ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ 9ನೇ ಸುತ್ತಿನ ಕಾಲುಬಾಯಿ ರೋಗದ ಲಸಿಕಾ ಅಭಿಯಾನ ಭಿತ್ತಿಪತ್ರವನ್ನು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಬಿಡುಗಡೆ ಮಾಡಿದರು. ವಿ.ಪಿ. ಶಶಿಧರ್, ನಾಪಂಡ ಮುತ್ತಪ್ಪ, ನಾಪಂಡ ಮುದ್ದಪ್ಪ, ಡಾ. ಲಿಂಗರಾಜ್ ದೊಡ್ಡಮನಿ, ಡಾ. ಸಂಜಯ ಕುಮಾರ್ ಆರ್. ಸಿಂಧೆ ಮತ್ತಿತರರು ಇದ್ದರು. 
ಕೊಡಗು

ಕಾಲುಬಾಯಿ ಲಸಿಕಾ ಅಭಿಯಾನಕ್ಕೆ ಚಾಲನೆ

ಕುಶಾಲನಗರ
ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ 9ನೇ ಸುತ್ತಿನ ಕಾಲುಬಾಯಿ ರೋಗದ ಲಸಿಕಾ ಅಭಿಯಾನ ಕಾರ್ಯಕ್ರಮಕ್ಕೆ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಭಾನುವಾರ ಚಾಲನೆ ನೀಡಿದರು. ತೊರೆನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸಿದ್ದಲಿಂಗಪುರ ಗ್ರಾಮದಲ್ಲಿರುವ ಉದ್ಯಮಿ ನಾಪಂಡ ಮುತ್ತಪ್ಪ ಮತ್ತು ನಾಪಂಡ ಮುದ್ದಪ್ಪ ಅವರ ಹೈನುಗಾರಿಕೆ ಕ್ಷೇತ್ರದ ಆವರಣದಲ್ಲಿ ಹಸುಗಳಿಗೆ ಗೋಪೂಜೆ ಸಲ್ಲಿಸುವ ಮೂಲಕ ಅಭಿಯಾನ ಆರಂಭಿಸಲಾಯಿತು.
ಇದೇ ಸಂದರ್ಭ ಅಭಿಯಾನದ ಕರಪತ್ರಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಡಾ. ಮಂತರ್ ಗೌಡ ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚು ರೈತರು ಹೈನುಗಾರಿಕೆಯಲ್ಲಿ ತೊಡಗಿರುವುದರಿಂದ ರೈತರು, ಗ್ರಾಮಸ್ಥರು ತಾವು ಸಾಕಿದ ಎಲ್ಲಾ ರಾಸುಗಳಿಗೆ ಇಲಾಖೆಯಿಂದ ಉಚಿತವಾಗಿ ನೀಡುವ ಕಾಲುಬಾಯಿ ರೋಗದ ಲಸಿಕೆಯನ್ನು ಮುನ್ನೆಚ್ಚರಿಕೆ ಕ್ರಮವಾಗಿ ಹಾಕಿಸಬೇಕು. ಅವುಗಳ ಆರೋಗ್ಯ ಕಾಪಾಡಿಕೊಳ್ಳಲು ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಮಾತಾನಾಡಿ ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗ್ರಾಮಸ್ಥರು ಹೈನುಗಾರಿಕೆಗೆ ಒತ್ತು ನೀಡಿರುತ್ತಾರೆ. ಅದೇ ರೀತಿಯಲ್ಲಿ ಹಸುಗಳ ಚಿಕಿತ್ಸೆ ಕಡೆಗೆ ಹೆಚ್ಚು ಗಮನ ಹರಿಸಿ, ತಮ್ಮ ಅರ್ಥಿಕ ಮಟ್ಟದ ಸುಧಾರಣೆಯತ್ತಾ ಯೋಚಿಸಬೇಕು. ಉತ್ತಮ ಗುಣಮಟ್ಟದ ಹಾಲನ್ನು ಉತ್ಪಾದಿಸಲು ಮುಂದಾಗಬೇಕು ಎಂದು ಹೇಳಿದರು.
ದೊಡ್ಡ ಮಟ್ಟದಲ್ಲಿ ಹೈನುಗಾರಿಕೆಯಲ್ಲಿ ತೊಡಸಿಗಿರುವ ಸಿದ್ದಲಿಂಗಪುರದ ಉದ್ಯಮಿ ನಾಪಂಡ ಮುತ್ತಪ್ಪ ಮತ್ತು ನಾಪಂಡ ಮುದ್ದಪ್ಪ ಅವರನ್ನು ಶಾಸಕ ಡಾ. ಮಂತರ್ ಗೌಡ ಶಾಲು ಹೊದಿಸಿ ಗೌರವಿಸಿ ಸನ್ಮಾನಿಸಿದರು.
ಹಸುವಿಗೆ ಲಸಿಕೆ ನೀಡುವ ಮೂಲಕ ಪಶುವೈದ್ಯಾಧಿಕಾರಿ ಡಾ. ಸಂಜಯ ಕುಮಾರ್ ಆರ್. ಸಿಂಧೆ ಇಲಾಖೆಯ ವತಿಯಿಂದ ಹಸುಗಳಿಗೆ ಲಸಿಕಾ ಅಭಿಯಾನ ಆರಂಭಿಸಿದರು. ಜಿಲ್ಲೆಯ ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ. ಲಿಂಗರಾಜ್ ದೊಡ್ಡಮನಿ ಇಲಾಖೆಗೆ ಸಂಬAಧಿಸಿದ ಸವಿಸ್ತಾರವಾದ ಮಾಹಿತಿಯನ್ನು ಗ್ರಾಮಸ್ಥರಿಗೆ ಒದಗಿಸಿದರು.
ಪಶುವೈದ್ಯರಾದ ಡಾ. ಅಮೃತ್, ಪಶು ಪರಿವೀಕ್ಷಕ ಎನ್.ಎಂ. ಸುರೇಶ್, ಪನೀರ್ ಮತ್ತಿತರರು ಇದ್ದರು.