ಪೊನ್ನಂಪೇಟೆ ಕೊಡವ ಸಮಾಜದಲ್ಲಿ ನಡೆದ ವಾಲಗತಾಟ್ ಕಲಿಕಾ ಶಿಬಿರವನ್ನು ಕೊಡವ ಸಮಾಜದ ಅಧ್ಯಕ್ಷ ಹಾಗೂ ಕೊಡವ ಜಾನಪದ ತಜ್ಞ ಕಾಳಿಮಾಡ ಎಂ. ಮೋಟಯ್ಯ ಉದ್ಘಾಟಿಸಿದರು. ಮುಲ್ಲೇಂಗಡ ಮಧೋಶ್ ಪೂವಯ್ಯ, ಕೋಟೆರ ಕಿಶನ್ ಉತ್ತಪ್ಪ, ಆಲೆಮಾಡ ಸುಧೀರ್, ಚೆಪ್ಪುಡೀರ ಕಾರ್ಯಪ್ಪ, ಪ್ರೊ. ಇಟ್ಟಿರ ಕಮಲಾಕ್ಷಿ ಬಿದ್ದಪ್ಪ, ಬಲ್ಲಡಿಚಂಡ ಕಸ್ತೂರಿ ಸೋಮಯ್ಯ ಮತ್ತಿತರರು ಇದ್ದರು.
ಪೊನ್ನಂಪೇಟೆ ಕೊಡವ ಸಮಾಜ ಹಾಗೂ ಕೊಡವ ಸಮಾಜ ಪೊಮ್ಮಕ್ಕಡ ಕೂಟ ಆಶ್ರಯದಲ್ಲಿ ನಡೆದ ಕೊಡವ ಜಾನಪದ ಕಲೆ ವಾಲಗತಾಟ್ ಕಲಿಕಾ ಉಚಿತ ಶಿಬಿರದಲ್ಲಿ 100 ಕ್ಕೂ ಅಧಿಕ ಮಕ್ಕಳು ಪಾಲ್ಗೊಂಡು ಪ್ರಯೋಜನ ಪಡೆದುಕೊಂಡರು. ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಮಂಗಳವಾರ ನಡೆದ ಶಿಬಿರವನ್ನು ಕೊಡವ ಸಮಾಜದ ಅಧ್ಯಕ್ಷ ಹಾಗೂ ಕೊಡವ ಜಾನಪದ ತಜ್ಞ ಕಾಳಿಮಾಡ ಎಂ. ಮೋಟಯ್ಯ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಕೊಡವ ಜಾನಪದ ಕುಣಿತವಾದ ಪುತ್ತರಿ ಕೋಲಾಟ್, ಪರೆಯಕಳಿ, ಕಪ್ಪೆಯಾಟ್ ಇದೆಲ್ಲದರ ಮೂಲ ಬೇರು ವಾಲಗತಾಟ್ ಆಗಿದೆ. ನಮ್ಮ ಮಕ್ಕಳು ಇದನ್ನು ಕಲಿತು ಬೆಳೆಸಬೇಕು, ಮಕ್ಕಳು ಕಲಿತಾಗ ಮಾತ್ರ ಮುಂದಿನ ಪೀಳಿಗೆಗೆ ಹಸ್ತಾಂತರವಾಗುತ್ತದೆ. ಜಾನಪದ ಆಟ್ ಪಾಟ್ ನಿರಂತರವಾಗಿ ಹಿರಿಯರಿಂದ ಮುಂದಿನ ಪೀಳಿಗೆಗೆ ಹೋಗುತ್ತಾ ಇರಬೇಕು ಮತ್ತು ಮೂಲ ರೂಪಕ್ಕೆ ಚ್ಯುತಿಯಾಗದಂತೆ ಜಾಗೃತಿಗೊಳಿಸುವ ಉದ್ದೇಶದಿಂದ ಇಂತಹ ಕಲಿಕಾ ಶಿಬಿರ ಆಯೋಜಿಸಲಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ತೂಕ್ ಬೊಳಕ್ ಕಲೆ ಮತ್ತು ಸಾಹಿತ್ಯ ಕ್ರೀಡಾ ಸಂಸ್ಥೆ ಅಧ್ಯಕ್ಷ ಮುಲ್ಲೇಂಗಡ ಮಧೋಶ್ ಪೂವಯ್ಯ ಮಾತನಾಡಿ, ಇಂತಹ ಶಿಬಿರದಿಂದ ಮೂಲ ವಾಲಗತಾಟ್ ಕಲಿತು ಆ ಪರಂಪರೆ ಮುಂದುವರೆಸಲು ಸಹಕಾರಿಯಾಗುತ್ತದೆ. ಕೊಡವ ವಾಲಗ ತಾಟ್‌ನಲ್ಲಿ 12 ವಿಧವಿದೆ. ಅದರಲ್ಲಿ ಆಟ್ ಕೊಟ್ಟ್, ಸುಗ್ಗಿಆಟ್, ಎರವ ಆಟ್, ಜೋಯಿ ಆಟ್, ಪುತ್ತರಿ ಕೋಲಾಟ್, ಬೊಳಕಾಟ್, ಉಮ್ಮತಾಟ್, ನರಿಯಾಟ್, ದೇವಾಟ್, ಪಾಂಬು ಆಟ್, ವಾಲಗ ಆಟ್ ಕೊಟ್ಟ್, ಮಾಪಿಳೆ ಆಟ್ ಇದ್ದು, ಇದರಲ್ಲಿ ಮಾಪಿಳೆ ಆಟ್ ಜೀವಂತ ಇಲ್ಲ. ಹಿರಿಯರಿಂದ ಕಿರಿಯರಿಗೆ ಸರಿಯಾಗಿ ಮೂಲ ಆಟ್ ಹಸ್ತಾಂತರವಾಗದೇ ಮತ್ತು ವಾಲಗ ಕಲಾವಿದÀರಿಗೂ ಇದನ್ನು ನುಡಿಸಲು ಬಾರದೇ ಉಳಿದು ಹೋಗಿದೆ. ತುಂಬಾ ಹಿರಿಯರಿಗೆ ಮಾತ್ರ ಮೂಲ ಕುಣಿತ ಮತ್ತು ಡೋಲು ಬಾರಿಸುವ, ವಾದ್ಯ ನುಡಿಸುವುದು ಗೊತ್ತಿದೆ. ಈ ಕುಣಿತ ಅಳವಿನಂಚಿನಲ್ಲಿದ್ದು ವಾಲಗ, ವಾದ್ಯ ಗೊತ್ತಿರುವ, ಅದಕ್ಕೆ ತಕ್ಕಂತೆ ಮೂಲ ಕುಣಿತ ಗೊತ್ತಿರುವ ಹಿರಿಯರನ್ನು ಕಂಡುಹಿಡಿದು ಈ ಜನಪದ ಕಲೆಯನ್ನು ಉಳಿಸಬೇಕಾಗಿದೆ. ವಾಲಗ ಪರಿಕರದಲ್ಲಿಯೂ ಅನುಕ್ರಮವಾಗಿ ಮುಂದಿನ ಸಾಲಿನಿಂದ 1 ಪರೆ, 2 ಡೋಲು, ತಾಳ ಅಥವಾ ಗೆಜ್ಜೆ, ಕೊಂಬು, ಶ್ರುತಿ, ಮೋರಿ ಇರಬೇಕು, ಇಂದಿನ ಯುವ ಪೀಳಿಗೆ ಮೂಲ ವಾಲಗತಾಟ್ ಬಿಟ್ಟು ಡೋಲು ವಾದ್ಯ ಕಲಾವಿದÀರನ್ನು ಮುಟ್ಟಿಕೊಂಡು ಕುಣಿಯುವುದು ಸರಿಯಲ್ಲ ಎಂದರು.
