ಆರೋಗ್ಯ ಉಚಿತ ತಪಾಸಣಾ ಶಿಬಿರವನ್ನು ವಲಯ ಅರಣ್ಯಾಧಿಕಾರಿ ಪೂಜಾಶ್ರೀ ಉದ್ಘಾಟಿಸಿದರು. ಚೇತನ್, ಮಲ್ಲಯ್ಯ, ನಚಿಕೇತ್, ಅಭಿಜಿತ್, ಕಾರ್ತಿಕ್ ಮತ್ತಿತರರಿದ್ದರು. 
ಕೊಡಗು

ಜನರ ಆರೋಗ್ಯಕ್ಕಾಗಿ ಉಚಿತ ತಪಾಸಣಾ ಶಿಬಿರ

ಪ್ರಮುಖ ಮುಖ್ಯಾಂಶಗಳು

  • ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಹಿರಿಯ ತಜ್ಞ ವೈದ್ಯ ಚೇತನ್ ಮಾಹಿತಿ
ಶನಿವಾರಸಂತೆ: ಜನರ ಆರೋಗ್ಯದ ಹಿತದೃಷ್ಟಿಯಿಂದ ಅರಣ್ಯ ಇಲಾಖೆ ಮತ್ತು ಆರೋಗ್ಯ ಇಲಾಖೆ ಸಹಭಾಗಿತ್ವದಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯ ಉಚಿತ ತಪಾಸಣಾ ಅಭಿಯಾನ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಹಿರಿಯ ತಜ್ಞ ವೈದ್ಯ ಚೇತನ್ ತಿಳಿಸಿದರು.
ಅವರು ಬುಧವಾರ ಆಲೂರು ಸಿದ್ದಾಪುರ ಸಮುದಾಯ ಭವನದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಶಿಕ್ಷಣ ಸಂಸ್ಥೆ, ಬೋಧಕ ಆಸ್ಪತ್ರೆ, ಶನಿವಾರಸಂತೆ ವಲಯ ಅರಣ್ಯ ಇಲಾಖೆ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ರಕ್ತ ನಿಧಿ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಮೀಣ ಪ್ರದೇಶಗಳ ಆಸ್ಪತ್ರೆಗಳಲ್ಲಿ ವೈದ್ಯರು ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ ಸಾರ್ವಜನಿಕರು ಉತ್ತಮ ಬಾಂಧವ್ಯದಿಂದ ಸಹಕರಿಸಿದರೆ ಮಾತ್ರ ವೈದ್ಯರು ವರ್ಗಾವಣೆಗೊಳ್ಳದೆ ಉತ್ತಮ ಸೇವೆ ಸಲ್ಲಿಸಲು ಸಾಧ್ಯ, ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯೊಂದಿಗೆ ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದರು.
ಇಂದು ಎಲ್ಲರೂ ಆರೋಗ್ಯದ ಕಡೆಗೆ ಹೆಚ್ಚು ಗಮನಹರಿಸಬೇಕು, ಹಣ ಕಳೆದುಕೊಂಡರೆ ಮತ್ತೆ ಪಡೆಯಬಹುದು. ಆದರೆ ಒಮ್ಮೆ ಆರೋಗ್ಯ ಕಳೆದುಕೊಂಡರೆ ಪಡೆಯುವುದು ಕಷ್ಟ. ಹಾಗಾಗಿ ಆರೋಗ್ಯವನ್ನು ಯಾರೂ ಕಳೆದುಕೊಳ್ಳಬಾರದು. ಆಹಾರ ಪದ್ಧತಿ ಬದಲಾವಣೆ ಮಾಡಿಕೊಂಡು ಜೀವನ ನಡೆಸಬೇಕಿದೆ, ಇಂದು ಸಕ್ಕರೆ ಕಾಯಿಲೆ, ಬಿಪಿ, ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿದ್ದು, ಯಾವುದೇ ಆರೋಗ್ಯದಲ್ಲಿ ಏರುಪೇರಾದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು. ಯಾವುದನ್ನೂ ನಿರ್ಲಕ್ಷೃ ಮಾಡದೆ, ಇಂತಹ ಶಿಬಿರಗಳ ಸದುಪಯೋಗ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.
ಶನಿವಾರಸಂತೆ ವಲಯ ಅರಣ್ಯಧಿಕಾರಿ ಪೂಜಾಶ್ರೀ ಮಾತನಾಡಿ, ಇಂದು ಗ್ರಾಮೀಣ ಭಾಗದ ಜನರು ಅದರಲ್ಲೂ ರೈತರು ಹೆಚ್ಚು ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದು, ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದರು.
ಉಪ ವಲಯ ಅರಣ್ಯಧಿಕಾರಿ ಮಲ್ಲಯ್ಯ, ವನಪಾಲಕ ವೆಂಕಟೇಶ್, ರಮೇಶ್, ಪುನೀತ್, ದಂತ ವೈದ್ಯ ನಚಿಕೇತ್, ಮೂಳೆ ತಜ್ಞ ಅಭಿಜಿತ್, ಕಾರ್ತಿಕ್, ಮತ್ತಿತರರಿದ್ದರು.
ಶಿಬಿರದಲ್ಲಿ ಕಿವಿ, ಮೂಗು, ಗಂಟಲು ತಜ್ಞರು, ಚರ್ಮರೋಗ ತಜ್ಞರು, ಕೀಲು-ಮೂಳೆ ತಜ್ಞರು, ಸ್ತ್ರೀರೋಗ ತಜ್ಞರು, ದಂತ ವೈದ್ಯರು ಸೇರಿದಂತೆ ವಿವಿಧ ತಜ್ಞರು ಕಾಯಿಲೆಗಳಿಗೆ ಸಂಬಂಧ ರೋಗಿಗಳಿಗೆ ತಪಾಸಣೆ ನಡೆಸಿದರು. ಶಿಬಿರದಲ್ಲಿ ನೂರಾರು ಆಲೂರು ಸಿದ್ದಾಪುರ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಪಾಲ್ಗೊಂಡು ಶಿಬಿರದ ಲಾಭ ಪಡೆದುಕೊಂಡರು.
ಪೂಜಾಶ್ರೀ, ಮಲ್ಲಯ್ಯ, ವೆಂಕಟೇಶ್, ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ರಕ್ತದಾನ ಮಾಡಿದರು.