತ್ತು ಮಂಟಪಗಳು ಮೆರವಣಿಗೆಯಲ್ಲಿ ಭಾಗವಹಿಸಿದವು.
ಯಾವುದೇ ಗೊಂದಲಕ್ಕೆ ಅವಕಾಶ ನೀಡದೆ, ಪರಸ್ಪರ ಸಹಕಾರ, ಶಿಸ್ತು ಮತ್ತು ಏಕತಾಭಾವನೆಯೊಂದಿಗೆ ನಡೆದ ಸಾಮೂಹಿಕ ವಿಸರ್ಜನಾ ಕಾರ್ಯಕ್ರಮ ಶಾಂತಿಯುತವಾಗಿ ಸಂಪನ್ನಗೊಂಡಿತು.