ಸೋಮವಾರಪೇಟೆ ತಾಲೂಕಿನ ಗೌಡಳ್ಳಿ ನಡೆದ ಹಿಂದು ಕಪ್ ಫುಟ್ಭಾಲ್ ಪ್ರಶಸ್ತಿಯನ್ನು ಪಡೆದ ಗೌಡಳ್ಳಿ ಎಫ್‌ಸಿ ತಂಡ.
ಟೀಮ್ ಕೂಗೂರು ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿ
ಸೋಮವಾರಪೇಟೆ: ಹಿಂದು ಗೆಳೆಯರ ಬಳಗ ಗೌಡಳ್ಳಿ-ದೊಡ್ಡಮಳ್ತೆ ವತಿಯಿಂದ ಯುಗಾದಿ ಹಬ್ಬದ ಅಂಗವಾಗಿ ಗೌಡಳ್ಳಿ ಬಿಜಿಎಸ್ ಮೈದಾನದಲ್ಲಿ ಆಯೋಜಿಸಿದ್ದ 7ನೇ ವರ್ಷದ ಮುಕ್ತ ಫುಟ್ಬಾಲ್ ಹಿಂದು ಕಪ್‌ಅನ್ನು ಫ್ರೆಂಡ್ಸ್ ಗೌಡಳ್ಳಿ ಎಫ್‌ಸಿ ತಂಡ ತನ್ನದಾಗಿಸಿಕೊಂಡು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ಶುಕ್ರವಾರ ಸಂಜೆ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಟೀಮ್ ಕೂಗೂರು ತಂಡದ ವಿರುದ್ಧ ಗೌಡಳ್ಳಿ ಎಫ್‌ಸಿ ತಂಡ ಸಮಬಲ ಪ್ರದರ್ಶನ ನೀಡಿದ ನಂತರ ಪಂದ್ಯವು ಸಡನ್‌ಡೆತ್‌ಗೆ ತಲುಪಿತು. ಅಂತಿಮ ಕ್ಷಣದಲ್ಲಿ ಉತ್ತಮ ಪ್ರದರ್ಶನ ತೋರಿದ ಗೌಡಳ್ಳಿ ತಂಡ ಜಯ ಗಳಿಸಿ ಪ್ರಥಮ ಸ್ಥಾನ ಪಡೆದುಕೊಂಡಿತು. ಟೀಮ್ ಕೂಗೂರು ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟಿತು.
ಮೊದಲ ಸೆಮಿಫೈನಲ್‌ನಲ್ಲಿ ಟೀಮ್ ಕೂಗೂರು ತಂಡ ಕೋಟೆಯೂರು ಬಸವೇಶ್ವರ ಎಫ್‌ಸಿ ತಂಡವನ್ನು ಪೆನಾಲ್ಟಿ ಶೂಟ್‌ಔಟ್‌ನಲ್ಲಿ 4-2 ಗೋಲುಗಳ ಅಂತರದಲ್ಲಿ ಸೋಲಿಸಿ ಫೈನಲ್‌ಗೆ ಪ್ರವೇಶಿಸಿತು. ಮತ್ತೊಂದು ಸೆಮಿಫೈನಲ್‌ನಲ್ಲಿ ಗೌಡಳ್ಳಿ ಎಫ್‌ಸಿ ತಂಡ ಗೋಲ್ಡನ್ ಗೈಸ್ ತಂಡವನ್ನು 4-3 ಗೋಲುಗಳ ಅಂತರದಲ್ಲಿ ಸೋಲಿಸಿ ಅಂತಿಮ ಘಟ್ಟಕ್ಕೇರಿತು.
ಪ್ರಥಮ ಬಹುಮಾನವಾಗಿ 1.50 ಲಕ್ಷ ರೂ. ನಗದು ಹಾಗೂ ಆಕರ್ಷಕ ಟ್ರೋಫಿಯನ್ನು ಗೌಡಳ್ಳಿ ಎಫ್‌ಸಿ ತಂಡ ಪಡೆದುಕೊಂಡಿತು. ದ್ವಿತೀಯ ಬಹುಮಾನವಾಗಿ 1 ಲಕ್ಷ ರೂ. ನಗದು ಹಾಗೂ ಟ್ರೋಫಿಯನ್ನು ಟೀಮ್ ಕೂಗೂರು ತಂಡ ಪಡೆದುಕೊಂಡಿತು.