ಶಿಬಿರದಲ್ಲಿ ಕೊಡವ ಜಾನಪದ ಪರಿಣಿತ ಕಲಾವಿದರಾದ ಮೈಸೂರಿನ ಕೂತಂಡ ಮೊಣ್ಣಪ್ಪ, ಕುಲ್ಲಚಿರ ವಿನುತಾ ಕೇಸರಿ, ಸ್ಥಳೀಯರಾದ ಸುಳ್ಳಿಮಾಡ ಶಿಲ್ಪಾ, ಮೂಕಳೆರ ರಮೇಶ್, ಮಾಚಿಮಾಡ ಮಂದಣ್ಣ, ಕೊಣಿಯಂಡ ಮಂಜು ಮಾದಯ್ಯ ತರಬೇತಿ ನೀಡಿದರು.
ಪೊನ್ನಂಪೇಟೆ ಸಂತ ಅಂತೋನಿ, ಅಪ್ಪಚ್ಛಕವಿ, ಟಿ. ಶೆಟ್ಟಿಗೇರಿಯ ರೂಟ್ಸ್, ಶ್ರೀಮಂಗಲ ಜೆ.ಸಿ. ಶಾಲೆ, ಅರ್ವತೋಕ್ಲುವಿನ ಸರ್ವ ದೈವತಾ ಶಾಲೆಯ 100ಕ್ಕೂ ಅಧಿಕ ಮಕ್ಕಳು ಶಿಬಿರದಲ್ಲಿ ಪಾಲ್ಗೊಂಡಿದ್ದರು.
ಕೊಡವ ಸಮಾಜದ ಕಾರ್ಯದರ್ಶಿ ಕೋಟೆರ ಕಿಶನ್ ಉತ್ತಪ್ಪ, ಜಂಟಿ ಕಾರ್ಯದರ್ಶಿ ಆಲೆಮಾಡ ಸುಧೀರ್, ಖಜಾಂಚಿ ಚೆಪ್ಪುಡೀರ ಕಾರ್ಯಪ್ಪ, ನಿರ್ದೇಶಕರುಗಳಾದ ಕಳ್ಳಿಚಂಡ ಚಿಪ್ಪ ದೇವಯ್ಯ, ಕೊಣಿಯಂಡ ಸಂಜು ಸೋಮಯ್ಯ, ಅಜ್ಜಿಕುಟ್ಟಿರ ಪೃಥ್ವಿ ಸುಬ್ಬಯ್ಯ, ಮೂಕಳೆರ ಕಾವ್ಯ ಕಾವೇರಮ್ಮ, ಗುಮ್ಮಟ್ಟಿರ ಗಂಗಮ್ಮ, ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಪ್ರೊ. ಇಟ್ಟಿರ ಕಮಲಾಕ್ಷಿ ಬಿದ್ದಪ್ಪ, ಗೌರವ ಕಾರ್ಯದರ್ಶಿ ಬಲ್ಲಡಿಚಂಡ ಕಸ್ತೂರಿ ಸೋಮಯ್ಯ, ಜಂಟಿ ಕಾರ್ಯದರ್ಶಿ ಮೂಕಳೆರ ಆಶಾ ಪೂಣಚ್ಚ, ಖಜಾಂಚಿ ಮೂಕಳೆರ ಪಟ್ಟು ಲೀಲಾವತಿ, ನಿರ್ದೇಶಕಿಯರಾದ ಚೆಕ್ಕೇರ ವಾಣಿ ಸಂಜು, ಮಾಣಿಯಪಂಡ ಪಾರ್ವತಿ ಜೋಯಪ್ಪ, ಬಲ್ಯಮೀದೇರಿರ ಆಶಾ ಶಂಕರ್ ಈ ಸಂದರ್ಭ ಇದ್ದರು.