ಸಮಾರೋಪ ಸಮಾರಂಭದಲ್ಲಿ ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಕ್ರೀಡೆಗೆ ಉತ್ತೇಜನ ನೀಡುವುದು ಅತ್ಯಂತ ಅಗತ್ಯವಾಗಿದೆ. ಗೆಲುವು-ಸೋಲು ಕ್ರೀಡೆಯ ಭಾಗವಾಗಿದ್ದು, ಇಲ್ಲಿ ಭಾಗವಹಿಸಿರುವ ಪ್ರತಿಯೊಬ್ಬ ಆಟಗಾರನೂ ವಿಜಯಿಯೇ ಆಗಿದ್ದಾನೆ ಎಂದು ನಾನು ನಂಬುತ್ತೇನೆ. ಕ್ರೀಡೆಗಳು ಕೇವಲ ಮನರಂಜನೆಗಾಗಿ ಮಾತ್ರವಲ್ಲ, ಅದು ಶಾರೀರಿಕ ಆರೋಗ್ಯ, ಮಾನಸಿಕ ಸ್ಥೈರ್ಯ ಹೆಚ್ಚಿಸುತ್ತದೆ. ಗ್ರಾಮೀಣ ಕ್ರೀಡಾಪಟುಗಳಿಗೆ ಉತ್ತಮ ತರಬೇತಿ, ಸೌಲಭ್ಯಗಳು ಮತ್ತು ಅವಕಾಶಗಳನ್ನು ಒದಗಿಸುವುದು ನಮ್ಮ ಕರ್ತವ್ಯವಾಗಿದೆ. ಭವಿಷ್ಯದಲ್ಲಿ ಇಂತಹ ಪಂದ್ಯಾವಳಿಗಳಿಗೆ ಇನ್ನಷ್ಟು ಸಹಕಾರ ನೀಡುವ ಭರವಸೆ ನೀಡುತ್ತೇನೆ. ಗೌಡಳ್ಳಿ ಪ್ರಾಥಮಿಕ ಶಾಲಾ ಮೈದಾನದಲ್ಲಿ 9 ಎಕರೆ ಜಾಗವಿದ್ದು, ಕ್ರೀಡಾ ವಸತಿ ಶಾಲೆ ನಿರ್ಮಾಣಕ್ಕೆ ಸ್ಥಳೀಯ ಕ್ರೀಡಾಭಿಮಾನಿಗಳ ಬೇಡಿಕೆಯಿದ್ದು, ಕ್ರೀಡಾ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.
ರಾಜ್ಯ ಒಕ್ಕಲಿಗರ ಸಂಘದ ಜಿಲ್ಲಾ ನಿರ್ದೇಶಕ ಹರಪಳ್ಳಿ ರವೀಂದ್ರ, ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಬಿ.ಭರತ್‌ಕುಮಾರ್, ಗೆಳೆಯರ ಬಳಗದ ಅಧ್ಯಕ್ಷ ಕೆ.ಪಿ.ಆದರ್ಶ್, ರೈತ ಹೋರಾಟ ಸಮಿತಿ ಅಧ್ಯಕ್ಷ ಚಕ್ರವರ್ತಿ ಸುರೇಶ್ ಸೇರಿದಂತೆ ಹಲವಾರು ಗಣ್ಯರು ಇದ್ದರು.
ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಲಾಯಿತು. ಗೌಡಳ್ಳಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಗಣೇಶ್, ದೈಹಿಕ ಶಿಕ್ಷಣ ಶಿಕ್ಷಕ ಪ್ರವೀಣ್ ಹಾಗೂ ರಾಷ್ಟ್ರ ಮಟ್ಟದ ಜಾವೆಲಿನ್ ಥ್ರೋ ಕ್ರೀಡಾಪಟು ಡಿ.ಆರ್.ಅನಿಶ್ ಅವರನ್ನು ಸನ್ಮಾನಿಸಲಾಯಿತು.